ಕರ್ನಾಟಕ

karnataka

ಏ.27ಕ್ಕೆ ಬೆಳಗಾವಿ ಲೋಕಸಭೆ ಅಖಾಡಕ್ಕೆ ಮೋದಿ ಎಂಟ್ರಿ: ಜಿಲ್ಲೆಯಲ್ಲಿ ನಮೋ ವಾಸ್ತವ್ಯಕ್ಕೆ ಸಕಲ ಸಿದ್ಧತೆ - Modi will visit to Belgavi

By ETV Bharat Karnataka Team

Published : Apr 25, 2024, 2:19 PM IST

Updated : Apr 25, 2024, 2:56 PM IST

ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಬೆಳಗಾವಿ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ.

ಮೋದಿ ಎಂಟ್ರಿ
ಮೋದಿ ಎಂಟ್ರಿ

ಏ.27ಕ್ಕೆ ಬೆಳಗಾವಿ ಲೋಕಸಭೆ ಅಖಾಡಕ್ಕೆ ಮೋದಿ ಎಂಟ್ರಿ

ಬೆಳಗಾವಿ:ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ‌ ಕಲ್ಯಾಣ ಕರ್ನಾಟಕದಲ್ಲಿ ಎರಡು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಬೃಹತ್ ಸಾರ್ವಜನಿಕ ಸಮಾವೇಶದ ಮೂಲಕ ಮತಬೇಟೆ ನಡೆಸಲಿದ್ದು, ಬೆಳಗಾವಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್​ ಶೆಟ್ಟರ್ ಪರ ಪ್ರಚಾರದ ಅಖಾಡಕ್ಕೆ ಧುಮುಕಲಿರುವ ಪ್ರಧಾನಿ ಮೋದಿ ಏಪ್ರಿಲ್ 28ರಂದು ಬೆಳಗ್ಗೆ 10ಕ್ಕೆ ಬೆಳಗಾವಿ ನಗರದ ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿಯಲ್ಲಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.‌ ಸಮಾವೇಶ ನಡೆಯುವ ಮುನ್ನಾ ದಿನವೇ ಬೆಳಗಾವಿಗೆ ಬರಲಿರುವ ಪ್ರಧಾನಿ ಮೋದಿ ಏಪ್ರಿಲ್​ 27ರ ಸಂಜೆ 7.30ಕ್ಕೆ ಬೆಳಗಾವಿಗೆ ಆಗಮಿಸಲಿದ್ದಾರೆ. ಅಂದು ಬೆಳಗಾವಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಈಗಿರುವ ಮಾಹಿತಿ ಪ್ರಕಾರ ಮೋದಿ ಬೆಳಗಾವಿಯಲ್ಲೇ ರಾತ್ರಿ ಕಳೆಯಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಅದು ಇನ್ನು ಅಧಿಕೃತ ಆಗಿಲ್ಲ.

ನಮೋ ವಾಸ್ತವ್ಯಕ್ಕೆ ಸಕಲ ಸಿದ್ಧತೆ

ಒಂದು ವೇಳೆ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿ ಮರುದಿನ ಬೆಳಗ್ಗೆ ನಡೆಯುವ ಸಮಾವೇಶದಲ್ಲಿ ನರೇಂದ್ರ ಮೋದಿ ಭಾಗಿಯಾದರೇ, ಬೆಳಗಾವಿಯಲ್ಲಿ ವಾಸ್ತವ್ಯ ಹೂಡುತ್ತಿರುವ ದೇಶದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ‌ ಪಾತ್ರರಾಗಲಿದ್ದಾರೆ. ಕಾಕತಿಯಲ್ಲಿ ಜೊಲ್ಲೆ ಗ್ರೂಪ್‌ನಿಂದ ನಿರ್ಮಾಣಗೊಂಡಿರುವ ಐಟಿಸಿ ವೆಲ್ಕಂ ಹೋಟೆಲ್‌ನಲ್ಲಿ ಮೋದಿ ವಾಸ್ತವ್ಯ ಹೂಡಲಿದ್ದು, ಸುಮಾರು 5 ಏಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಐಟಿಸಿ ವೆಲ್ಕಂ ಹೋಟೆಲ್​ 116 ರೂಮ್​ಗಳನ್ನು ಹೊಂದಿದ್ದು, ಉದ್ಘಾಟನೆಗೂ ಮುನ್ನವೇ ಪ್ರಧಾನಿ ಮೋದಿ ಆತಿಥ್ಯಕ್ಕೆ ಐಟಿಸಿ ವೆಲ್ಕಂ ಹೋಟೆಲ್ ಸಜ್ಜಾಗಿದೆ. ಎಸ್​ಪಿಜಿ ಅಧಿಕಾರಿಗಳು ಹೋಟೆಲ್​ ಅನ್ನು ಈಗಾಗಲೇ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿ ನಿತೇಶ ಪಾಟೀಲ, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಸೇರಿ ಮತ್ತಿತರ ಅಧಿಕಾರಿಗಳು ಕೂಡ ಹೋಟೆಲ್​ಗೆ ಭೇಟಿ ನೀಡಿ, ಸಿದ್ಧತೆ ಪರಿಶೀಲಿಸಿದರು.

