ಕರ್ನಾಟಕ

karnataka

ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆದು 644ನೇ ರ‍್ಯಾಂಕ್‌ ಗಳಿಸಿದ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ - UPSC Achiever

By ETV Bharat Karnataka Team

Published : Apr 16, 2024, 9:24 PM IST

Updated : Apr 16, 2024, 10:21 PM IST

ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ಶಾಂತಪ್ಪ‌ ಜಡೇಮ್ಮನವರ್ ಯುಪಿಎಸ್‌ಸಿ ಪರೀಕ್ಷೆಯಲ್ಲಿ 644ನೇ ರ‍್ಯಾಂಕ್‌ ಪಡೆದಿದ್ದಾರೆ.

ಕನ್ನಡದಲ್ಲಿ‌ ಯುಪಿಎಸ್ಸಿ ಪರೀಕ್ಷೆ ಬರೆದು ತೇರ್ಗಡೆಯಾದ ಪಿಎಸ್ಐ
ಕನ್ನಡದಲ್ಲಿ‌ ಯುಪಿಎಸ್ಸಿ ಪರೀಕ್ಷೆ ಬರೆದು ತೇರ್ಗಡೆಯಾದ ಪಿಎಸ್ಐ

ಬೆಂಗಳೂರು:ನಿರಂತರ ಶ್ರಮ, ಅಚಲ ನಂಬಿಕೆ ಹಾಗೂ ಆತ್ಮವಿಶ್ವಾಸವಿದ್ದರೆ ಜಗತ್ತು ಗೆಲ್ಲಬಹುದು ಎಂಬುದು ಸಾರ್ವಕಾಲಿಕ ಸತ್ಯ. ಅದೇ ರೀತಿ ಈ ಮೂರು ತತ್ವಗಳನ್ನು ನಂಬಿ ಪೊಲೀಸ್ ಕೆಲಸದ ನಡುವೆಯೂ ನಗರದ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ ಶಾಂತಪ್ಪ‌ ಜಡೇಮ್ಮನವರ್ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆ ಬರೆದು ಉನ್ನತ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಪರೀಕ್ಷೆಯಲ್ಲಿ ಸಬ್ ಇನ್ಸ್​ಪೆಕ್ಟರ್​ ಶಾಂತಪ್ಪ‌ ಜಡೇಮ್ಮನವರ್ 644ನೇ ರ‍್ಯಾಂಕ್‌ ಪಡೆದಿದ್ದಾರೆ. ಇವರು ಕನ್ನಡದಲ್ಲೇ ಪರೀಕ್ಷೆ ಬರೆದಿದ್ದರು ಎಂಬುದು ಹೆಗ್ಗಳಿಕೆ. 2016ರಲ್ಲಿ‌ ಪೊಲೀಸ್ ಇಲಾಖೆಗೆ ನೇಮಕಗೊಂಡ ಶಾಂತಪ್ಪ ಮೂಲತಃ ಬಳ್ಳಾರಿಯವರು. ಬಳ್ಳಾರಿ‌ ಮುನಿಸಿಪಾಲ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮುಗಿಸಿದ್ದಾರೆ‌.

7 ಬಾರಿ ಪರೀಕ್ಷೆ ಎದುರಿಸಿದ್ದರು: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ಅಧಿಕಾರಿಯಾಗಬೇಕೆಂಬ ಕನಸು ನನಸು ಮಾಡಿಕೊಂಡಿರುವ ಶಾಂತಪ್ಪ, ಈ ಹಿಂದೆ 7 ಬಾರಿ ಪರೀಕ್ಷೆ ಬರೆದಿದ್ದರು‌.‌ ಈ ಮಧ್ಯೆ ಮೂರು ಅವಧಿಯಲ್ಲಿ ಸಂದರ್ಶನದಲ್ಲಿ ಫೇಲಾಗಿದ್ದರು‌.

