ಕರ್ನಾಟಕ

karnataka

ಹಳೇ ಹುಬ್ಬಳ್ಳಿ ‌ಗಲಭೆ ಪ್ರಕರಣ : 111 ಜನರಿಗೆ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಆದೇಶ

By ETV Bharat Karnataka Team

Published : Feb 16, 2024, 7:42 PM IST

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ 111 ಜನರಿಗೆ ಜಾಮೀನು ಮಂಜೂರು ಮಾಡಿ ಹೈಕೋರ್ಟ್​ ಆದೇಶಿಸಿದೆ.

ಹೈಕೋರ್ಟ್
ಹೈಕೋರ್ಟ್

ಅಂಜುಮನ್ ಸಂಸ್ಥೆ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರು

ಹುಬ್ಬಳ್ಳಿ /ಬೆಂಗಳೂರು: ಮಸೀದಿಯ ಮೇಲೆ ಭಗವಾಧ್ವಜ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದನ್ನು ಖಂಡಿಸಿ, ಹುಬ್ಬಳ್ಳಿ ಪೊಲೀಸ್​ ಠಾಣೆ ಮುಂದೆ ಗಲಭೆ ನಡೆಸಿದ್ದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ 111 ಮಂದಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಮಹಮ್ಮದ್​ ಆರೀಫ್​ ರಿಜ್ವಿ ಎಂಬುವರು ಸೇರಿದಂತೆ 111 ಮಂದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್​ ಕುಮಾರ್​ ಮತ್ತು ಟಿ ವೆಂಕಟೇಶ್​ ನಾಯ್ಕ್​ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ಮಾಡಿದೆ.
ಅಲ್ಲದೆ, ಎಲ್ಲ ಅರ್ಜಿದಾರರು ವಿಚಾರಣೆಗೆ ತಪ್ಪದೇ ಹಾಜರಾಗಬೇಕು, ಭಾನುವಾರ ಠಾಣೆಗೆ ಬಂದು ಸಹಿ ಹಾಕಬೇಕು. ಸಾಕ್ಷ್ಯಗಳ ನಾಶಕ್ಕೆ ಮುಂದಾಗಬಾರದು. ಒಬ್ಬರು ಶ್ಯೂರಿಟಿ ಮತ್ತು 2 ಲಕ್ಷ ರೂ. ಗಳ ಬಾಂಡ್​ ನೀಡಬೇಕು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ರಹಮತ್ತುಲ್ಲಾ ಕೊತ್ವಾಲ್​, ಇದೇ ಪ್ರಕರಣದಲ್ಲಿ ಆರೋಪಗಳಾಗಿದ್ದ 39 ಮಂದಿಗೆ ಸುಪ್ರೀಂಕೋರ್ಟ್ ಈಗಾಗಲೇ ಜಾಮೀನು ನೀಡಿದೆ. ಆದ್ದರಿಂದ ಅರ್ಜಿದಾರರಿಗೂ ಜಾಮೀನು ಮಂಜೂರು ಮಾಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಮಸೀದಿ ಮೇಲೆ ಭಗವಾಧ್ವಜ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದನ್ನು ಖಂಡಿಸಿ ನೂರಾರು ಮುಸ್ಲಿಂ ಸಮುದಾಯದವರು 2022ರ ಏಪ್ರಿಲ್​ 16 ರಂದು ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆ ಎದುರು ಗಲಭೆ ನಡೆಸಿದ್ದರು.

ಈ ವೇಳೆ ಪೊಲೀಸ್ ಠಾಣೆ, ಆಸ್ಪತ್ರೆ, ದೇವಸ್ಥಾನ, ಮನೆಗಳ‌ ಮೇಲೆ ಕಲ್ಲು ತೂರಾಟ ಕೂಡ ನಡೆದಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಅಲ್ಲದೆ, ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಎಫ್‌ಐಆರ್‌ ದಾಖಲಾಗಿದ್ದು, 158 ಮಂದಿಯನ್ನು ಬಂಧಿಸಲಾಗಿತ್ತು. ಎನ್​ಐಎ ಮತ್ತು ಯುಎಪಿಎ ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದ ಪೊಲೀಸರು ಬರೋಬ್ಬರಿ 4 ಸಾವಿರ ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಪ್ರಕರಣದಲ್ಲಿ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಎಐಎಂಐಎಂ ಕಾರ್ಪೋರೇಟರ್‌ ನಜೀರ್‌ ಹೊನ್ಯಾಳ ಸೇರಿ 7 ಬಾಲಾಪರಾಧಿಗಳಿಗೆ ಜಾಮೀನು ಸಿಕ್ಕಿತ್ತು.

ಇನ್ನುಳಿದ 151 ಆರೋಪಿಗಳಲ್ಲಿ ಕೆಲ ಮಂದಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಉಳಿದ 111 ಮಂದಿ ಜಾಮೀನು ಕೋರಿ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಎನ್​ಐಎ ವಿಶೇಷ ನ್ಯಾಯಾಲಯ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ‌ ಕುರಿತಂತೆ ಅಂಜುಮನ್ ಸಂಸ್ಥೆ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರು ಮಾಹಿತಿ ನೀಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಮುಸ್ಲಿಂ ಸಮಾಜಕ್ಕೆ ಸಂತಸ ತಂದಿದೆ.‌ ಏನು ತಪ್ಪು ಮಾಡದ ಮುಗ್ದರ ಮೇಲೆ ಕೇಸ್ ಹಾಕಿ ಜೈಲಿಗೆ ಕಳುಹಿಸಲಾಗಿತ್ತು. ಅವರ ಕುಟುಂಬಸ್ಥರು ಸಂಕಷ್ಟದಲ್ಲಿದ್ದರು. ದೇವರ ಕೃಪೆಯಿಂದ ಅಂಜುಮನ್ ಸಂಸ್ಥೆ ಕಾನೂನು ಹೋರಾಟದಿಂದ ಮಕ್ಕಳಿಗೆ ಜಾಮೀನು ಸಿಕ್ಕಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ :ಹಳೆ ಹುಬ್ಬಳ್ಳಿ ಗಲಭೆ ಪ್ರಕರಣ: ಇಬ್ಬರಿಗೆ ಸುಪ್ರೀಂ ಕೋರ್ಟ್​ನಿಂದ ಜಾಮೀನು ಮಂಜೂರು

ABOUT THE AUTHOR

...view details