ಈ ಸಂಬಂಧ ಮಾತನಾಡಿರುವ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರು, "ಪ್ರಧಾನಮಂತ್ರಿಗಳು ಬಹುಶಃ ಬೆಳಗಾವಿಯಲ್ಲಿ ವಾಸ್ತವ್ಯ ಇರುವ ಬಗ್ಗೆ ಮಾಹಿತಿ ಬಂದಿದೆ. ಈಗಾಗಲೇ ಒಂದು ಸಭೆ ನಡೆಸಿದ್ದು, ಸೂಕ್ತ ಬಂದೋಬಸ್ತ್ ಮಾಡುತ್ತೇವೆ. ಖಾಸಗಿ ಹೋಟೆಲ್​ನಲ್ಲಿ ವಾಸ್ತವ್ಯ ಇರುವ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ಬಂದಿಲ್ಲ. ಆದರೆ, ನಾವು ಏನು ರಕ್ಷಣೆ ನೀಡಬೇಕೋ ಅದು ನೀಡುತ್ತೇವೆ" ಎಂದು ಹೇಳಿದರು.

ಐಟಿಸಿ ವೆಲ್ಕಂ ಹೋಟೆಲ್‌ ಮಾಲೀಕ ಬಸವಪ್ರಸಾದ ಜೊಲ್ಲೆ ಮಾತನಾಡಿ, "ಪ್ರಧಾನಿ ಮೋದಿ ಅವರು ನಮ್ಮ ಹೋಟೆಲ್​ಗೆ​​ ಆಗಮಿಸುತ್ತಿರುವುದು ನಮ್ಮ ಸೌಭಾಗ್ಯ ಮತ್ತು ಅತ್ಯಂತ ಖುಷಿಯ ವಿಚಾರ. ಉತ್ತರ ಕರ್ನಾಟಕದಲ್ಲೇ ಅತಿ ದೊಡ್ಡ ಹೋಟೆಲ್ ನಿರ್ಮಿಸಿದ್ದೇವೆ. ಮೋದಿಜಿ ಸ್ವಾಗತಕ್ಕೆ ಸಿಬ್ಬಂದಿ ಕಾತರರಾಗಿದ್ದಾರೆ. ಜಿಲ್ಲಾಡಳಿತದ ಶಿಷ್ಟಾಚಾರದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡುತ್ತೇವೆ" ಎಂದು ಹೇಳಿದರು.

ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆ ಜಿಲ್ಲೆಯ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಮೋದಿ ಭೇಟಿ ಬಳಿಕ ಅವರ ಉತ್ಸಾಹ ಮತ್ತಷ್ಟು ಇಮ್ಮಡಿ ಆಗಲಿದೆ.

ಇದನ್ನೂ ಓದಿ:'ಈಶ್ವರಪ್ಪ ಅವರಿಗೆ ಸಲಹೆ ನೀಡುವಷ್ಟು ನಾನು ದೊಡ್ಡವನಲ್ಲ': ಅಣ್ಣಾಮಲೈ - Annamalai

Last Updated : Apr 25, 2024, 2:56 PM IST

ABOUT THE AUTHOR

...view details