ಬೆಂಗಳೂರು: "ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಲು ರಾಜ್ಯಪಾಲರಿಂದ ಸುಳ್ಳು ಹೇಳಿಸಲಾಗಿದೆ" ಎಂದು ಶಾಸಕ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು. ವಿಧಾನಸಭೆಯಲ್ಲಿಂದು ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಶಕ್ತಿ ಯೋಜನೆಯಿಂದ ಶಾಲೆಗೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್ಗಳ ತೊಂದರೆ ಆಗಿದೆ. ಸ್ವಾತಂತ್ರ್ಯ ಬಂದಾಗಿಂದ ಹೆಚ್ಚಿನ ಅವಧಿ ಆಡಳಿತ ನಡೆಸಿರೋದು ಕಾಂಗ್ರೆಸ್. ಬಡವ ಬಡವನಾಗಿಯೇ ಇದ್ದಾನೆ, ರೈತ ಕಷ್ಟಪಡ್ತಿರೋದು ಈ ಕಾಂಗ್ರೆಸ್ ಕಾರಣದಿಂದ. ಕರ್ನಾಟಕ ಅಭಿವೃದ್ಧಿ ಶೂನ್ಯವಾಗಿದೆ" ಎಂದು ಟೀಕಿಸಿದರು.
"ಗ್ಯಾರಂಟಿ ಕಾರಣ ಅಭಿವೃದ್ಧಿ ಶೂನ್ಯದಿಂದ ನಮ್ಮ ರಾಜ್ಯ 20 ವರ್ಷ ಹಿಂದಕ್ಕೆ ಹೋಗಿದೆ. ರಾಜ್ಯ ವಿಜಯನಗರ ಸಾಮ್ರಾಜ್ಯದಷ್ಟು ಸಂಪದ್ಭರಿತವಾಗಿದೆ ಅಂತ ಕಾಂಗ್ರೆಸ್ ನಾಯಕರು ಮಾತಾಡ್ತಾರೆ. ರಾಜ್ಯದಲ್ಲಿ ದರ ಏರಿಕೆ ಮಾಡಿದ್ದಾರೆ. ಮುದ್ರಾಂಕ ಶುಲ್ಕ, ವಿದ್ಯುತ್, ಹಾಲಿನ ದರ, ಮದ್ಯದ ದರ ಹೆಚ್ಚಿಸಲಾಗಿದೆ. ಗಂಡನ ಬಳಿ ಕಿತ್ತು ಹೆಂಡ್ತಿಗೆ ಕೊಡ್ತಿದೆ ಸರ್ಕಾರ. ಇದು ಈ ಸರ್ಕಾರದ ನೈತಿಕ ದಿವಾಳಿತನ. ರಾಜ್ಯಪಾಲರ ಭಾಷಣ ಎಲ್ಲ ಆದರ್ಶಗಳನ್ನು ಗಾಳಿಗೆ ತೂರಿದೆ" ಎಂದರು.
"ರೈತರ ಆತ್ಮಹತ್ಯೆ ಕಡಿಮೆ ಆಗಿದೆ ಅಂತ ಸುಳ್ಳು ಹೇಳಿಸಿದೆ ಸರ್ಕಾರ. ಗ್ಯಾರಂಟಿಗಳ ಮೂಲಕ ಸರ್ಕಾರ ತನ್ನ ಬೆನ್ನು ತಾನೇ ತಟ್ಟಿಕೊಂಡಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ ಕೊಡುವ ಬಗ್ಗೆ ಸರ್ಕಾರ ಚಕಾರ ಎತ್ತುತ್ತಿಲ್ಲ. ಬರಗಾಲ ಇದೆ, 800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆ ಕಡಿಮೆ ಆಗಿದೆ ಅಂತ ರಾಜ್ಯಪಾಲರ ಮೂಲಕ ಹೇಳಿಸಿದ್ದಾರೆ. ಸಿಎಂ ತವರು ಜಿಲ್ಲೆಯಲ್ಲೇ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚು ದಾಖಲಾಗಿದೆ" ಎಂದು ಆರೋಪಿಸಿದರು.
"ರೈತರಿಗೆ ಹಾಲಿನ ಪ್ರೋತ್ಸಾಹಧನ ಕಡಿತ ಮಾಡಿದ್ದಾರೆ. ರೈತರಿಗೆ ಪಂಪ್ಸೆಟ್ ಗಳಿಗೆ ವಿದ್ಯುತ್ ಕೊಡ್ತಿಲ್ಲ. ರೈತರ ಆತ್ಮಹತ್ಯೆ ಹಿಂದೆ ಆಗಿಯೇ ಇಲ್ಲ ಅಂತ ಹೇಳ್ತಿಲ್ಲ. ಆದರೆ ಈಗ ನಡೆಯುತ್ತಿರುವ ಆತ್ಮಹತ್ಯೆಗಳಿಗೆ ಸಚಿವರು ಬೇಜವಾಬ್ದಾರರಾಗಿದ್ದಾರೆ. ಸರ್ಕಾರಕ್ಕೆ ಕಾಳಜಿ ಇಲ್ಲ. ಶಿವಾನಂದ ಪಾಟೀಲರು ರೈತರು ಪರಿಹಾರದ ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ತಾರೆ ಅಂದಿದ್ದಾರೆ. ರೈತರು ಬರಗಾಲ ಬರಲಿ ಅಂತ ಕಾಯ್ತಾರೆ ಅಂತಲೂ ಶಿವಾನಂದ ಪಾಟೀಲರು ಹೇಳಿದ್ದಾರೆ. ಅವರು ರೈತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ" ಎಂದು ಟೀಕಿಸಿದರು.
ಇದನ್ನೂ ಓದಿ:ವಿಧಾನಸಭೆಯಲ್ಲಿ ಶಾಸಕರ ನಡುವೆ ವಾಕ್ಸಮರ: ಮತ್ತೆ ಜೈ ಶ್ರೀರಾಮ್, ಜೈ ಭೀಮ್ ಘೋಷಣೆ