ಕನ್ನಡದಲ್ಲಿ‌ ಯುಪಿಎಸ್ಸಿ ಪರೀಕ್ಷೆ ಬರೆದು ತೇರ್ಗಡೆಯಾದ ಪಿಎಸ್ಐ

ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಶಾಂತಪ್ಪ, "ಚಿಕ್ಕ ವಯಸ್ಸಿನಿಂದ ಉನ್ನತ ಅಧಿಕಾರಿಯಾಗಬೇಕೆಂಬ ಅಭಿಲಾಷೆ ಹೊಂದಿದ್ದೆ. ಇದರಂತೆ ಪೊಲೀಸ್ ಇಲಾಖೆಗೆ ಸೇರಿ ಕಳೆದ‌ ಏಳು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ‌‌. ಕೆಲಸದ ಒತ್ತಡದ ನಡುವೆಯೂ ಪರೀಕ್ಷೆಗೆ ಸಿದ್ಧತೆ‌ ನಡೆಸಿದ್ದೆ. ಹಲವು ಬಾರಿ ಬಂದೋಬಸ್ತ್ ಕರ್ತವ್ಯದ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ಓದಿದ್ದೆ. ನಿರಂತರ ಪರಿಶ್ರಮವೇ ಈ ಸಾಧನೆಗೆ ಕಾರಣ" ಎಂದು ಹರ್ಷ ವ್ಯಕ್ತಪಡಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು: ಶಾಂತಪ್ಪ 2005ರ SSLC ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. 2006ರಲ್ಲಿ 56.18% ಅಂಕಗಳೊಂದಿಗೆ ಪಾಸಾದರು. 2008ರಲ್ಲಿ ಶೇ.39.33 ಅಂಕಗಳೊಂದಿಗೆ ದ್ವಿತೀಯ ಪಿಯುಸಿ ಪಾಸಾದರು. ಡಿಗ್ರಿಯಲ್ಲಿ ಫಸ್ಟ್ ಕ್ಲಾಸ್‌ನಲ್ಲಿ ಉತ್ತೀರ್ಣರಾದರು.

ಯುಪಿಎಸ್‌ಸಿ ಪರೀಕ್ಷೆಯ ಬಗ್ಗೆ ಆಕಾಂಕ್ಷಿಗಳಿಗೆ ಸಲಹೆ ನೀಡಿದ ಶಾಂತಪ್ಪ, "ಛಲಗಾರಿಕೆ, ಆತ್ಮವಿಶ್ವಾಸ ಹಾಗೂ ತಾಳ್ಮೆ ಕಳೆದುಕೊಳ್ಳಬೇಡಿ. ಆರಂಭಶೂರತ್ವ ಇರಕೂಡದು. ನಿಮ್ಮ ಗುರಿ ಸ್ಪಷ್ಟವಾಗಿದ್ದಾರೆ ಕನಸು ನನಸಾಗುತ್ತದೆ" ಎಂದರು.

"ನನ್ನ ಸಾಧನೆಗೆ ಕುಟುಂಬಸ್ಥರು, ಇಲಾಖೆಯ ಮೇಲಾಧಿಕಾರಿಗಳು ಹಾಗೂ ಸಹೋದ್ಯೋಗಿಗಳು ಬೆಂಬಲ ನೀಡಿದ್ದು ಅವರಿಗೆ ಧನ್ಯವಾದ" ಎಂದರು.

ಶಾಂತಪ್ಪ ಬೆಂಗಳೂರಿನ ಗೋರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಸಾರ್ವಜನಿಕ ಶೌಚಗೃಹ ಅಭಿಯಾನ ಶುರು ಮಾಡಿದ್ದರು. ಬಡಮಕ್ಕಳಿಗೆ ಬಿಡುವಿನ ಅವಧಿಯಲ್ಲಿ ಪಾಠ ಹೇಳಿಕೊಡುತ್ತಿದ್ದರು.

ಇದನ್ನೂ ಓದಿ:ಯುಪಿಎಸ್‌ಸಿ: ಹುಬ್ಬಳ್ಳಿಯ ವಿಜೇತಾ 100ನೇ ರ‍್ಯಾಂಕ್‌, ಧಾರವಾಡದ ಸೌಭಾಗ್ಯ 101ನೇ ರ‍್ಯಾಂಕ್‌ - UPSC Achievers

Last Updated : Apr 16, 2024, 10:21 PM IST

ABOUT THE AUTHOR

...view details