ಕರ್ನಾಟಕ

karnataka

'ಶಿಕ್ಷಣದಲ್ಲಿ ಸ್ಪಷ್ಟ ನೀತಿಯ ಕೊರತೆ': ಶಿಕ್ಷಣ ತಜ್ಞರ ಸಭೆ ಕರೆಯುವಂತೆ ಎನ್.ರವಿಕುಮಾರ್ ಆಗ್ರಹ

By ETV Bharat Karnataka Team

Published : Mar 10, 2024, 5:41 PM IST

ರಾಜ್ಯ, ಕೇಂದ್ರೀಯ ಪಠ್ಯಕ್ರಮಗಳ ಕುರಿತು ಅನೇಕ ಶಿಕ್ಷಣ ಸಂಸ್ಥೆಗಳಿಂದ ಗೊಂದಲಮಯವಾದ ನಿರ್ಧಾರಗಳ ಕುರಿತಂತೆ ಪೋಷಕರ, ತಜ್ಞರ ಸಭೆಯನ್ನು ಶೀಘ್ರದಲ್ಲೇ ಶಿಕ್ಷಣ ಸಚಿವರು ಕರೆಯಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಒತ್ತಾಯಿಸಿದರು.

N. Ravikumar spoke at a press conference.
ವಿಪ ಮುಖ್ಯ ಸಚೇತಕ ಎನ್. ರವಿಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಎನ್.ರವಿಕುಮಾರ್ ಸುದ್ದಿಗೋಷ್ಠಿ

ಬೆಂಗಳೂರು:ಗರಿಷ್ಠ ಸಂಖ್ಯೆಯ ಪರೀಕ್ಷೆಗಳು, ಸ್ಪಷ್ಟ ನೀತಿ ಇಲ್ಲದೇ ಇರುವುದನ್ನು ಚರ್ಚಿಸಲು ಶಿಕ್ಷಣ ತಜ್ಞರ ಸಭೆ ಕರೆಯಬೇಕೆಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಒತ್ತಾಯಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ಸುಮಾರು 8ರಿಂದ 8.5 ಲಕ್ಷ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರಿಪರೇಟರಿ ಪರೀಕ್ಷೆ ನಡೆಸಲು 50 ರೂಪಾಯಿ ಸಂಗ್ರಹಿಸಿ ಪ್ರಶ್ನೆಪತ್ರಿಕೆ ನೀಡುವುದಾದರೆ, ಉತ್ತರ ಪತ್ರಿಕೆಯನ್ನು ನೀವೇ ತರಬೇಕು ಎನ್ನುವುದಾದರೆ ಸರಕಾರ ಯಾವ ಅಧೋಗತಿಗೆ ತಲುಪಿದೆ ಎನ್ನುವುದು ಗೊತ್ತಾಗುತ್ತದೆ. ಇದು ನೋವು ತರಿಸುವಂಥ ವಿಚಾರ. ಶಿಕ್ಷಣದ ಕುರಿತ ಕಳಕಳಿಯಿಂದ ಇದನ್ನು ಬಿಜೆಪಿ ಪ್ರಶ್ನಿಸುತ್ತಿದೆ ಎಂದರು.

11 ಮತ್ತು 12ನೇ ತರಗತಿಗೆ ಎರಡೆರಡು ಸಪ್ಲಿಮೆಂಟರಿ ಪರೀಕ್ಷೆ ನಡೆಸಲು ಸರಕಾರ ಅಸ್ತು ಎಂದಿದೆ. ಎಸ್ಸೆಸ್ಸೆಲ್ಸಿ ಪ್ರಿಪರೇಟರಿ ಪರೀಕ್ಷೆ ನಡೆಸಲು ಹಣ ಕೊಡುತ್ತಿಲ್ಲ. ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿ, ಕೇವಲ ಪ್ರಶ್ನೆಪತ್ರಿಕೆ ನೀಡುವುದಾಗಿ ಹೇಳುತ್ತಾರೆ. ಆದರೆ ಉತ್ತರ ಪತ್ರಿಕೆ ನೀಡುವುದಿಲ್ಲ ಎಂದರು.

