ಕರ್ನಾಟಕ

karnataka

ಲೋಕಸಭಾ ಚುನಾವಣಾ ಪ್ರಚಾರಕ್ಕೆ ಧುಮುಕಿದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್ ಮಂಜುನಾಥ್

By ETV Bharat Karnataka Team

Published : Mar 15, 2024, 5:01 PM IST

Updated : Mar 15, 2024, 10:17 PM IST

ಈಗಾಗಲೇ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ ಎಂದು ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್ ಮಂಜುನಾಥ್ ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್ ಮಂಜುನಾಥ್
ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್ ಮಂಜುನಾಥ್

ಲೋಕಸಭೆ ಚುನಾವಣೆ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ

ರಾಮನಗರ :ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್​ ಮಂಜುನಾಥ್​ ಅವರು ಈಗಾಗಲೇ ಲೋಕಸಭೆ ಚುನಾವಣೆ ಪ್ರಚಾರವನ್ನು ಆರಂಭಿಸಿದ್ದಾರೆ. ಈ ಮೂಲಕ ಬಿಜೆಪಿ ಮತ್ತು ಜೆಡಿಎಸ್​ ಪಕ್ಷಗಳ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಚುನಾವಣೆ ಗೆಲ್ಲಲು ತಯಾರಿ ನಡೆಸಿದ್ದಾರೆ.

ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಸಿ.ಎನ್. ಮಂಜುನಾಥ್, ನಾನು ಇಲ್ಲಿ ಕಾಂಗ್ರಾ ಆಸ್ಪತ್ರೆ ಉದ್ಘಾಟನೆಗಾಗಿ ಬಂದಿದ್ದೆ. ಆದರೆ ಕಾಕತಾಳಿಯ ಎಂಬಂತೆ ಇಂದು ಬಿಜೆಪಿ ಕಾರ್ಯಕರ್ತರ ಸಭೆ ಆಗುತ್ತಿದೆ. ಇದು ದೊಡ್ಡ ಕ್ಷೇತ್ರವಾಗಿದ್ದು, ಆನೇಕಲ್‌ನಿಂದ ಕುಣಿಗಲ್ ವರೆಗೆ ಇದೆ. ಅಧಿಕೃತವಾಗಿ ಈಗಾಗಲೇ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ರಾಜರಾಜೇಶ್ವರಿ ಕ್ಷೇತ್ರದಲ್ಲಿ ಸಭೆ ಮಾಡಿದ್ದು, ಇಂದು ಸಂಜೆ ಬೆಂಗಳೂರು ದಕ್ಷಿಣದಲ್ಲಿ ಶಾಸಕ ಕೃಷ್ಣಪ್ಪ ಸಭೆ ಮಾಡುತ್ತಿದ್ದಾರೆ ಎಂದರು.

ಜೆಡಿಎಸ್ ಮತ್ತು ಬಿಜೆಪಿ ಪಕ್ಷದವರನ್ನು ಒಗ್ಗೂಡಿಸುವ ವಿಚಾರ ನಮಗೆ ಸವಾಲೇ ಅಲ್ಲ.‌ ಎರಡು ಪಕ್ಷದ ಕಾರ್ಯಕರ್ತರ ಹೃದಯಗಳು ಒಟ್ಟಾಗಿದೆ. ಇಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಎಲ್ಲರೂ ಖುಷಿಯಾಗಿ‌ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಭಿನ್ನಾಭಿಪ್ರಾಯ ಜೀರೋ ಎಂದು ಮಂಜುನಾಥ್ ಹೇಳಿದರು.

ಕುಟುಂಬ ರಾಜೀಕೀಯ ಎಂಬ ಹಾಲಿ ಸಂಸದ ಡಿ.ಕೆ ಸುರೇಶ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಂಜುನಾಥ್​, ಈ ಬಗ್ಗೆ ನಾನು ಕಮೆಂಟ್ ಮಾಡಲ್ಲ. 40 ವರ್ಷ ಧೀರ್ಘಕಾಲ ಹೃದ್ರೋಗ ಚಿಕಿತ್ಸಾ ಕೆಲಸ ಮಾಡಿ ನಂತರ ನಾನು ರಾಜಕೀಯಕ್ಕೆ ಬಂದಿದ್ದೇನೆ. ನಾನು ಕೆಲಸದ ಮಧ್ಯೆ ರಾಜಕೀಯಕ್ಕೆ ಬಂದಿಲ್ಲ. ಪಕ್ಷಾತೀತವಾಗಿ ಬೇರೆ ಬೇರೆ ರಾಜ್ಯ ಸೇರಿದಂತೆ ನಮ್ಮ ರಾಜ್ಯದ ಹಲವಾರು ಸ್ನೇಹಿತರು ಕ್ರಾಂತಿಕಾರಿ ಬದಲಾವಣೆ ತಂದಿದ್ದೀರಿ ಅದನ್ನು ರಾಷ್ಟ್ರ ಮಟ್ಟಕ್ಕೆ ತನ್ನಿ ಎಂದು ಸಲಹೆ ನೀಡಿದ್ದಾರೆ. ರಾಷ್ಟ್ರ ಮಟ್ಟಕ್ಕೆ ಬರಲು ವೇದಿಕೆ, ಭೂಮಿಕೆ ಬೇಕಾಗುತ್ತದೆ. ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ನಾನು ರಾಜಕೀಯಕ್ಕೆ ಬಂದಿರೋದು ರಾಜಕೀಯ ಮಾಡಲು ಅಲ್ಲ‌ ಎಂದು ಟಾಂಗ್ ಕೊಟ್ಟರು.

ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಹೇಳಿಕೆ : ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಸಿ.ಪಿ ಯೋಗೇಶ್ವರ್, 8 ವಿಧಾನಸಭಾ ಕ್ಷೇತ್ರಗಳಲ್ಲೂ ಕಾರ್ಯಕರ್ತರ ಸಭೆ ಮಾಡುತ್ತಿದ್ದೇವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಪ್ರಜ್ಞಾವಂತ ಮತದಾರರು ಸಿ. ಎನ್ ಮಂಜುನಾಥ್ ಪರವಾಗಿ ಇದ್ದಾರೆ. ಹಾಗೆಯೇ ಯಾರೂ ಇಲ್ಲಿ ಹರಕೆಯ ಕುರಿ ಎಂದು ಗೊತ್ತಾಗಲಿದೆ. ಅವರ ಉಢಾಪೆ ಮಾತಿಗೆ ಪ್ರಜ್ಞಾವಂತ ಮತದಾರರು ಉತ್ತರ ಕೊಡಲಿದ್ದಾರೆ. ಇನ್ನು ರಾಜಕೀಯ ತಂತ್ರಗಾರಿಕೆ ಬಗ್ಗೆ ಮಾಧ್ಯಮದ ಮುಂದೆ ಹೇಳಲು ಸಾಧ್ಯವಿಲ್ಲ. ನೂರಕ್ಕೆ ನೂರು ಭಾಗ ಡಿ‌.ಕೆ ಸುರೇಶ್ ಸೋಲುತ್ತಾರೆ. ಮಂಜುನಾಥ್ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ ಎಂದರು.

ಚನ್ನಪಟ್ಟಣದಲ್ಲಿ ಕಾರ್ಯಕರ್ತರು, ಮುಖಂಡರ ಆಪರೇಷನ್ ವಿಚಾರವಾಗಿ ಮಾತನಾಡಿದ ಯೋಗೇಶ್ವರ್​, ಹತಾಶರಾಗಿ ಮನೆ ಮನೆಗೆ ಹೋಗಿ ಕಾರ್ಯಕರ್ತರಿಗೆ ಶಾಲು ಹಾಕುತ್ತಿದ್ದಾರೆ. ಅದೇ ಕಾರ್ಯಕರ್ತರು ಬಲವಂತವಾಗಿ ಶಾಲು ಹೊದಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಚನ್ನಪಟ್ಟಣದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಡೆಪಾಸಿಟ್ ಕೂಡ ಸಿಕ್ಕಿಲ್ಲ. ಹಾಗಾಗಿ ಬಹಳ ಸರ್ಕಸ್ ಮಾಡುತ್ತಿದ್ದಾರೆ. ಜನಾಭಿಪ್ರಾಯ ಮಂಜುನಾಥ್ ಪರವಾಗಿ ಇದೆ. ಹೋಗಿರುವ ಕಾರ್ಯಕರ್ತರರು ನಮ್ಮ ಮುಖಂಡರು, ಶಿಷ್ಯಂದಿರು ಚುನಾವಣೆ ಒಳಗೆ ವಾಪಸ್​ ನಮ್ಮ ಬಳಿ ಬರುತ್ತಾರೆ. ನಾವು ಯಾವುದೇ ಆಪರೇಷನ್ ಮಾಡಲ್ಲ. ನಮಗೆ ಜೆಡಿಎಸ್ ಮತ್ತು ಬಿಜೆಪಿ ಪಡೆ ಸಾಕು ಎಂದು ತಿಳಿಸಿದರು.

ಮಂಜುನಾಥ್ ಅವರಿಗೆ ರಾಜಕೀಯ ಬೇಕಿತ್ತಾ ಎಂಬ ವಿಚಾರವಾಗಿ ಮಾತನಾಡಿ, ಅವರಿಗೆ ಬೇಕಿತ್ತಾ? ಬೇಡವಾ? ಎಂಬ ವಿಚಾರ ಅಲ್ಲ. ಕೇವಲ ಎಂಪಿ ಆಗಬೇಕು ಎಂಬುದಲ್ಲ. ಮುಂದೆ ನರೇಂದ್ರ ಮೋದಿ ಸಂಪುಟದಲ್ಲಿ ಆರೋಗ್ಯ ಸಚಿವರಾಗಬೇಕು ಎಂಬುದು ಈ ಜಿಲ್ಲೆಯ ಜನರ ಆಸೆಯಾಗಿದೆ. ಅವರ ಸೇವೆ ದೇಶಕ್ಕೆ ಬೇಕು, ಕೇವಲ ರಾಜ್ಯಕ್ಕೆ ಅಲ್ಲ. ವೈದ್ಯರಾಗಿ ಸೇವೆ ಮಾಡಿರುವವರು ರಾಜಕೀಯಕ್ಕೆ ಬರಬಾರದು ಎಂದು ಎಲ್ಲೂ ಇಲ್ಲ. ಮಂಜುನಾಥ್ ಒಳ್ಳೆತನವೇ ನಮಗೆ ವರ ಎಂದು ಸಿ.ಪಿ ಯೋಗೇಶ್ವರ್ ನುಡಿದರು.

ಇದನ್ನೂ ಓದಿ :ಕಾಂಗ್ರೆಸ್​ಗೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ: ಗತಿಗೆಟ್ಟ ಪಾರ್ಟಿಯಾಗಿ ಮಾರ್ಪಟ್ಟಿದೆ - ವಿಪಕ್ಷ ನಾಯಕ ಆರ್ ಅಶೋಕ್

Last Updated : Mar 15, 2024, 10:17 PM IST

ABOUT THE AUTHOR

...view details