ಕರ್ನಾಟಕ

karnataka

ರಾಜೀನಾಮೆ ಪ್ರಸಂಗ ಅದೊಂದು ನಾಟಕ, ಯಾರು ರಾಜೀನಾಮೆ ಕೊಡುವುದಿಲ್ಲ: ಕೆ ಹೆಚ್ ಮುನಿಯಪ್ಪ - Lok Sabha Election 2024

By ETV Bharat Karnataka Team

Published : Mar 28, 2024, 5:49 PM IST

ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ನಿನ್ನೆ ನಡೆದ ರಾಜೀನಾಮೆ ಪ್ರಸಂಗದ ಕುರಿತು ಚರ್ಚಿಸಲಿದ್ದೇನೆ. ಕಾಂಗ್ರೆಸ್ ಪಕ್ಷದ ನಾಯಕರ ಕುಟುಂಬದ ಹಲವರಿಗೆ ಟಿಕೆಟ್ ನೀಡಿರುವುದರಿಂದ ಸಹಜವಾಗಿ ನಾನೂ ನನ್ನ ಅಳಿಯನಿಗೆ ಟಿಕೆಟ್​ ಕೊಡಿಸಲು ಮುಂದಾಗಿದ್ದೇನೆ ಎಂದು ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದರು.

Minister KH Muniyappa spoke to the media.
ಸಚಿವ ಕೆ ಹೆಚ್ ಮುನಿಯಪ್ಪ ಮಾಧ್ಯಮದವರ ಜೊತೆ ಮಾತನಾಡಿದರು.

ಬೆಂಗಳೂರು: ನಿನ್ನೆ ನಡೆದ ಘಟನೆಗಳ ರೂವಾರಿ ಯಾರೆಂದು ಮಾಧ್ಯಮದವರೇ ನನಗೆ ತಿಳಿಸಬೇಕು. ನನಗಂತೂ ದಿಗ್ಭ್ರಮೆಯಾಗಿದೆ ಎಂದು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದರು.

ಇಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಿದ್ದು, ನಿನ್ನೆ ನಡೆದ ರಾಜೀನಾಮೆ ಪ್ರಸಂಗದ ಕುರಿತು ಚರ್ಚಿಸಲಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಸರಿ ಸುಮಾರು 40 ವರ್ಷಗಳಿಂದ ಸತತವಾಗಿ ರಾಜಕೀಯ ಮಾಡಿದ್ದು, ಪಕ್ಷ 10 ವರ್ಷಗಳ ಕಾಲ ಕೇಂದ್ರದಲ್ಲಿ ಸಚಿವನನ್ನಾಗಿಸಿದೆ. ಕಾಂಗ್ರೆಸ್‌ನ ಹೈಕಮಾಂಡ್ ನೀಡುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿ ಕಾರ್ಯನಿರ್ವಹಿಸುತ್ತೇವೆ. ಬುಧವಾರ ನಡೆದಿರುವ ರಾಜೀನಾಮೆ ಪ್ರಹಸನ ನನಗೆ ಆಶ್ಚರ್ಯ ಉಂಟುಮಾಡಿದೆ. ಈ ರಾಜೀನಾಮೆ ಎಂಬುದು ನಾಟಕ ಆಗಿದೆ. ಯಾರು ರಾಜೀನಾಮೆ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಕೇಂದ್ರ ಮಟ್ಟದಲ್ಲಿ ರಾಜಕಾರಣ ಮಾಡಿರುವ ನಾಯಕ, ನಮ್ಮ ಪಕ್ಷದಲ್ಲಿರುವ ನಾಯಕರ ಕುಟುಂಬದ ಹಲವರಿಗೆ ಟಿಕೆಟ್ ಸಿಕ್ಕಿದೆ. ಸಹಜವಾಗಿ ನಾನೂ ನನ್ನ ಕುಟುಂಬದವರಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದು, ಟಿಕೆಟ್​ ದೊರಕುವ ಆಶಾಭಾವನೆ ಇದೆ. ಕೋಲಾರ ಲೋಕಸಭಾ ಕ್ಷೇತ್ರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವ ಭರವಸೆಯನ್ನು ಮುಖ್ಯಮಂತ್ರಿಗಳಿಗೆ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ನೀಡಿದ್ದೇನೆ ಎಂದು ವಿವರಿಸಿದರು.

ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೆಲುವು ಕಾಂಗ್ರೆಸ್ ಪಕ್ಷದ್ದಾಗಿರಬೇಕೇ ವಿನಃ, ವ್ಯಕ್ತಿ ಪ್ರತಿಷ್ಠೆಯಿಂದ ಕೂಡಿರಬಾರದು. ನಾವೆಲ್ಲರೂ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಿ ಹೈಕಮಾಂಡ್ ಸೂಚಿಸುವ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಕಾಂಗ್ರೆಸ್ ಪಕ್ಷ ಒಂದು ಕುಟುಂಬವಿದ್ದಂತೆ. ಈ ಜಗಳ ಹಾಗೂ ಮನಸ್ತಾಪಗಳನ್ನು ನಮ್ಮ ಹಂತದಲ್ಲಿ ಬಗೆಹರಿಸಿಕೊಂಡು ಮುನ್ನಡೆಯಬೇಕಾಗಿದೆ. ಈ ರೀತಿ ರಾಜೀನಾಮೆ ನೀಡುವ ಹಂತಕ್ಕೆ ಯಾವ ಕಾರಣದಿಂದ ಹೋದರು ಎಂಬುದು ಕುತೂಹಲಕಾರಿಯಾಗಿದೆ. ಕಾದು ನೋಡಿ ಶೀಘ್ರದಲ್ಲೇ ಎಲ್ಲವೂ ಗೊತ್ತಾಗಲಿದೆ ಎಂದು ಸಚಿವ ಮುನಿಯಪ್ಪ ತಿಳಿಸಿದರು.

ಇದನ್ನೂ ಓದಿ:ದೇವಾಲಯದಲ್ಲಿ ಪೂಜೆ, ಅಣ್ಣ-ಅತ್ತಿಗೆ ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಸಿದ ಡಿಕೆ ಸುರೇಶ್ - dk suresh submit nomination

ABOUT THE AUTHOR

...view details