ಕರ್ನಾಟಕ

karnataka

ಹಾಸನ: ಮೊದಲ ಬಾರಿ ಮತದಾನ ಮಾಡಿದ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ - Bhattaraka Swamiji casts vote

By ETV Bharat Karnataka Team

Published : Apr 26, 2024, 12:10 PM IST

Updated : Apr 26, 2024, 12:53 PM IST

ಶ್ರವಣಬೆಳಗೊಳದ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಮೊದಲ ಬಾರಿ ಮತದಾನ ಮಾಡಿದರು.

ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಹಾಸನ:ದಕ್ಷಿಣ ಜೈನಕಾಶಿ, ಶ್ರವಣಬೆಳಗೊಳದ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರೂ ಆದ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ ಅವರು ನಗರದ 39ನೇ ಮತಗಟ್ಟೆ ಸಂಖ್ಯೆಯಲ್ಲಿ ಮತದಾನ ಮಾಡಿದರು. ಇದು ಇವರ ಮೊದಲ ಬಾರಿಯ ಮತದಾನವಾಗಿದೆ.

ಮತದಾನದ ಬಳಿಕ ಮಾತನಾಡಿದ ಶ್ರೀಗಳು, ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಯಾಗಿತ್ತು. ಆದರೆ, ಈ ವೇಳೆ ತಮ್ಮ ಹೆಸರು ಬದಲಾವಣೆ ಆಗಿದ್ದರಿಂದ ವಿಧಾನಸಭಾ ಚುನಾವಣೆ ವೇಳೆ ಮತದಾನ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಇದು ನನ್ನ ಮೊದಲ ಚುನಾವಣೆಯಾಗಿದೆ. ಮತಗಟ್ಟೆಗೆ ಆಗಮಿಸಿ ನಾನು ನನ್ನ ಮತ ಚಲಾಯಿಸಿದೆ. ನೀವು ಕೂಡ ತಪ್ಪದೇ ನಿಮ್ಮ ಮತ ಚಲಾಯಿಸಿರಿ ಎಂದು ರಾಜ್ಯದ ಮತದಾರರಿಗೆ ಮನವಿ ಮಾಡಿಕೊಂಡರು.

ಇನ್ನು ಮಾಜಿ ಪ್ರಧಾನಿ ದೇವೇಗೌಡರು ಕೂಡ ಪತ್ನಿ ಚನ್ನಮ್ಮ ಅವರೊಂದಿಗೆ ಹೊಳೆನರಸೀಪುರ ತಾಲೂಕು ಪಡುವಲಹಿಪ್ಪೆಗೆ ಆಗಮಿಸಿ ಮತದಾನ ಮಾಡಿದರು. ವಯಸ್ಸಾದ ಹಿನ್ನೆಲೆ ಮಾಜಿ ಪ್ರಧಾನಿ ಅವರು ಅಂಗರಕ್ಷಕರ ಸಹಾಯ ಪಡೆದು ಮತದಾನ ಮಾಡಿದ್ದಾರೆ. ಮತದಾನಕ್ಕೂ ಮುನ್ನ ಪಡುವಲಹಿಪ್ಪೆಗೆ ಮಾಜಿ ಪ್ರಧಾನಿ ಪತ್ನಿಯೊಂದಿಗೆ ಆಗಮಿಸಿ ಕೋದಂಡರಾಮೇಶ್ವರ, ಪರಮೇಶ್ವರ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಈ ಹಿನ್ನೆಲೆ ಪಡುವಲಹಿಪ್ಪೆ ಹಾಗೂ ಮತಗಟ್ಟೆ ಬೂತ್ ಸಂಖ್ಯೆ 251ರಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಇನ್ನೂ ಸಾರ್ವಜನಿಕರು ಸರದಿ ಸಾಲಿನಲ್ಲಿ ಬಂದು ಮತ ಚಲಾಯಿಸುತ್ತಿದ್ದಾರೆ.

ಹಾಸನದ ಹೊಳೆನರಸೀಪುರ ರಸ್ತೆಯಲ್ಲಿರುವ ಸಂತ ಫಿಲೋಮಿನಾ ಶಾಲೆಯ‌ ಮತಗಟ್ಟೆ ಸಂಖ್ಯೆ 208 ರಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಕೂಡ ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು. ಬೆಳಿಗ್ಗೆ 7 ರಿಂದ 11ರ ವರೆಗೆ ಶೇಕಡ 22.5 ರಷ್ಟು ಮತದಾನ ಆಗಿದೆ.

ಹಾಸನ ಕ್ಷೇತ್ರದ ಶಾಸಕ ಹೆಚ್​.ಪಿ.ಸ್ವರೂಪ್‌ ಪ್ರಕಾಶ್ ಕೂಡ ಪತ್ನಿ ಶ್ವೇತಾ ಜೊತೆ ಆಗಮಿಸಿ ನಗರದ ರಾಯಲ್ ಅಪೊಲೋ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 121ರಲ್ಲಿ ಹಕ್ಕು ಚಲಾಯಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಕೂಡ ಹೊಳೆನರಸೀಪುರ ಸರ್ಕಾರಿ ಪ್ರೌಢ ಶಾಲೆಯ ಮತಗಟ್ಟೆ ಸಂಖ್ಯೆ 282ರಲ್ಲಿ ಪತ್ನಿ ಅಕ್ಷತಾ, ತಾಯಿ ಅನುಪಮಾ ಮಹೇಶ್ ಮತ್ತು ಮಾವನ ಜೊತೆ ಬಂದು ಮತದಾನ ಮಾಡಿದರು.

ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಕೂಡ ಪಡುವಲ ಹಿಪ್ಪೆಯಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.

ಇದನ್ನೂ ಓದಿ:ಮಂಗಳೂರು: ಮೊದಲ ಬಾರಿಗೆ ಮತದಾನ ಮಾಡುವ ಮೂಲಕ ಸಂತಸ ಹಂಚಿಕೊಂಡ ಯುವತಿಯರು - First Time Voters

Last Updated : Apr 26, 2024, 12:53 PM IST

ABOUT THE AUTHOR

...view details