ಕರ್ನಾಟಕ

karnataka

ಮಂಡ್ಯ: ಠಾಣೆಗೆ ಕರೆತಂದು ಮಹಿಳೆಗೆ ಲಾಠಿ ಏಟು; ಪಿಎಸ್​ಐ ವಿರುದ್ದ ಎಫ್ಐಆರ್ ದಾಖಲು

By ETV Bharat Karnataka Team

Published : Feb 14, 2024, 9:56 PM IST

ಕ್ಲುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರಿಗೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ನಗರದ ಪೂರ್ವ ಪೊಲೀಸ್ ಠಾಣೆ
ಮಂಡ್ಯ ನಗರದ ಪೂರ್ವ ಪೊಲೀಸ್ ಠಾಣೆ

ಮಂಡ್ಯ: ಲಾಠಿ ಪ್ರಹಾರದಿಂದ ಮಹಿಳೆಗೆ ತೀವ್ರ ಗಾಯ

ಮಂಡ್ಯ: ಹಸು ಕಟ್ಟುತ್ತಿದ್ದ ಮಹಿಳೆಯನ್ನು ಠಾಣೆಗೆ ಕರೆತಂದು ಪೊಲೀಸರು ಲಾಠಿಯಿಂದ ಥಳಿಸಿರುವ ಘಟನೆ ಮಂಡ್ಯ ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಅಶೋಕನಗರ, ವಿವೇಕಾನಂದ ಜೋಡಿಯಲ್ಲಿರುವ ರವಿ ನರ್ಸಿಂಗ್ ಹೋಂ ಪಕ್ಕದಲ್ಲಿ ವಾಸವಾಗಿರುವ ರೂಪಾದೇವಿ (39) ಎಂಬವರು ಪುರುಷ ಪೊಲೀಸರಿಂದ ಮನಸೋ ಇಚ್ಚೆ ಥಳಿತಕ್ಕೊಳಗಾಗಿ ಗಾಯಗೊಂಡಿದ್ದಾರೆ.

ಹಸುಗಳನ್ನು ಸಾಕಿಕೊಂಡಿರುವ ರೂಪಾದೇವಿ ಮತ್ತು ಆಕೆಯ ತಾಯಿ, ಮನೆಯ ಪಕ್ಕದಲ್ಲೇ ಹಾಲು ಕರೆದು ಗ್ರಾಹಕರಿಗೆ ನೀಡುತ್ತಾ ಬದುಕು ಸಾಗಿಸುತ್ತಿದ್ದರು. ಈ ವೇಳೆ ಹಸುಗಳನ್ನು ರಸ್ತೆಗಳಲ್ಲೇ ಬಿಡುತ್ತಾರೆ. ಇದರಿಂದ ತೊಂದರೆಯಾಗುತ್ತಿದೆ ಎಂಬ ದೂರುಗಳು ಬಂದಿವೆ ಎಂದು ಹೇಳಲಾಗಿದೆ. ಇದರೊಂದಿಗೆ ಪಕ್ಕದ ಮನೆಯವರೂ ಸಹ ಹಸುಗಳಿಂದಾಗಿ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಪಿಎಸ್‌ಐ ತಿಳಿಸಿದ್ದಾರೆ.

ಎರಡೂ ಕೈಗಳು, ಕಾಲು ಊತ: ಈ ಹಿನ್ನೆಲೆಯಲ್ಲಿ ರೂಪಾದೇವಿಯನ್ನು ಪುರುಷ ಪೊಲೀಸರೇ ಜೀಪಿನ ಮೂಲಕ ಠಾಣೆಗೆ ಕರೆದೊಯ್ದು ಲಾಠಿ ಮತ್ತು ಬೆಲ್ಟ್‌ನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ರೂಪಾದೇವಿಯ ಎರಡೂ ಕೈಗಳು ಮತ್ತು ಕಾಲು ಊತ ಬಂದಿದೆ. ಕೆಲವೆಡೆ ಲಾಠಿ ಏಟಿನ ಬರೆ ಬಂದಿದೆ. ಜೊತೆಗೆ ಕೈಗಳೂ ನೀಲಿಗಟ್ಟಿವೆ. ಈ ವಿಚಾರ ತಿಳಿದ ರೈತ ಹೋರಾಟಗಾರ್ತಿ ಸುನಂದಾ ಜಯರಾಂ, ಪೂರ್ಣಿಮಾ, ಕರ್ನಾಟಕ ಜನಶಕ್ತಿಯ ಸಿದ್ದರಾಜು, ಮಂಗಲ ಲಂಕೇಶ್, ಕಮಲ ಇತರರು ಠಾಣೆಗೆ ತೆರಳಿ ಪೊಲೀಸ್ ಠಾಣೆಯಿಂದ ಆಕೆಯನ್ನು ಹೊರಗೆ ಕರೆತಂದು, ನೀರು ಕುಡಿಸಿ ಸಮಾಧಾನಪಡಿಸಿದ ಬಳಿಕ, ಆಕೆಯಿಂದ ಮಾಹಿತಿ ಕೇಳಿ ತಿಳಿದುಕೊಂಡಿದ್ದಾರೆ.

