ಕರ್ನಾಟಕ

karnataka

ಪೆನ್​ಡ್ರೈವ್​ ಪ್ರಕರಣ: ತ್ವರಿತಗತಿಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಎಸ್​ಐಟಿಗೆ ಸೂಚನೆ; ಜಿ.ಪರಮೇಶ್ವರ್​​​ - G Parameshwar

By ETV Bharat Karnataka Team

Published : Apr 29, 2024, 12:58 PM IST

ಹಾಸನ ಪೆನ್​ಡ್ರೈವ್​ ಪ್ರಕರಣದಲ್ಲಿ ಎಸ್ಐಟಿ ತಂಡವು ಮುಕ್ತವಾಗಿ ಕೆಲಸ ಮಾಡಲಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್​​​​​ ತಿಳಿಸಿದ್ದಾರೆ.

ಪೆನ್​ಡ್ರೈವ್​ ಪ್ರಕರಣ: ತ್ವರಿತಗತಿಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ; ಜಿ.ಪರಮೇಶ್ವರ್​​​
ಪೆನ್​ಡ್ರೈವ್​ ಪ್ರಕರಣ: ತ್ವರಿತಗತಿಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ; ಜಿ.ಪರಮೇಶ್ವರ್​​​

ಬೆಂಗಳೂರು: ಹಾಸನ ಪೆನ್​ಡ್ರೈವ್​ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ಎಸ್ಐಟಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್​ ಸ್ಪಷ್ಟಪಡಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದ ತಂಡ ಪ್ರಕರಣದ ತನಿಖೆಯನ್ನು ಕೈಗೊಂಡಿದೆ. ಪೆನ್‌ಡ್ರೈವ್‌ಗಳನ್ನು ವಶಪಡಿಸಿಕೊಂಡು ವೈಜ್ಞಾನಿಕ ವರದಿಗಾಗಿ ಎಫ್‌ಎಸ್‌ಎಲ್‌ಗೆ ರವಾನಿಸಲಿದ್ದಾರೆ‌. ಇದೇ ವೇಳೆ, ಸಾಕ್ಷಿಗಳ ಹೇಳಿಕೆಯನ್ನು ಪಡೆಯಲಿದ್ದಾರೆ ಎಂದರು.

ಎಸ್ಐಟಿ ತಂಡವು ಮುಕ್ತವಾಗಿ ಕೆಲಸ ಮಾಡಲಿದೆ. ಪ್ರಕರಣದ ವರದಿ ಸಲ್ಲಿಸಲು ಯಾವುದೇ ರೀತಿಯ ಸಮಯ ನಿಗದಿ ಮಾಡಲಾಗಿಲ್ಲ. ತನಿಖೆ ವಿಳಂಬವಾಗಬಾರದು ಎಂಬ ದೃಷ್ಟಿಯಿಂದ ತ್ವರಿತಗತಿಯಲ್ಲಿ ತನಿಖೆ ನಡೆಸುವಂತೆ ಮೌಖಿಕವಾಗಿ ತಿಳಿಸಲಾಗಿದೆ. ವರದಿಯನ್ನು ನಾಳೆಯೇ ಕೊಡಿ, ನಾಡಿದ್ದು ಕೊಡಿ ಎಂದು ದಿನ ನಿಗದಿಪಡಿಸಿಲ್ಲ ಎಂದು ಇದೇ ವೇಳೆ ಗೃಹ ಸಚಿವರು ಸ್ಪಷ್ಟಪಡಿಸಿದರು.

ಮಹಿಳಾ ಆಯೋಗವು ಬರೆದ ಪತ್ರದ ಆಧಾರದ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ದೂರುಗಳನ್ನು ಎಸ್‌ಐಟಿ ಪಡೆಯಲಿದೆ. ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಸ್‌ಐಟಿ ಕೆಲಸ ಮಾಡಲಿದೆ. ಸಂತ್ರಸ್ತರಿಗೆ ಜೀವ ಭಯವಿದ್ದರೆ ಪೊಲೀಸ್ ಭದ್ರತೆ ನೀಡಲಾಗುವುದು ಎಂದು ಇದೇ ವೇಳೆ ತಿಳಿಸಿದರು‌

ಸಂಸದ ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಸಂತಾಪ:ದಲಿತ ಸಮುದಾಯದ ಹಿರಿಯ ನಾಯಕರಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ‌. ಯುವಕರಾಗಿದ್ದಾಗಲೇ ರಾಜಕೀಯ ಜೀವನ ಪ್ರಾರಂಭಿಸಿದ ಅವರು, ರಾಜ್ಯದ ಜನರ ಹಿತಕಾಯುವ ನಿಟ್ಟಿನಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದವರು‌. ಅವರಿಗೆ ಸಂತಾಪಗಳು ಎಂದರು. ಆರು ಬಾರಿ ಸಂಸದರಾಗಿ, ಕೇಂದ್ರದ ಸಚಿವರಾಗಿ, ರಾಜ್ಯ ಸಚಿವರಾಗಿದ್ದ ವೇಳೆ ದಲಿತರ ಧ್ವನಿಯಾಗಿ ಅನೇಕ ವಿಚಾರಗಳನ್ನು ಸದನಗಳಲ್ಲಿ ಪ್ರಸ್ತಾಪಿಸಿದ್ದರು. ದಲಿತರಿಗೆ‌ ಆದ ಅನ್ಯಾಯವನ್ನು ಖಂಡಿಸುತ್ತಿದ್ದರು. ನೇರವಂತಿಕೆಯ ನಾಯಕನನ್ನು ಕಳೆದುಕೊಂಡಿದ್ದೇವೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಕುಟುಂಬವರ್ಗಕ್ಕೆ, ಅಭಿಮಾನಿಗಳಿಗೆ ದೇವರು ದುಃಖಭರಿಸುವ ಶಕ್ತಿ ನೀಡಲಿ ಎಂದು ತಿಳಿಸಿದರು.

ಇದನ್ನೂ ಓದಿ:ಪೆನ್​ಡ್ರೈವ್ ವಿಡಿಯೋ ಕೇಸ್, ಹೆಚ್​​​​ಡಿಕೆ ನಿಲುವೇ ನಮ್ಮ ನಿಲುವು: ಆರ್​.ಅಶೋಕ್ - R Ashok React

ABOUT THE AUTHOR

...view details