ಕರ್ನಾಟಕ

karnataka

'ಒಳಪೆಟ್ಟಿನ ಆತಂಕವಿಲ್ಲ, 5 ಲಕ್ಷ ಲೀಡ್​ನಲ್ಲಿ ಗೆಲ್ಲುತ್ತೇನೆ': ನಾಮಪತ್ರ ಸಲ್ಲಿಸಿದ ಶೋಭಾ ಕರಂದ್ಲಾಜೆ - BENGALURU NORTH CONSTITUENCY

By ETV Bharat Karnataka Team

Published : Apr 3, 2024, 12:25 PM IST

Updated : Apr 3, 2024, 1:18 PM IST

ಲೋಕಸಭಾ ಚುನಾವಣೆಯಲ್ಲಿ 5 ಲಕ್ಷಕ್ಕೂ ಅಧಿಕ ಲೀಡ್​ನಿಂದ ನಾನು ಗೆಲ್ಲುವ ವಿಶ್ವಾಸವಿದೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ

ಶೋಭಾ ಕರಂದ್ಲಾಜೆ

ಬೆಂಗಳೂರು:ಮೂರನೇ ಬಾರಿಗೆ ಲೋಕಸಭೆ ಪ್ರವೇಶಕ್ಕೆ ಮುಂದಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ಕಳೆದ ಎರಡು ಸಲ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಅವರು ಆಯ್ಕೆಯಾಗಿದ್ದರು.

ಸಂಜಯ್ ನಗರದಲ್ಲಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ ಬೆಳಗ್ಗೆ 9 ಗಂಟೆಗೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪೂಜೆ ಸಲ್ಲಿಸಿದರು. ನಂತರ 10.00 ಗಂಟೆಗೆ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಇರುವ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ರೋಡ್ ಶೋ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ಆಗಮಿಸಿದ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಕೆ ಮಾಡಿದರು. ಮಾಜಿ ಸಚಿವರಾದ ಬೈರತಿ ಬಸವರಾಜ್, ಗೋಪಾಲಯ್ಯ, ಮುನಿರಾಜು ಹಾಗೂ ಜೆಡಿಎಸ್ ನಾಯಕ ಜವರಾಯಿಗೌಡ ಜೊತೆ ಶೋಭಾ ಕರಂದ್ಲಾಜೆ ಆಗಮಿಸಿದ್ದರು.

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಶೋಭಾ ಕರಂದ್ಲಾಜೆ, ''ನಮ್ಮ ಕ್ಷೇತ್ರದಲ್ಲಿ 32 ಲಕ್ಷ ಮತದಾರರಿದ್ದಾರೆ, 3335 ಬೂತ್ ಇವೆ, ಇಷ್ಟು ದೊಡ್ಡ ಕ್ಷೇತ್ರದಲ್ಲಿ ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಸದಾನಂದಗೌಡರು ದೊಡ್ಡ ಅಂತರದಿಂದ ಗೆದ್ದಿದ್ದರು. ಈಗ ಬೈರತಿ ಬಸವರಾಜ್, ಗೋಪಾಲಯ್ಯ ಅವರಂತಹ ನಾಯಕರ ಆಗಮನವು ನಮಗೆ ಹೆಚ್ಚಿನ ಶಕ್ತಿ ನೀಡಿದೆ. ಜೆಡಿಎಸ್ ಪಕ್ಷವು ಎನ್​ಡಿಎಗೆ ಸೇರಿರುವುದು ನಮ್ಮ ಬಲ ಹೆಚ್ಚಿಸಿದೆ. ಮೋದಿಯನ್ನು ಮತ್ತೆ ಪ್ರಧಾನಿಯಾಗಿ ನೋಡಲು ಜನತೆ ಬಯಸಿದ್ದಾರೆ. ಮನೆ ಮನೆಗೆ ಹೋಗಿ ಮೋದಿ ಸಾಧನೆ ಜನತೆಗೆ ತಿಳಿಸಬೇಕು, ಮತದಾನದ ಪ್ರಮಾಣ ಹೆಚ್ಚಿಸಬೇಕು ಇದು ನಮ್ಮ ಗುರಿ'' ಎಂದರು.

ಶೋಭಾ ಕರಂದ್ಲಾಜೆ

''ಸದಾನಂದಗೌಡರು ನಮ್ಮ ಜೊತೆ ಎಲ್ಲಾ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಇಂದು ಪಕ್ಷದಿಂದ ಚಾಮರಾಜನಗರದ ನಿಯೋಜನೆ ಮಾಡಿದ್ದಾರೆ. ಹಾಗಾಗಿ, ಅವರು ಅಲ್ಲಿ ಹೋಗಿದ್ದಾರೆ. ಎಸ್.ಟಿ. ಸೋಮಶೇಖರ್ ನಿರ್ಧಾರ ಇನ್ನೂ ತಿಳಿಸಿಲ್ಲ. ಅವರು ಬಿಜೆಪಿ ಶಾಸಕರು, ಹಾಗಾಗಿ ಬಿಜೆಪಿಗೆ ಕೆಲಸ ಮಾಡಬೇಕು ಎಂದು ಕೇಳುತ್ತೇನೆ. ಮನಸ್ಸು, ದೇಹ ಒಂದೇ ಕಡೆ ಇರಿಸಿಕೊಂಡು ಕೆಲಸ ಮಾಡಿ ಎನ್ನುತ್ತೇನೆ'' ಎಂದು ಹೇಳಿದರು.

