ಕರ್ನಾಟಕ

karnataka

ಗೋವಾ ಗಡಿಯಲ್ಲಿ ಮಾರ್ಕೆಪೂನವ್ ಜಾತ್ರೆ; ಹೊಟ್ಟೆಗೆ ಸೂಜಿ ಚುಚ್ಚಿಸಿಕೊಂಡು ಹರಕೆ ಒಪ್ಪಿಸಿದ ಮಕ್ಕಳು!

By ETV Bharat Karnataka Team

Published : Feb 25, 2024, 6:22 PM IST

ಕಾರವಾರದಲ್ಲಿ ನಡೆದ ಮಾರ್ಕೆಪೂನಾವ್ ಜಾತ್ರೆ ಸಾಕಷ್ಟು ವಿಶಿಷ್ಟವಾಗಿದ್ದು, ವಿವಿಧೆಡೆಗಳಿಂದ ಜಾತ್ರೆಗೆ ಆಗಮಿಸಿದ್ದ ಸಾವಿರಾರು ಮಂದಿ ಭಕ್ತರು ತಮ್ಮ ಹರಕೆಯನ್ನು ತೀರಿಸಿ ದೇವರ ದರ್ಶನ ಪಡೆದರು.

ಮಾರ್ಕೆಪೂನವ್ ಜಾತ್ರೆ
ಮಾರ್ಕೆಪೂನವ್ ಜಾತ್ರೆ

ಮಾರ್ಕೆಪೂನವ್ ಜಾತ್ರೆ

ಕಾರವಾರ (ಉತ್ತರ ಕನ್ನಡ) : ಜಾತ್ರೆಗಳನ್ನು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಭಿನ್ನ ವಿಭಿನ್ನ ಸಂಪ್ರದಾಯಗಳಿಂದಾಗಿ ಅಲ್ಲಿನ ಆಚರಣೆಗಳೂ ವಿಶಿಷ್ಟವಾಗಿರುತ್ತವೆ. ಅದರಂತೆ ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ಭಾನುವಾರ ಮಾರ್ಕೆಪೂನಾವ್ ಎನ್ನುವ ವಿಭಿನ್ನ ಜಾತ್ರೆ ಜರುಗಿತು.

ಉತ್ತರಕನ್ನಡ ಜಿಲ್ಲೆಯ ಕಾರವಾರದ ಗಡಿ ಗ್ರಾಮವಾದ ಮಾಜಾಳಿಯಲ್ಲಿ ಮಾರ್ಕೆಪೂನಾವ್ ಎಂಬ ವಿಶಿಷ್ಟ ಜಾತ್ರೆಯಲ್ಲಿ ಗಂಡು ಮಕ್ಕಳು ಹೊಕ್ಕಳ ಬಳಿ ಸೂಜಿ ಚುಚ್ಚಿಸಿಕೊಂಡು ನೂಲನ್ನು ಪೋಣಿಸಿಕೊಂಡರೆ, ಇನ್ನೊಂದೆಡೆ ಹೆಣ್ಣು ಮಕ್ಕಳು ಬೆಳಗಿದ ದೀಪವನ್ನು ಹೊತ್ತು ಹರಕೆಯನ್ನು ಈಡೇರಿಸುವ ಮೂಲಕ ಸಂಪ್ರದಾಯವನ್ನು ಆಚರಿಸಿದರು. ಪ್ರತಿವರ್ಷ ಗ್ರಾಮದ ಧಾಡ್ ದೇವರ ದೇವಸ್ಥಾನದ ಬಳಿ ನಡೆಯುವ ಈ ಜಾತ್ರೆಯಲ್ಲಿ ಯುವಕರು ಸೂಜಿ ಚುಚ್ಚಿಸಿಕೊಳ್ಳುವ ಮೂಲಕ ದೇವರಿಗೆ ಹರಕೆಯನ್ನು ಸಲ್ಲಿಸುತ್ತಾರೆ.

ಪ್ರೌಢಾವಸ್ಥೆಯ ಪೂರ್ವದಲ್ಲಿ ಗಂಡು ಮಕ್ಕಳು ಹೊಕ್ಕಳ ಬಳಿ ದಾರ ಪೋಣಿಸಿಕೊಳ್ಳುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ. ಅಲ್ಲದೇ ಮುಂದೆ ಜೀವನದಲ್ಲಿ ಎಂತಹ ಕಷ್ಟಗಳು ಬಂದರೂ ಧೈರ್ಯವಾಗಿ ಎದುರಿಸಲು ಇದರಿಂದ ಸಹಾಯವಾಗುತ್ತದೆ ಎನ್ನುವ ನಂಬಿಕೆ ಇರುವುದರಿಂದ ಮದುವೆಗೂ ಮೊದಲು ಯುವಕರು ಮತ್ತು ಮಕ್ಕಳು ಸೂಜಿ ಚುಚ್ಚಿಸಿಕೊಳ್ಳುವುದು ಇಲ್ಲಿನ ವಾಡಿಕೆಯಾಗಿದೆ. ಈ ರೀತಿ ಮಾಡಿದಲ್ಲಿ ಮುಂದೆ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಎದುರಾಗುವುದಿಲ್ಲ ಅನ್ನೋ ನಂಬಿಕೆ. ಈ ಸಂಪ್ರದಾಯ ಹಿಂದಿನಿಂದಲೂ ರೂಢಿಯಲ್ಲಿದ್ದು, ಈ ಬಾರಿ ಸುಮಾರು 15ಕ್ಕೂ ಅಧಿಕ ಪುರುಷರು ಹಾಗೂ ಮಕ್ಕಳು ಅರ್ಚಕರಿಂದ ದಾರ ಪೋಣಿಸಿಕೊಂಡು ಹರಕೆ ಅರ್ಪಿಸಿದರು.

