ಕರ್ನಾಟಕ

karnataka

ಶ್ರೀರಾಮನ ಪರಮಭಕ್ತೆ ಶಬರಿ ಗುಹೆ ಬಾರೆಹಣ್ಣು ಅಯೋಧ್ಯೆಗೆ ತಲುಪಿಸಿ: ಸಚಿವೆ ಶೋಭಾ ಕರಂದ್ಲಾಜೆಗೆ ಸಮರ್ಪಣೆ

By ETV Bharat Karnataka Team

Published : Jan 21, 2024, 7:26 PM IST

Updated : Jan 21, 2024, 8:31 PM IST

ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ರಾಮಚಂದ್ರನ ಪರಮಭಕ್ತೆ ಶಬರಿ ಗುಹೆಯಿಂದ ಸಂಗ್ರಹಿಸಿದ ಬಾರೆ ಹಣ್ಣುಗಳನ್ನು ಕಾಂಗ್ರೆಸ್ ಮುಖಂಡ ಎಚ್ ಆರ್ ಶ್ರೀನಾಥ್ ಅವರು ವಿತರಿಸಿ, ಅಯೋಧ್ಯೆಗೆ ತಲುಪಿಸುವಂತೆ ಮನವಿ ಮಾಡಿದರು.

bore fruit collected from sabari cave
ಶಬರಿ ಗುಹೆ ಬಾರೆಹಣ್ಣು ಅಯೋಧ್ಯೆಗೆ ತಲುಪಿಸುವಂತೆ ಸಚಿವೆ ಶೋಭಾ ಕರಂದ್ಲಾಜೆಗೆ ಮೂಲಕ ಸಮರ್ಪಣೆ

ಶಬರಿ ಗುಹೆ ಬಾರೆಹಣ್ಣು ಅಯೋಧ್ಯೆಗೆ ತಲುಪಿಸಲು ಸಚಿವೆ ಕರಂದ್ಲಾಜೆಗೆ ಮನವಿ

ಗಂಗಾವತಿ(ಕೊಪ್ಪಳ):ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವ ಹಿನ್ನೆಲೆ ಶ್ರೀರಾಮಚಂದ್ರ ಪ್ರಭುವಿಗೆ ಆತನ ಪರಮಭಕ್ತೆ ಶಬರಿ ಗುಹೆಯಿಂದ ಸಂಗ್ರಹಿಸಿದ ಬಾರೆ ಹಣ್ಣುಗಳನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ವಿತರಿಸಿ, ಅಯೋಧ್ಯೆಗೆ ತಲುಪಿಸುವಂತೆ ಕಾಂಗ್ರೆಸ್ ಮುಖಂಡ ಎಚ್ ಆರ್ ಶ್ರೀನಾಥ್ ಸೇರಿದಂತೆ ಇತರ ಮುಖಂಡರು ಮನವಿ ಮಾಡಿದರು.

ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದ ವೇಳೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದ ಅವರು, ರಾಮಾಯಣದ ಕಾಲಘಟ್ಟದ ಸಂದರ್ಭದಲ್ಲಿ ಶ್ರೀರಾಮಚಂದ್ರ ಸೀತೆಯನ್ನು ಹುಡುಕುತ್ತಾ ಕಿಷ್ಕಿಂಧೆಗೆ ಆಗಮಿಸಿದ್ದರು. ರಾಮನ ಬರುವಿಕೆಗಾಗಿ ಕಾಯ್ದಿದ್ದ ಶಬರಿ, ಪಂಪಾಸರೋವರದ ಬಳಿ ಇರುವ ತನ್ನ ಗುಹೆಯಲ್ಲಿ ಹಲವು ವರ್ಷ ಶ್ರೀರಾಮನಿಗೆ ತಪ್ಪಸ್ಸು ಮಾಡಿದ್ದಳು. ಅಲ್ಲದೇ ಆತನಿಗೆ ಸಿಹಿಯಾದ ಬಾರೆ ಹಣ್ಣು ನೀಡಿ ಸತ್ಕರಿಸಿದ್ದಳು.

ಇಂತಹ ಪೌರಾಣಿಕ ಹಿನ್ನೆಲೆ ಹೊಂದಿರುವ ಶಬರಿ ಸ್ಥಾನ ಹಾಗೂ ಅಂಜನಾದ್ರಿಗೆ ಬಂದಿರುವ ನೀವು, ಇಲ್ಲಿಂದ ಶಬರಿಯ ಬಾರೆಹಣ್ಣುಗಳನ್ನು ಕಾಣಿಕೆಯಾಗಿ ಅಯೋಧ್ಯೆವರೆಗೆ ತಲುಪಿಸಿ ಶ್ರೀರಾಮನಿಗೆ ಸಲ್ಲುವಂತೆ ಮಾಡಿ ಎಂದು ಹೇಳಿದರು.

ಶ್ರೀರಾಮಾಂಜನೇಯ ಕಾರಿಡಾರ್:ವಿಶ್ವದಾದ್ಯಂತ ಗಮನ ಸೆಳೆಯುತ್ತಿರುವ ಅಂಜನಾದ್ರಿ ಬೆಟ್ಟ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿಶೇಷ ಗಮನ ಹರಿಸಬೇಕಾಗಿದೆ. ಅಂಜನಾದ್ರಿ ಬೆಟ್ಟವನ್ನು ಶ್ರೀರಾಮಾಂಜನೇಯ ಕಾರಿಡಾರ್ ಎಂದು ಘೋಷಿಸಬೇಕೆಂದು ಎಚ್ ಆರ್ ಶ್ರೀನಾಥ್ ಅವರು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹಾಗೂ ಸಂಸದ ಕರಡಿ ಸಂಗಣ್ಣ ಅವರಿಗೆ ಮನವಿ ಸಲ್ಲಿಸಿದರು.