''ಕಾಂಗ್ರೆಸ್ ಸೋಲುವ ಭೀತಿಯಲ್ಲಿದೆ. ಹಾಗಾಗಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಕೆಲಸ ಸ್ಥಗಿತವಾಗಿದೆ. ನಮ್ಮ ಶಾಸಕರಿಗೆ ಅನುದಾನ ನೀಡ್ತಿಲ್ಲ, ಅವರ ಶಾಸಕರಿಗೂ ಸರಿಯಾಗಿ ಅನುದಾನ ಸಿಕ್ಕಿಲ್ಲ'' ಎಂದು ವಾಗ್ದಾಳಿ ನಡೆಸಿದರು.

ಪ್ರಮುಖ ನಾಯಕರ ಗೈರು:ರಾಜ್ಯದ ಎಲ್ಲಾ 28 ಕ್ಷೇತ್ರಗಳಿಗೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ಯಾವ ಯಾವ ನಾಯಕರು ಹಾಜರಿರಬೇಕು ಎನ್ನುವ ನಿರ್ಧಾರವಾಗಿದ್ದು, ಮುಖಂಡರನ್ನು ಹಂಚಿಕೆ ಮಾಡಲಾಗಿದೆ. ಅದರಂತ ಶೋಭಾ ಕರಂದ್ಲಾಜೆ ಅವರು ನಾಮಪತ್ರ ಸಲ್ಲಿಸುವ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ, ಮಾಜಿ ಸಚಿವ ಬೈರತಿ ಬಸವರಾಜ್, ಚಲವಾದಿ ನಾರಾಯಣಸ್ವಾಮಿ ಅವರು ಹಾಜರಿರುವಂತೆ ಪಕ್ಷ ಸೂಚಿಸಿತ್ತು. ಆದರೆ, ಇದರಲ್ಲಿ ಅಶೋಕ್ ಮತ್ತು ಅಶ್ವತ್ಥನಾರಾಯಣ ಆಗಮಿಸಲಿಲ್ಲ, ಅವರ ಬದಲು ಬೈರತಿ ಬಸವರಾಜ್ ಜೊತೆ ಗೋಪಾಲಯ್ಯ, ಮುನಿರಾಜು, ಜವರಾಯಿಗೌಡ ಆಗಮಿಸಿ ಸಾಥ್​ ನೀಡಿದರು. ಸದಾನಂದಗೌಡರಿಗೆ ಚಾಮರಾಜನಗರಕ್ಕೆ ನಿಯೋಜನೆ ಮಾಡಿರುವ ಹಿನ್ನೆಲೆಯಲ್ಲಿ ಅವರು ಅಲ್ಲಿಗೆ ಹೋಗಿದ್ದರಿಂದ ಇಂದಿನ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ.

ನಾಮಪತ್ರ ಸಲ್ಲಿಕೆಗೂ ಮುನ್ನ ಮಾತನಾಡಿದ್ದ ಶೋಭಾ ಕರಂದ್ಲಾಜೆ,"ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನ ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇದೆ. ನನಗೆ ಒಳಪೆಟ್ಟಿನ ಯಾವುದೇ ಆತಂಕವಿಲ್ಲ. ಎಲ್ಲ ನಾಯಕರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ" ಎಂದು ಹೇಳಿದ್ದರು.

"ಮತ್ತೊಮ್ಮೆ ಮೋದಿಯನ್ನು ದೇಶಕ್ಕಾಗಿ ಜನತೆ ಬಯಸುತ್ತಿದ್ದಾರೆ. ನನಗೆ 5 ಲಕ್ಷಕ್ಕೂ ಅಧಿಕ ಲೀಡ್​ನಿಂದ ಗೆಲ್ಲುವ ವಿಶ್ವಾಸವಿದೆ. ಕ್ಷೇತ್ರದಲ್ಲಿ ಒಳ್ಳೆಯ ಸಹಕಾರ ಸಿಗುತ್ತಿದೆ. ಒಳಪೆಟ್ಟಿನ ಆತಂಕ ಖಂಡಿತವಾಗಿಯೂ ಇಲ್ಲ. ಎಲ್ಲಾ ಶಾಸಕರು ಪ್ರವಾಸ ಮಾಡುತ್ತಿದ್ದು, ಅವರೇ ನನ್ನನ್ನು ಕರೆದು ಸನ್ಮಾನ ಮಾಡುತ್ತಿದ್ದಾರೆ. ಒಗ್ಗಟ್ಟಾಗಿ ಕೆಲಸ ಮಾಡುತ್ತಾರೆ'' ಎಂದಿದ್ದರು.

ಇದನ್ನೂ ಓದಿ:ರಾಜ್ಯದಲ್ಲಿ ಸುಳ್ಳುಗಳ ಮೂಲಕ ಬಿಜೆಪಿಯಿಂದ ಪ್ರಚಾರ ಸಭೆ ಆರಂಭ: ಸಿಎಂ ಸಿದ್ದರಾಮಯ್ಯ - CM Siddaramaiah

Last Updated :Apr 3, 2024, 1:18 PM IST

ABOUT THE AUTHOR

...view details