ಕರ್ನಾಟಕ

karnataka

ಸರ್ಕಾರಿ ಅನುದಾನದಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ರಾಜಕಾರಣಿಗಳ ಹೆಸರು: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

By ETV Bharat Karnataka Team

Published : Mar 12, 2024, 8:00 PM IST

ದಾವಣಗೆರೆ ನಿವಾಸಿ ವಕೀಲ ಎ.ಸಿ. ರಾಘವೇಂದ್ರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಸರ್ಕಾರಕ್ಕೆ ನೋಟಿಸ್​ ಜಾರಿಗೊಳಿಸಿದೆ.

High Court
ಹೈಕೋರ್ಟ್​

ಬೆಂಗಳೂರು: ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾದ ಸರ್ಕಾರಿ ಕಟ್ಟಡ ಮತ್ತಿತರ ಸ್ಥಳಗಳಿಗೆ ಜೀವಂತವಾಗಿರುವ ರಾಜಕಾರಣಿಗಳ ಹೆಸರಗಳು ನಾಮಕರಣ ಮಾಡುವುದನ್ನು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿ ಕುರಿತಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಸರ್ಕಾರದ ಅನುದಾನದಲ್ಲಿ ಕಟ್ಟಲಾಗಿರುವ ಕಟ್ಟಡಗಳಿಗೆ ಜೀವಂತವಾಗಿರುವ ರಾಜಕಾರಣಿಗಳ ಹೆಸರು ನಾಮಕರಣ ಮಾಡುವುದನ್ನು ಆಕ್ಷೇಪಿಸಿ ದಾವಣಗೆರೆ ನಿವಾಸಿ ವಕೀಲ ಎ.ಸಿ. ರಾಘವೇಂದ್ರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಅಲ್ಲದೇ, ದಾವಣಗೆರೆಯಲ್ಲಿ ಪಾರ್ಕ್, ಬಸ್ ನಿಲ್ದಾಣ, ಜಿ.ಪಂ ಸಭಾಂಗಣ ಮತ್ತಿತರ ಸರ್ಕಾರಿ ಕಟ್ಟಡಗಳಿಗೆ ಸ್ಥಳೀಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಹೆಸರನ್ನು ನಾಮಕರಣ ಮಾಡಿರುವುದನ್ನು ಅರ್ಜಿಯಲ್ಲಿ ಆಕ್ಷೇಪಿಸಲಾಗಿದ್ದು, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ, ದಾವಣಗೆರೆ ಜಿಲ್ಲಾಧಿಕಾರಿ, ದಾವಣಗೆರೆ ನಗರ ಸಭೆ, ದಾವಣಗೆರೆ ಜಿ.ಪಂಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮೇ 29ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಸರ್ಕಾರದ ಅನುದಾನಲ್ಲಿ ಕಟ್ಟಲಾದ ಸರ್ಕಾರಿ ಕಟ್ಟಡಗಳಿಗೆ ಜೀವಂತ ರಾಜಕಾರಣಿಗಳ ಹೆಸರು ಇಡಬಾರದು ಎಂದು 2012ರಲ್ಲಿ ಇದೇ ಹೈಕೋರ್ಟ್ ಆದೇಶವೊಂದನ್ನು ನೀಡಿದೆ. ಚನ್ನಗಿರಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಹೆಸರನ್ನು ತಾಲೂಕು ಕ್ರೀಡಾಂಗಣಕ್ಕೆ ಇಡಲಾಗಿತ್ತು. ಸರ್ಕಾರದ ಅನುದಾನದಲ್ಲಿ ಕಟ್ಟಲಾದ ಆಟದ ಮೈದಾನಕ್ಕೆ ಮಾಡಾಳು ವಿರೂಪಾಕ್ಷಪ್ಪ ಆಟದ ಮೈದಾನ ಎಂದು ನಾಮಕರಣ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ಆಗ ಹೈಕೋರ್ಟ್ ಆದೇಶದಂತೆ ಮಾಡಾಳು ವಿರೂಪಾಕ್ಷಪ್ಪ ಆಟದ ಮೈದಾನದ ಹೆಸರು ಬದಲಾಯಿಸಿ ತಾಲೂಕು ಆಟದ ಮೈದಾನ ಎಂದು ನಾಮಕರಣ ಮಾಡಲಾಗಿತ್ತು. ಅದೇ ರೀತಿ ದಾವಣಗೆರೆಯಲ್ಲಿ ಸರ್ಕಾರದ ಅನುದಾನದಲ್ಲಿ ಕಟ್ಟಲಾದ ಅನೇಕ ಕಟ್ಟಡಗಳು, ಪಾರ್ಕ್, ಬಸ್ ನಿಲ್ದಾಣ, ರಸ್ತೆಗಳಿಗೆ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ ಅವರ ಹೆಸರಗಳನ್ನು ಇಡಲಾಗಿದೆ. ಇದನ್ನು ತೆರವುಗೊಳಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಕೋರಿದರು.