ಶ್ರೀರಾಮಾಂಜನೇಯ ಕಾರಿಡಾರ್ ಎಂದು ಘೋಷಣೆ ಮಾಡಬೇಕು. ಈ ಭಾಗದ ಅಭಿವೃದ್ಧಿಗಾಗಿ ವಿಶೇಷ ಅನುದಾನದಡಿ ಐನೂರು ಕೋಟಿ ಮೊತ್ತದ ಹಣ ಮಂಜೂರು ಮಾಡುವಂತೆ ಕೇಂದ್ರದ ಮೇಲೆ ಒತ್ತಡ ತರುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾಜಿಶಾಸಕ ಪರಣ್ಣ ಮುನವಳ್ಳಿ ಇದ್ದರು.

ಬಿಜೆಪಿ ಟಿಕೆಟ್​ ಪ್ರಬಲ ಅಕಾಂಕ್ಷಿ, ರೇಸ್​ನಿಂದ ಹಿಂದೆ ಸರಿಯಲ್ಲ : ಕರಡಿ ಸಂಗಣ್ಣ

ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬೇಕು ಎಂದು ಪಕ್ಷದ ಹೈಕಮಾಂಡ್ ಮುಂದೆ ನನ್ನ ಪ್ರಬಲ ಅಕಾಂಕ್ಷೆಯನ್ನು ವ್ಯಕ್ತಪಡಿಸಿದ್ದೇನೆ. ಈಗಲೂ ಟಿಕೆಟ್ ರೇಸ್​ನಲ್ಲಿ ಇದ್ದೇನೆ. ಈ ರೇಸ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.

ತಾಲೂಕಿನ ಅಂಜನಾದ್ರಿಗೆ ಭೇಟಿ ನೀಡಿದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ಟಿಕೆಟ್​ ಪ್ರಬಲ ಅಕಾಂಕ್ಷಿಯಾಗಿದ್ದೇನೆ. ನನಗೆ ಈಗಲೂ ಅಂಜನಾದ್ರಿಯ ಆಂಜನೇಯ ಶಕ್ತಿ ನೀಡಿದ್ದಾನೆ. ಹೀಗಾಗಿ ಮತ್ತೊಮ್ಮೆ ಸೇವೆ ಮಾಡುವ ಆಸೆಯಿದೆ ಎನ್ನುವ ಮೂಲಕ ಸಂಸದ ಕರಡಿ ಸಂಗಣ್ಣ, ಕಳೆದ ಹಲವು ದಿನಗಳಿಂದ ಎದ್ದಿದ್ದ ಟಿಕೆಟ್ ಕೈ ತಪ್ಪುವ ಭೀತಿಯ ವದಂತಿಗೆ ತೆರೆ ಎಳೆದರು.

ಟಿಕೆಟ್ ಕೊಡುವುದು, ಬಿಡುವುದು ಕೈಕಮಾಂಡ್​ಗೆ ಬಿಟ್ಟಿದ್ದು. ನಾನಂತೂ ಪ್ರಬಲವಾಗಿಯೇ ನನ್ನ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದೇನೆ. ಒಂದೊಮ್ಮೆ ಟಿಕೆಟ್ ಯಾರಿಗೆ ಕೊಟ್ಟರೂ ಪಕ್ಷದ ಹಿತಾಸಕ್ತಿಯಂತೆ ಕೆಲಸ ಮಾಡಬೇಕಾಗುತ್ತದೆ. ಟಿಕೆಟ್ ಮಾತು ದೂರ ಇದೆ, ಅಲ್ಲಿವರೆಗೂ ಕಾದು ನೋಡೋಣ ಎಂದು ಹೇಳಿದರು.

ಸಚಿವ ತಂಗಡಗಿಯಿಂದ ಸಣ್ಣತನ ಪ್ರದರ್ಶನ: ಅಂಜನಾದ್ರಿ ಅಭಿವೃದ್ಧಿ ವಿಚಾರವಾಗಿ ಕ್ಷುಲ್ಲಕ ರಾಜಕಿಯ ಮಾಡುತ್ತಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸಣ್ಣತನ ಪ್ರದರ್ಶಿಸುತ್ತಿದ್ದಾರೆ. ಈಗಾಗಲೇ ಹಿಂದಿನ ಬಿಜೆಪಿ ಸರ್ಕಾರ ಅಭಿವೃದ್ಧಿಗೆ 120 ಕೋಟಿ ನೀಡಿರುವುದು ಜಗಜ್ಜಾಹೀರು ಆಗಿದೆ. ಆದರೂ ಸಚಿವರು ಅನುದಾನ ಎಲ್ಲಿದೆ ಎಂದು ಕೇಳುತ್ತಿದ್ದಾರೆ. ಇಷ್ಟು ಸಣ್ಣತನದ ರಾಜಕೀಯ ಮಾಡಬಾರದು. ನವಲಿ ಜಲಾಶಯಕ್ಕೆ ಸರ್ಕಾರ ಒಂದು ಸಾವಿರ ಕೋಟಿ ರೂ. ಅನುದಾನ ಇಟ್ಟಿದೆ ಎಂದು ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಇದನ್ನೂಓದಿ:ಪ್ರಾಣ ಪ್ರತಿಷ್ಠಾಪನಾ ದಿನ ರಾಜ್ಯದಲ್ಲಿ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳಲು ಸೂಚನೆ: ಸಚಿವ ಪರಮೇಶ್ವರ್

Last Updated : Jan 21, 2024, 8:31 PM IST

ABOUT THE AUTHOR

...view details