ಕಾರವಾರ (ಉತ್ತರಕನ್ನಡ ) : ಜಿಲ್ಲೆಯಲ್ಲಿ ಮಂಗನ ಕಾಯಿಲೆ (ಕೆಎಫ್ಡಿ) ಹೆಚ್ಚಾಗಿದ್ದು, ಕಳೆದ 20 ದಿನಗಳ ಹಿಂದೆ ಜ್ವರಕ್ಕೆ ತುತ್ತಾಗಿದ್ದ ವೃದ್ಧೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 2 ಕ್ಕೆ ಏರಿಕೆಯಾಗಿದೆ. ಮೃತರನ್ನು ಸಿದ್ದಾಪುರ ತಾಲೂಕಿನ ಕೂರ್ಲಕೈ ಗ್ರಾಮದ 60 ವರ್ಷದ ವೃದ್ಧೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ಸಿದ್ದಾಪುರದ ಜಿಡ್ಡಿಯ 65 ವರ್ಷದ ವೃದ್ಧೆ ಮಂಗನ ಕಾಯಿಲೆಗೆ ಬಲಿಯಾಗಿದ್ದರು.
20 ದಿನಗಳ ಹಿಂದೆ ಮಂಗನ ಜ್ವರ ಕಾಣಿಸಿಕೊಂಡಿದ್ದು, ತೀವ್ರ ಜ್ವರದ ಲಕ್ಷಣಗಳಿಂದ ಬಳಲುತ್ತಿದ್ದರು. ಬಳಿಕ ಆಕೆಯನ್ನು ಸ್ಥಳೀಯ ಆಸ್ಪತ್ರೆಯಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಇನ್ನು ಸಿದ್ದಾಪುರ ತಾಲೂಕಿನಲ್ಲಿಯೇ ಮಂಗನ ಕಾಯಿಲೆಗೆ ತುತ್ತಾದ ಪ್ರಕರಣಗಳ ಸಂಖ್ಯೆ 43ಕ್ಕೆ ಏರಿಕೆಯಾಗಿದೆ.
ಸೋಂಕಿತ ಮಂಗನ ರಕ್ತ ಹೀರುವ ಉಣ್ಣೆಗಳು ಈ ವೈರಸ್ ಅನ್ನು ಮನುಷ್ಯರಿಗೆ ತಗುಲಿಸಿದಾಗ ಮೂರು-ನಾಲ್ಕು ದಿನಗಳ ನಂತರ ಇದ್ದಕ್ಕಿದ್ದಂತೆ ಜ್ವರ, ದೃಷ್ಟಿದೋಷ, ತಲೆನೋವು, ಮಾನಸಿಕ ಅಸಮತೋಲನ, ಮೈ ಕೈ ನೋವು, ವಾಂತಿ, ಅತಿಸಾರ ಮತ್ತು ಪ್ಲೆಟ್ಲೇಟ್ ಸಂಖ್ಯೆಯಲ್ಲಿ ಇಳಿಕೆ ಮತ್ತು ಒಸಡಿನಲ್ಲಿನ ರಕ್ತಸ್ರಾವ ಹೀಗೆ ಆರಂಭಿಕ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈವರೆಗೆ ಇದಕ್ಕೆ ನಿಖರ ಔಷಧಿ ಇಲ್ಲ. ಆದರೆ ಜಿಲ್ಲೆಯಲ್ಲಿ ಸದ್ಯ ಕಾಡಿನೊಂದಿಗೆ ಸಂಪರ್ಕ ಹೊಂದಿರುವ ಕೆಲ ಭಾಗದಲ್ಲಿ ಮತ್ತು ಮಂಗನ ಕಾಯಿಲೆ ಕಾಣಿಸಿಕೊಂಡ ಪ್ರದೇಶದಲ್ಲಿ ತೈಲವನ್ನು ನೀಡಲಾಗುತ್ತಿದೆ.