ಕರ್ನಾಟಕ

karnataka

ಚಿಕ್ಕೋಡಿ: ಸ್ವತಂತ್ರ ಅಭ್ಯರ್ಥಿಯಾಗಿ ನಿವೃತ್ತ IAS ಅಧಿಕಾರಿ ಶಂಭು ಕಲ್ಲೋಳಕರ್ ನಾಮಪತ್ರ ಸಲ್ಲಿಕೆ - Shambhu Kallolakar

By ETV Bharat Karnataka Team

Published : Apr 12, 2024, 9:47 PM IST

ಚಿಕ್ಕೋಡಿ ಭಾಗದ ಅಭಿವೃದ್ಧಿಗಾಗಿ ನಾಮಪತ್ರ ಸಲ್ಲಿಸಿದ್ದೇನೆ. ಇಲ್ಲಿ ಹಣವಂತರು, ಜಾತಿವಂತರು ಮಾತ್ರ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಸ್ವತಂತ್ರ ಅಭ್ಯರ್ಥಿ ಶಂಭು ಕಲ್ಲೋಳಕರ್ ತಿಳಿಸಿದರು.

Retired IAS officer Shambhu Kallolakar nomination paper submission
ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಕರ್ ನಾಮಪತ್ರ ಸಲ್ಲಿಕೆ

ಸ್ವತಂತ್ರ ಅಭ್ಯರ್ಥಿ ಶಂಭು ಕಲ್ಲೋಳಕರ್ ಮಾಧ್ಯಮದವರೊಂದಿಗೆ ಮಾತನಾಡಿದರು.

ಚಿಕ್ಕೋಡಿ:ಚಿಕ್ಕೋಡಿಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ತಮಿಳುನಾಡಿನ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಕರ್ ಅವರು ಇಂದು ಚುನಾವಣಾಧಿಕಾರಿ ರಾಹುಲ್ ಶಿಂಧೆ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿರುವ ಕಲ್ಲೋಳ್ಕರ್, ಏಪ್ರಿಲ್ 15ರಂದು ಬೃಹತ್ ಪ್ರಮಾಣದಲ್ಲಿ ಅಭಿಮಾನಿಗಳ ಜತೆಗೆ ನಾಮಪತ್ರ ಸಲ್ಲಿಸಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.

ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ಈ ಭಾಗದ ಅಭಿವೃದ್ಧಿಗಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಇಲ್ಲಿ ಹಣವಂತರು ಜಾತಿವಂತರು ಮಾತ್ರ ಸ್ಪರ್ಧೆ ಮಾಡುತ್ತಿದ್ದಾರೆ. ಸಾಮಾನ್ಯ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ ಎಂದರು.

ಬೆಳಗಾವಿಯಲ್ಲಿ ಕುಟುಂಬ ರಾಜಕಾರಣ ಮತ್ತು ಹೊಂದಾಣಿಕೆ ರಾಜಕಾರಣದಿಂದ ಎದುರಾಳಿ ಪಕ್ಷದ ಅಭ್ಯರ್ಥಿಯ ಟಿಕೆಟ್ ಅನ್ನು ಜೇಬಿನಲ್ಲಿಟ್ಟುಕೊಂಡು ಓಡಾಡುತ್ತಿರುವ ಇಂಥ ಸಂದರ್ಭದಲ್ಲಿ ಸಮಾಜ ಸುಧಾರಣೆಗೆ, ಸಾಮಾಜಿಕ ಕಳಕಳಿಯೊಂದಿಗೆ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ನನಗೆ ಕ್ಷೇತ್ರದ ಜನರು ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಕಾಂಗ್ರೆಸ್ ವಿರುದ್ಧ ಹೋರಾಡುತ್ತಿಲ್ಲ. ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡಲು ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದೇ ಇರುವುದಕ್ಕೆ ನನ್ನ ತತ್ವ ಸಿದ್ಧಾಂತ ಬದಲಾವಣೆಯಾಗಿಲ್ಲ. ನನ್ನ ಸ್ಪರ್ಧೆ ಕಾಂಗ್ರೆಸ್ ಪಕ್ಷದ ವಿರುದ್ಧ ಇಲ್ಲ. ಜನರ ಕೂಗು ರಾಷ್ಟ್ರೀಯ ಪಕ್ಷಗಳಿಗೆ ಮುಟ್ಟುತ್ತಿಲ್ಲ ಎಂದು ತಿಳಿಸಿದರು.