ಶಿಕ್ಷಕರು ತಡವಾಗಿ ಶಾಲೆಗೆ ಬರುವಂತಾಗಿದೆ. ಹಳ್ಳಿಯಿಂದ ಸಣ್ಣಪುಟ್ಟ ಪಟ್ಟಣಕ್ಕೆ ಬರಲು ಶೇ.90 ಶಿಕ್ಷಕ ವರ್ಗ ಬಸ್‌ಗಳನ್ನು ಆಶ್ರಯಿಸಿದೆ. ಉಚಿತ ಬಸ್‍ಗಳಿಂದಾಗಿ ಬಸ್‍ಗಳು ಲಭ್ಯವಿಲ್ಲ. ಬಸ್​​ಗಳು ಕಡಿಮೆಯಾಗಿವೆ. ವಿದ್ಯಾರ್ಥಿಗಳು ತಡವಾಗಿ ಬರುತ್ತಿದ್ದಾಗೆ. ಉಚಿತ ಪ್ರಯಾಣದ ನಂತರ ಅರ್ಧಕ್ಕರ್ಧ ಬಸ್ ಕಡಿಮೆಯಾಗಿದೆ. ಬೆಳಗ್ಗೆ 10ಕ್ಕೆ ಶಾಲೆ ತೆರೆದರೆ 11,12 ಗಂಟೆಗೆ ವಿದ್ಯಾರ್ಥಿಗಳು ಬರುವಂತಾಗಿದೆ. ಶಿಕ್ಷಕರೂ ಶಾಲೆಗೆ ಸಕಾಲದಲ್ಲಿ ಬರಲಾಗುತ್ತಿಲ್ಲ ಎಂದು ದೂರಿದರು.

ಶಾಲೆಗಳಲ್ಲಿ ಮೂಲಸೌಕರ್ಯವಿಲ್ಲ. ಕುಡಿಯುವ ನೀರು, ಶೌಚಾಲಯ ಸೌಕರ್ಯ ಇಲ್ಲ. ಬಿಜೆಪಿ ಸರಕಾರ ಇದ್ದಾಗ ಮಂಜೂರಾದ ವಿವೇಕ ಕೊಠಡಿಗಳನ್ನು ರದ್ದು ಮಾಡಿದ್ದಾರೆ. 13-14 ಸಾವಿರ ಕೊಠಡಿ ನಿರ್ಮಾಣಕ್ಕೆ ಬೊಮ್ಮಾಯಿ ಅವರ ಕಾಲದಲ್ಲಿ ಸರಕಾರ ನಿರ್ಣಯಿಸಿತ್ತು. ಅದನ್ನು ರದ್ದು ಮಾಡಿದ್ದಾರೆ ಎಂದು ಆರೋಪಿಸಿದರು.

'ಮಧು ಬಂಗಾರಪ್ಪನವರಿಗೆ ಶಿಕ್ಷಣದ ಕುರಿತು ಕಾಳಜಿ ಇಲ್ಲ':ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಿಕ್ಷಣದ ಬಗ್ಗೆ ಕಾಳಜಿ ವಹಿಸದೆ ರಾಜಕಾರಣದಲ್ಲಿ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಬೋರ್ಡ್ ಪರೀಕ್ಷೆ, ಗರಿಷ್ಠ ಸಂಖ್ಯೆಯ ಪರೀಕ್ಷೆ ಬೇಡವೆನ್ನುವ ಸರಕಾರವೇ ಅತಿ ಹೆಚ್ಚು ಪರೀಕ್ಷೆ ನಡೆಸುತ್ತಿದೆ. ರಾಜ್ಯ ಪಠ್ಯಕ್ರಮ, ಕೇಂದ್ರೀಯ ಪಠ್ಯಕ್ರಮದ ಸಂಬಂಧ ಅನೇಕ ಶಿಕ್ಷಣ ಸಂಸ್ಥೆಗಳಿಂದ ಗೊಂದಲಮಯ ನಿರ್ಧಾರಗಳ ಕುರಿತಂತೆ ಪೋಷಕರು, ಶಿಕ್ಷಣ ತಜ್ಞರ ಸಭೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ಸಂಘಟನೆಗಳು, ಶಿಕ್ಷಕರ ಕ್ಷೇತ್ರ, ಪದವೀಧರರ ಕ್ಷೇತ್ರದಿಂದ ಆಯ್ಕೆಯಾದ ಶಾಸಕರನ್ನೂ ಈ ಸಭೆಗೆ ಆಹ್ವಾನಿಸಿ ಎಂದರು.