ಇನ್ನು ಧಾಡ್ ದೇವರ ದೇವಸ್ಥಾನದಿಂದ ಸುಮಾರು ಒಂದು ಕಿಲೋ ಮೀಟರ್ ದೂರವಿರುವ ದೇವತಿ ದೇವಿಯ ದೇವಸ್ಥಾನದ ಬಳಿ ಹರಕೆ ಹೊತ್ತವರು ಕನಕಾಂಬರ ಹೂವಿನಿಂದ ಸಿಂಗಾರಗೊಂಡ ಬಂಡಿಯೊಂದಿಗೆ ತೆರಳುತ್ತಾರೆ. ಸೂಜಿ ದಾರ ಪೋಣಿಸಿಕೊಂಡವರು ಆ ದೇವಸ್ಥಾನದ ಬಳಿ ತೆರಳಿ ಅಲ್ಲಿ ದಾರವನ್ನು ತೆಗೆಸಿಕೊಂಡ ಬಳಿಕ ಅವರ ಹರಕೆ ತೀರಿದಂತಾಗುತ್ತದೆ.

ಗ್ರಾಮದ ಯುವತಿಯರು, ಸೊಸೆಯಾಗಿ ಗ್ರಾಮಕ್ಕೆ ಬಂದ ಸ್ತ್ರೀಯರು ಹಾಗೂ ಹರಕೆ ಹೊತ್ತುಕೊಂಡ ಮಹಿಳೆಯರು ದೀಪ ಸೇವೆಯನ್ನು ನೀಡುತ್ತಾರೆ. ತಮ್ಮ ತಲೆಯ ಮೇಲೆ 5 ಬತ್ತಿಯಿರುವ ದೀಪವನ್ನು ಹೊತ್ತುಕೊಂಡು ದಾಡ್ ದೇವಸ್ಥಾನದಿಂದ ದೇವತಿದೇವಿ ದೇವಸ್ಥಾನದವರೆಗೆ ಬಿಸಿಲಿನಲ್ಲೇ ಕಾಲ್ನಡಿಗೆಯಲ್ಲಿ ಸಾಲಾಗಿ ಸಂಚರಿಸುತ್ತಾರೆ. ಬಳಿಕ ಅಲ್ಲಿನ ದೇವತೆಗೆ ತಾವು ಹೊತ್ತು ತಂದ ದೀಪವನ್ನು ತೂಗಿ ಭಕ್ತಿಯಿಂದ ನಮಸ್ಕರಿಸಿ ದೀಪಗಳನ್ನು ಅಲ್ಲಿಯೇ ಇಟ್ಟು ಮರಳುತ್ತಾರೆ. ಪುರಾತನ ಕಾಲದಿಂದ ನಡೆದು ಬರುತ್ತಿರುವ ಈ ಜಾತ್ರೆಗೆ ಗೋವಾ, ಮಹಾರಾಷ್ಟ್ರ, ಮುಂಬೈ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಬರುತ್ತಾರೆ. ಹೆಣ್ಣುಮಕ್ಕಳು ಹಿಂದಿನ ದಿನ ಉಪವಾಸ ಇದ್ದುಕೊಂಡು ಆಚರಣೆ ಮಾಡುವ ಈ ಜಾತ್ರೆ ತುಂಬಾ ವಿಜೃಂಭಣೆಯಿಂದಲೂ ನಡೆಯುತ್ತದೆ ಎಂದು ಸ್ಥಳೀಯರಾದ ಸುಭಾಂಗಿ ಪವಾರ್ ತಿಳಿಸಿದರು.

ಇದನ್ನೂ ಓದಿ :ಫೆ. 26ಕ್ಕೆ ಮೈಲಾರಲಿಂಗೇಶ್ವರ ಜಾತ್ರೆ: ಕಾರ್ಣಿಕ ನುಡಿಯಲಿರುವ ಗೊರವಯ್ಯ, ಏನಿರಬಹುದು ಈ ಸಲದ ಭವಿಷ್ಯ?

ABOUT THE AUTHOR

...view details