ಹಲ್ಲೆಗೊಳಗಾದ ಮಹಿಳೆ ರೂಪಾದೇವಿ ಮಾತನಾಡಿದ್ದು, ''ಮನೆಯ ಬಳಿಯ ಜಾಗ ಕ್ಲೀನ್ ಮಾಡಿಸುತ್ತಿದ್ದೆವು. ಆಗ ಅಲ್ಲಿಯೇ ರಸ್ತೆಯ ಪಕ್ಕ ಹಸು ಕಟ್ಟಿದ್ದೆ. ಆ ನಂತರ ಅಲ್ಲಿಗೆ ಬಂದ ಪೊಲೀಸರು ಜೀಪ್ ಹತ್ತಿ ಎಂದರು. ನಂತರ ಹತ್ತಿಸಿಕೊಂಡು ಹೋದರು. ನಂತರ ಠಾಣೆಯ ಒಂದು ರೂಮಿಗೆ ಕರೆದುಕೊಂಡು ಹೋದರು. ಅಲ್ಲಿ ಒಬ್ಬರು ಮಹಿಳೆ ಹಾಗೂ ಇನ್ನೊಬ್ಬರು ಇದ್ದರು. ನಂತರ ಚೀಲಕ ಹಾಕಿ ಬೆಲ್ಟ್​ನಿಂದ ಹಲ್ಲೆ ನಡೆಸಿದರು'' ಎಂದು ತಿಳಿಸಿದರು.

ಠಾಣೆಗೆ ಕರೆತಂದು ಮಹಿಳೆಗೆ ಲಾಠಿ ಏಟು

ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ: ಈ ಬಗ್ಗೆ ಮಹಿಳಾ ಮುನ್ನಡೆ ಸಂಘಟನೆಯ ನಾಯಕಿ ಪೂರ್ಣಿಮಾ ಮಾತನಾಡಿ, ''ಅಶೋಕನಗರದ ರೂಪ ಎಂಬ ಒಬ್ಬ ಮಹಿಳೆಗೆ ಹಸುವನ್ನು ರಸ್ತೆಯಲ್ಲಿ ಬಿಟ್ಟಿದ್ದರು ಎಂಬ ಕ್ಲುಲ್ಲಕ ಕಾರಣಕ್ಕೆ ಪೊಲೀಸರು ಜೀಪಿನಲ್ಲಿ ಹತ್ತಿಸಿಕೊಂಡು ಬಂದಿದ್ದಾರೆ. ನಂತರ ಸಿಸಿಟಿವಿ ಕವರ್ ಆಗದಂತಹ ರೂಮ್​ನಲ್ಲಿ ಲಾಕ್ ಮಾಡಿಕೊಂಡು ಮೂರು ಸಿಬ್ಬಂದಿಯೊಂದಿಗೆ ಸೇರಿ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಆ ಹೆಣ್ಣು ಮಗಳ ಮೇಲೆ ಯಾವುದೇ ರೀತಿಯ ಕಂಪ್ಲೆಂಟ್ ಬಂದಿಲ್ಲ. ಯಾರೂ ದೂರನ್ನು ಕೊಟ್ಟಿಲ್ಲ ಎಂದ ಮೇಲೆ ಪಿಎಸ್​ಐ ಏಕೆ ಅವರನ್ನು ಠಾಣೆಗೆ ಕರೆತಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂಬುದು ಗೊತ್ತಾಗಬೇಕು'' ಎಂದಿದ್ದಾರೆ.

ಮಿಮ್ಸ್‌ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ:ಥಳಿತಕ್ಕೊಳಗಾದ ಮಹಿಳೆ ಮಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಎಸ್​ಐ ವಿರುದ್ದ ಎಫ್​ಐಆರ್ ದಾಖಲಾಗಿದೆ. ಹಲ್ಲೆ ಖಂಡಿಸಿ ಪೂರ್ವ ಪೊಲೀಸ್ ಠಾಣೆಯೆದುರು ಪ್ರಗತಿಪರ ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ಇದನ್ನೂ ಓದಿ:ನೇಜಾರು ಕೊಲೆ ಪ್ರಕರಣ: ಮಹಜರು ವೇಳೆ ಸಾರ್ವಜನಿಕರ ಆಕ್ರೋಶ, ಪೊಲೀಸರಿಂದ ಲಾಠಿ ಪ್ರಹಾರ

ABOUT THE AUTHOR

...view details