ರಾಜ್ಯದಲ್ಲಿ 5ನೇ ತರಗತಿಯಿಂದ 11ನೇ ತರಗತಿವರೆಗೆ ನಡೆಯುತ್ತಿರುವ ಪರೀಕ್ಷೆ ವಿಚಾರದಲ್ಲಿ ಬಹಳಷ್ಟು ಚರ್ಚೆ ನಡೆಯುತ್ತಿದೆ. ಈ ಗೊಂದಲಕ್ಕೆ ಹೈಕೋರ್ಟ್ ತೆರೆ ಎಳೆದಿದೆ. ಏಕಸದಸ್ಯ ಪೀಠವು ಬೋರ್ಡ್ ಪರೀಕ್ಷೆ ಬೇಡ ಎಂದಿದ್ದರೆ, ದ್ವಿಸದಸ್ಯ ಪೀಠ ಬೋರ್ಡ್ ಪರೀಕ್ಷೆ ನಡೆಸಿ ಎಂದು ತೀರ್ಪು ನೀಡಿದೆ ಎಂದರು.

ಇಂಥ ಸಂದರ್ಭದಲ್ಲಿ ಪೋಷಕರು, ವಿದ್ಯಾರ್ಥಿಗಳಲ್ಲಿ ಸಾಕಷ್ಟು ಗೊಂದಲ ಉಂಟಾಗಿತ್ತು. ರಾಜ್ಯ ಸರಕಾರ ನಡೆಸುವ ಬೋರ್ಡ್ ಪರೀಕ್ಷೆ ಕಾರಣಕ್ಕೆ ವಿದ್ಯಾರ್ಥಿಗಳಲ್ಲಿ ಫೇಲ್ ಆಗುವ ಭಯವಿದೆ. ಈ ಗೊಂದಲ, ಭಯ ನಿವಾರಿಸುವ ದೃಷ್ಟಿಯಿಂದ ರಾಜ್ಯದ ಶಿಕ್ಷಣ ತಜ್ಞರ ಸಭೆಯನ್ನು ಕೂಡಲೇ ಕರೆಯಬೇಕೆಂದು ಬಿಜೆಪಿ ಪರವಾಗಿ ಆಗ್ರಹಿಸಿದರು.

ಎಳೆಯ ಮಕ್ಕಳ ಮನಸ್ಸಿನಲ್ಲಿ ಅನುತ್ತೀರ್ಣರಾದರೆನಾನು ಇನ್ನು ಶಾಲೆಗೆ ಹೋಗುವಂತಿಲ್ಲ. ನಾನು ಅಸಮರ್ಥ ಎಂಬ ಭಾವನೆ ಬರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ 8ನೇ ತರಗತಿವರೆಗೆ ಅನುತ್ತೀರ್ಣ ಮಾಡಬಾರದೆಂದು ಸರಕಾರ ನಿಯಮ ರೂಪಿಸಿದೆ. ಇದನ್ನು ಸ್ವಾಗತಿಸುತ್ತೇವೆ. ಈಗ 5, 8, 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಲ್ಲಿ ಗೊಂದಲ ಇದೆ. ಶಿಕ್ಷಣ ಎಂದರೆ ಕೇವಲ ಪರೀಕ್ಷೆ ಅಲ್ಲ ಎಂದು ಸರಕಾರ ಒಂದೆಡೆ ಹೇಳುತ್ತದೆ. ಮಾಸಿಕ, ವಾರ್ಷಿಕ ಪರೀಕ್ಷೆಗೆ ಪೂರ್ವಭಾವಿ ಪ್ರಿಪರೇಟರಿ ಸೇರಿ ಹಲವು ಪರೀಕ್ಷೆ ನಡೆಸುವುದನ್ನು ಸರಕಾರ ಬೇಡ ಎನ್ನುತ್ತದೆ. ಆದರೆ ಸರಕಾರವೇ ಒಂದು ಕಡೆ ಬಹುಪರೀಕ್ಷೆಗಳನ್ನು ನಡೆಸಲು ಮುಂದಾಗಿದೆ ಎಂದು ಟೀಕಿಸಿದರು.

ಇದನ್ನೂ ಓದಿ:ಬೆಳಗಾವಿ ಏರ್​ಪೋರ್ಟ್​​ನ ಹೊಸ ಟರ್ಮಿನಲ್ ನಿರ್ಮಾಣಕ್ಕೆ ಪ್ರಧಾನಿ ಚಾಲನೆ

ABOUT THE AUTHOR

...view details