ದಲಿತ ಮತಗಳ ವಿಭಜನೆಗೆ ಸ್ಪರ್ಧೆ ಮಾಡುವ ಆರೋಪದ ಕುರಿತು ಪ್ರತಿಕ್ರಿಯಿಸಿ, ದುಡ್ಡಿದ್ದವರಿಗೆ, ಜಾತಿಗಳಿಗೆ ಮಾತ್ರ ಮನ್ನಣೆ ಕೊಡುವ ಕಾರ್ಯ ಆಗುತ್ತಿದೆ. ಇದು ಬದಲಾವಣೆ ಆಗಬೇಕು. ಇದರಿಂದ ನಾನು ಸ್ಪರ್ಧೆಗಿಳಿದಿದ್ದೇನೆ ಎಂದರು.

ನಾನು ಸತೀಶ್​​ ಜಾರಕಿಹೊಳಿ ಅವರನ್ನು ಟಾರ್ಗೆಟ್ ಮಾಡಿಲ್ಲ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡ ನೋಡುವ ಹಾಗಾಗಿದೆ. ನಾನು ಕಾಂಗ್ರೆಸ್ ಮಾತ್ರ ಅಲ್ಲ, ಬಿಜೆಪಿ ಸೇರಿ ಎಲ್ಲರ ಮತಗಳನ್ನೂ ಪಡೆಯುತ್ತೇನೆ. ಕ್ಷೇತ್ರದ ಪ್ರಜ್ಞಾವಂತರೆಲ್ಲ ನನ್ನನ್ನು ಗೆಲ್ಲಿಸಲಿದ್ದಾರೆ. ಹಿಂದೆ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಯಬಾಗ ಮತಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರೂ ಜನ ನನ್ನ ಬೆಂಬಲಿಸಿದ್ದಾರೆ. ಇವತ್ತು ಕೂಡ ಪ್ರಜ್ಞಾವಂತ ಮತದಾರರು ನನ್ನನ್ನು ಗೆಲ್ಲಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಮಲ್ಲಪ್ಪ ಚನ್ನಪ್ಪ ಚೌಗುಲೆ ನಾಮಪತ್ರ ಸಲ್ಲಿಸಿದರು.

ಪ್ರಜಾಕೀಯ ಅಭ್ಯರ್ಥಿ ನಾಮಪತ್ರ ಸಲ್ಲಿಕೆ:ಮೇ 7ಕ್ಕೆ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮೊದಲ ದಿನ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಮಲ್ಲಪ್ಪ ಚನ್ನಪ್ಪ ಚೌಗುಲೆ ನಾಮಪತ್ರ ಸಲ್ಲಿಸಿದ್ದಾರೆ. 2ನೇ ಹಂತದ ಚುನಾವಣೆಗೆ 12ರಿಂದ 19ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ಇಂದು ಮೊದಲ ದಿನ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಭ್ಯರ್ಥಿ ಮಲ್ಲಪ್ಪ ಚನ್ನಪ್ಪ ಚೌಗುಲೆ ನಾಮಪತ್ರ ಸಲ್ಲಿಸಿದರು.

ಇದನ್ನೂಓದಿ:ಕಾಂಗ್ರೆಸ್‌ನವರ ಪ್ರಾಡಕ್ಟ್‌ ಸರಿಯಾಗಿಲ್ಲ, ರಾಹುಲ್ ಗಾಂಧಿ ಲಾಂಚ್ ಪದೇ ಪದೇ ವಿಫಲ: ಪ್ರಹ್ಲಾದ್ ಜೋಶಿ - Pralhad Joshi

ABOUT THE AUTHOR

...view details