ಕರ್ನಾಟಕ

karnataka

'ಬಿಜೆಪಿಯವರು ಹೆಸರಿಗೆ ಮಾತ್ರ ರಾಮರಾಜ್ಯ ಅಂತಾರೆ, ಮಾಡುವುದೆಲ್ಲ ಪಾಪದ ಕೆಲಸ'

By ETV Bharat Karnataka Team

Published : Feb 6, 2024, 5:47 PM IST

ಬಿಜೆಪಿಯವರು ಮಾಡುವುದೆಲ್ಲ ಪಾಪದ ಕೆಲಸ ಎಂದು ಸಚಿವ ದಿನೇಶ್​ ಗುಂಡೂರಾವ್​ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ವಿರುದ್ಧ ದಿನೇಶ್​ ಗುಂಡೂರಾವ್​ ವಾಗ್ದಾಳಿ
ಬಿಜೆಪಿ ವಿರುದ್ಧ ದಿನೇಶ್​ ಗುಂಡೂರಾವ್​ ವಾಗ್ದಾಳಿ

ಬಿಜೆಪಿ ವಿರುದ್ದ ದಿನೇಶ್​ ಗುಂಡೂರಾವ್​ ವಾಗ್ದಾಳಿ

ಮೈಸೂರು:ಬಿಜೆಪಿಯವರು ಹೆಸರಿಗೆ ರಾಮರಾಜ್ಯ ಅಂತಾರೆ. ಆದರೆ ಅವರು ಮಾಡುವುದೆಲ್ಲವೂ ಪಾಪದ ಕೆಲಸ ಎಂದು ಸಚಿವ ದಿನೇಶ್​ ಗುಂಡೂರಾವ್​ ಹೇಳಿದರು. ಮೋದಿಯವರು ಪ್ರಧಾನಿಯಾದ ದಿನದಿಂದಲೂ ಪ್ರಜಾಪ್ರಭುತ್ವದ ಕಗ್ಗೊಲೆ ಶುರುವಾಗಿದೆ. ಸರ್ವಾಧಿಕಾರಿ ಧೋರಣೆ ಎದ್ದು ಕಾಣುತ್ತಿದೆ. ಅವರ ವಿರುದ್ಧ ಮಾತನಾಡುವವರನ್ನು ಬೆದರಿಸುವ ಹಾಗೂ ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರೇ ಕೇಂದ್ರದ ಮುಖಂಡರನ್ನು ಪ್ರಶ್ನಿಸುವ ಪರಿಸ್ಥಿತಿಯಲ್ಲಿ ಇಲ್ಲ. ಹಾಗೊಂದು ವೇಳೆ ಪ್ರಶ್ನಿಸಿದರೆ ಅವರನ್ನು ಮುಗಿಸುತ್ತಾರೆ. ದೇಶದ ಯಾವುದೇ ತನಿಖಾ ಸಂಸ್ಥೆಗಳು ಹಾಗೂ ರಾಜ್ಯಪಾಲರು ಸ್ವತಂತ್ರವಾಗಿಲ್ಲ ಎಂದು ಟೀಕಿಸಿದರು.

ಚುನಾವಣೆ ಬಂದಾಗ ಎಲ್ಲವನ್ನೂ ಬಳಸಿಕೊಳ್ಳುತ್ತಾರೆ ಎಂದು ಆರೋಪಿಸಿದ ಸಚಿವ ಗುಂಡೂರಾವ್, ದೇಶದಲ್ಲಿ ಬಿಜೆಪಿಯೇತರ ಸರ್ಕಾರವನ್ನು ಬೀಳಿಸುವ ತಂತ್ರ ಮಾಡುತ್ತಾರೆ. ಸರ್ಕಾರ ಬೀಳಿಸುವುದೇ ಬಿಜೆಪಿಯವರ ಹುಟ್ಟುಗುಣ. ಜಾರ್ಖಂಡ್ ಸೇರಿದಂತೆ ಬೇರೆಡೆ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಸರ್ಕಾರವನ್ನು ಬೀಳಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಬಿಜೆಪಿ ದೇಶ ಕಟ್ಟುವ ಕೆಲಸ ಮಾಡಿಲ್ಲ:ಕಾಂಗ್ರೆಸ್ ದೇಶ ಒಡೆಯುವ ಮನಸ್ಥಿತಿಯಲ್ಲಿದೆ ಎಂಬ ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ಯಾವತ್ತೂ ದೇಶಕಟ್ಟುವ ಕೆಲಸ ಮಾಡಿಲ್ಲ. ಬ್ರಿಟಿಷರ ವಿರುದ್ಧ ಕಾಂಗ್ರೆಸ್ ಹೋರಾಡಿದಾಗ ಹಿಂದೂ ಮಹಾಸಭಾ ಬ್ರಿಟಿಷರ ಪರವಾಗಿತ್ತು. ಪಾಕಿಸ್ತಾನವನ್ನು ಇಬ್ಭಾಗ ಮಾಡಿದ್ದು ನಾವೇ. ಅದನ್ನು ಹೊರತುಪಡಿಸಿ ಎಲ್ಲವನ್ನೂ ಒಗ್ಗೂಡಿಸಿದ್ದೇವೆ. ಆರ್​ಎಸ್​ಎಸ್ ಮತ್ತು ಹಿಂದೂ ಮಹಾಸಭಾ ಎಂದೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ನಾವು ಅವರನ್ನು ದೇಶ ಭಕ್ತರು ಎಂದು ಹೇಳಲ್ಲ. ಆದರೆ ಅವರು ಮಾತ್ರ ದೇಶಭಕ್ತರು, ಬೇರೆಯವರು ಅಲ್ಲ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.

