ಕಾರವಾರ:ದೇಶಕ್ಕೆ ವಿದ್ಯುತ್ ಒದಗಿರುವ ಹಲವು ಯೋಜನೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿವೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಜಿಲ್ಲೆಯ 1,600ಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಹೌದು, ಜಿಲ್ಲೆಯ ಕೈಗಾ, ಕದ್ರಾ, ಅಂಬಿಕಾನಗರ, ಗೇರುಸೊಪ್ಪೆಯಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಆದರೆ ದೀಪದ ಬುಡದಲ್ಲೇ ಕತ್ತಲು ಎನ್ನುವಂತೆ ಜೋಯಿಡಾ, ಕದ್ರಾ, ಕಾರವಾರ ಸೇರಿದಂತೆ ಹಲವು ತಾಲೂಕಿನ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಜೋಯಿಡಾ ಭಾಗದ ಡಿಗ್ಗಿ, ಉಳವಿ ಪಂಚಾಯಿತಿಯ ಅಂಬೂಳಿ, ಮುಂಬರ್ಗಿ ಸೇರಿದಂತೆ ಹಲವು ಹಳ್ಳಿಗಳ ಜನರು ಈಗಲೂ ಚಿಮಣಿ ದೀಪವನ್ನು ಅವಲಂಭಿಸಿದ್ದಾರೆ.
ಸ್ಥಳೀಯರಾದ ಪ್ರಶಾಂತ ಮಹಾಳೆ ಮಾತನಾಡಿ, "ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ಪಾದಿಸಿದ ವಿದ್ಯುತ್ ಅನ್ನು ರಾಜ್ಯಕ್ಕೆ ಮತ್ತು ನೆರೆಯ ಗೋವಾಕ್ಕೆ ಪೂರೈಸಲಾಗುತ್ತಿದೆ. ಆದರೆ ಇಲ್ಲಿನ 1,600 ಹೆಚ್ಚು ಮನೆಗಳಿಗೆ ಈಗಲೂ ವಿದ್ಯುತ್ ಸಂಪರ್ಕವಿಲ್ಲದಿರುವುದು ಶೋಚನೀಯ. ಇಲ್ಲಿನ ಹಲವು ಗ್ರಾಮಗಳ ಜನರು ವಿದ್ಯುತ್ ಸಂಪರ್ಕವಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಸ್ಥಳೀಯರು ಹಲವು ಬಾರಿ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ವಿದ್ಯುತ್ ಸಂಪರ್ಕ ಇನ್ನೂ ಸಿಕ್ಕಿಲ್ಲ. ರಾಜ್ಯ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ. ಆ ಸೌಲಭ್ಯ ಕೂಡ ಇಲ್ಲಿನ ಜನರಿಗೆ ಇಲ್ಲದಂತಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ವಾಸವಾಗಿರುವ ಜನರಿಗೆ ಇದು ಮರೀಚಿಕೆಯಾಗಿದೆ" ಎಂದು ಅಳಲು ತೋಡಿಕೊಂಡರು.