ಅರ್ಜಿಯಲ್ಲಿ ಏನಿದೆ?:ದಾವಣಗೆರೆ ನಗರಸಭೆಯು ಸಾರ್ವಜನಿಕರ ಹಣದಿಂದ ಹಳೆ ಪುಣೆ - ಬೆಂಗಳೂರು ರಸ್ತೆಯಲ್ಲಿ ಕಟ್ಟಿರುವ ಬಸ್ ನಿಲ್ದಾಣಕ್ಕೆ ಶಾಮನೂರು ಶಿವಶಂಕರಪ್ಪ ಬಸ್ ನಿಲ್ದಾಣ ಎಂದು ಹೆಸರಿಡಲಾಗಿದೆ. ಕುಂದವಾಡ ಗ್ರಾಮದಲ್ಲಿರುವ ಕುಂದವಾಡ ಕೆರೆಯನ್ನು ಸಹ ದಾವಣಗೆರೆ ನಗರಸಭೆ ನಿರ್ಮಾಣ ಮಾಡಿ, ನಿರ್ವಹಣೆ ಮಾಡುತ್ತಿದೆ. ದಾವಣಗೆರೆ ನಗರದ ಕುಡಿವ ನೀರಿಗಾಗಿ ಬಳಸಲಾಗಿರುವ ಈ ಕೆರೆಯ ಹೆಸರನ್ನು 'ಎಸ್.ಎಸ್. ಮಲ್ಲಿಕಾರ್ಜುನ ಸಾಗರ' ಎಂದು ಇಡಲಾಗಿದೆ.

ಜಿ.ಪಂ ಸಭಾಂಗಣಕ್ಕೆ 'ಎಸ್.ಎಸ್. ಮಲ್ಲಿಕಾರ್ಜುನ ಸಭಾಂಗಣ' ಎಂದು ಹೆಸರಿಡಲಾಗಿದೆ. ನಗರಸಭೆಯ ಸಭಾಂಗಣಕ್ಕೆ 'ಡಾ. ಶಾಮನೂರು ಶಿವಶಂಕರಪ್ಪ ಸಭಾಂಗಣ' ಎಂದು ನಾಮಕರಣ ಮಾಡಲಾಗಿದೆ. ನಗರದಲ್ಲಿರುವ ಪಾರ್ಕ್‌ಗೆ 'ಡಾ. ಶಾಮನೂರು ಶಿವಶಂಕರಪ್ಪ ಉದ್ಯಾನವನ' ಎಂದು ಹೆಸರಿಡಲಾಗಿದೆ. ಹುಡ್ಕೋ ಬಡಾವಣೆಗೆ ಎಸ್‌ಎಸ್‌ಎಂ ನಗರ (ಡಾ. ಶಾಮನೂರು ಶಿವಶಂಕರಪ್ಪ ನಗರ) ಎಂದು ಹೆಸರಿಡಲಾಗಿದೆ. ಇದು ಹೈಕೋರ್ಟ್ ಆದೇಶಕ್ಕೆ ತದ್ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ:ಭಾರತದ ಗಗನಯಾತ್ರಿಗಳಿಗೆ 'ವ್ಯೋಮನೌಟ್ಸ್​' ನಾಮಕರಣ: ಯಾಕೆ ಗೊತ್ತಾ?

ABOUT THE AUTHOR

...view details