ದೆಹಲಿಯಲ್ಲಿ ಅನ್ಯಾಯದ ವಿರುದ್ಧ ನಮ್ಮ ಪ್ರತಿಭಟನೆ:ದೆಹಲಿಯಲ್ಲಿ ಕಾಂಗ್ರೆಸ್ ನಾಳೆ ನಡೆಸುತ್ತಿರುವ "ನನ್ನ ತೆರಿಗೆ ನನ್ನ ಹಕ್ಕು" ಹೋರಾಟ ಅನಿವಾರ್ಯವಾಗಿದೆ. ಇದು ಕರ್ನಾಟಕದ ಪರಿಸ್ಥಿತಿ ಮಾತ್ರವಲ್ಲ, ಬಿಜೆಪಿ ಸರ್ಕಾರ ಇಲ್ಲದ ಎಲ್ಲಾ ರಾಜ್ಯಗಳ ಪರಿಸ್ಥಿತಿಯಾಗಿದೆ. ಈ ಕಾರಣಕ್ಕಾಗಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗುತ್ತದೆ ಎಂದು ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಬಿಜೆಪಿ ಸಂಸದರಿಗೆ ಮೋದಿ ಮುಂದೆ ಕೇಳುವ ಧೈರ್ಯ ಇಲ್ಲ, ಸುಖಾಸುಮ್ಮನೆ ನಮ್ಮ ಮೇಲೆ ಕೂಗಾಡುತ್ತಾರೆ. ಇದೆ ಕೆಲಸವನ್ನು ಮೋದಿ ಮುಂದೆ ಸಂಸದರು ಮಾಡಿದರೆ, ನಾವು ಪ್ರತಿಭಟನೆ ಮಾಡುವ ಅವಶ್ಯಕತೆಯೇ ಬರ್ತಿರಲಿಲ್ಲ ಎಂದರು.

ಡಿ.ಕೆ.ಸುರೇಶ್ ಹೇಳಿಕೆಯ ಉದ್ದೇಶವೇ ಬೇರೆ:ಸಂಸದ ಡಿ.ಕೆ.ಸುರೇಶ್ ಹೇಳಿಕೆ ಉದ್ದೇಶವೇ ಬೇರೆ. ಆದರೆ ಆ ರೀತಿಯ ಹೇಳಿಕೆ ಸರಿಯಲ್ಲ ಎಂದು ಸಿಎಂ ಹಾಗೂ ಎಲ್ಲರೂ ಹೇಳಿದ್ದೇವೆ ಎಂದರು. ಲೋಕಸಭಾ ಚುನಾವಣೆಯ ನಂತರ ಗ್ಯಾರಂಟಿ ಯೋಜನೆಗಳಿಗೆ ಬ್ರೇಕ್ ಬೀಳುತ್ತದೆ ಎಂಬ ಶಾಸಕ ಬಾಲಕೃಷ್ಣ ಹೇಳಿಕೆ ಸರಿಯಲ್ಲ. ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಬಾಲಕೃಷ್ಣ, ಸಚಿವ ರಾಜಣ್ಣ ಜೊತೆಗೆ ಯಾರ್ಯಾರೋ ಏನೇನೋ ಹೇಳಿದರು ಎಂದು ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಸಿದ್ದರಾಮಯ್ಯ ಹೇಳಿದ ಎಲ್ಲಾ ಕೆಲಸವನ್ನು ಮಾಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ದಿನೇಶ್ ಗುಂಡೂರಾವ್ ತಿಳಿಸಿದರು.

ಇದನ್ನೂ ಓದಿ:ಸವದಿ ಮಂತ್ರಿ ಸ್ಥಾನ ಪಡೆಯಲು ಗದ್ದಲ ಎಬ್ಬಿಸಿ ಗೇಮ್​ ಆಡುತ್ತಿದ್ದಾರೆ: ಮಹೇಶ್ ಕುಮಠಳ್ಳಿ

ABOUT THE AUTHOR

...view details