ಬೆಂಗಳೂರು:ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ಆರೋಪಿ ಬಂಧನಕ್ಕೆ ಆಗ್ರಹಿಸಿ ಇಂದು ಎಐಸಿಸಿ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ಅಲ್ಕಾ ಲಂಬಾ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಇದಕ್ಕೂ ಮುನ್ನ ಮಾತನಾಡಿದ ಅಲ್ಕಾ ಲಂಬಾ, ''ಹಾಸನದ ಪೆನ್ ಡ್ರೈವ್ ವಿಡಿಯೋ ಆರೋಪಿಯು ಇದುವರೆಗೂ ನಡೆದ ಎಲ್ಲಾ ಮಹಿಳಾ ದೌರ್ಜನ್ಯಗಳ ದಾಖಲೆಗಳನ್ನು ಮುರಿದು ಹಾಕಿದ್ದಾರೆ. ದೇಶದ ಪ್ರಧಾನಮಂತ್ರಿ ತಮ್ಮ ಪ್ರತಿ ಭಾಷಣದಲ್ಲಿಯೂ ಕುಟುಂಬ ರಾಜಕಾರಣ ಹಾಗೂ ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಹೇಳುತ್ತಲೇ ಇರುತ್ತಾರೆ. ಅವರ ಮಾತಿಗೆ ಏನಾದರೂ ಅರ್ಥವಿದೆಯೇ? ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಪ್ರಜ್ವಲ್ ರೇವಣ್ಣ, ಬಿಜೆಪಿಯ ಕುಲ್ ದೀಪ್ ಸಿಂಗ್, ಉತ್ತರ ಪ್ರದೇಶದ ರಾಮ್ ದುಲ್ಹಾರೆ, ಬ್ರಿಜ್ ಭೂಷಣ್ ಸಿಂಗ್, ಹರಿಯಾಣದ ಸಚಿವ ಸಂದೀಪ್ ಸಿಂಗ್ ಇವರೆಲ್ಲಾ ಮಹಿಳೆಯರು, ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದವರು. ಇವರೇ ನಿಜವಾದ ಮೋದಿ ಪರಿವಾರದವರು. ಇದೇ ಮೋದಿ ಅವರ ಪರಿವಾರ ವಾದದ ಅರ್ಥ'' ಎಂದು ಟೀಕಿಸಿದರು.
''ಮೋದಿಯವರು ಮಾತೆತ್ತಿದರೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಆದರೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಜೊತೆ ನಿಂತು ಪ್ರಧಾನಿಗಳು ಫೋಟೋಗೆ ಪೋಸ್ ಕೊಡುತ್ತಾರೆ. ಆದರೆ ಭಾಷಣದಲ್ಲಿ ಮಾತ್ರ ಕುಟುಂಬ ರಾಜಕಾರಣ ಮತ್ತು ಬೇಟಿ ಬಚಾವೋ ಬಗ್ಗೆ ಮಾತನಾಡುತ್ತಾರೆ. ನಮ್ಮ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳನ್ನು ತಿಳಿಸಬೇಕು. ಏಕೆಂದರೆ ಈ ಘಟನೆ ಬೆಳಕಿಗೆ ಬಂದ ತಕ್ಷಣ ಗಂಭೀರತೆ ಅರಿತು ಎಸ್ ಐಟಿ ರಚನೆಗೆ ಆದೇಶ ನೀಡಿದ್ದಾರೆ'' ಎಂದರು.
''ಸಾವಿರಾರು ವಿಡಿಯೋಗಳನ್ನು ಮಾಡಿದ್ದಾನೆ. ಕಾನೂನಿನ ಭಯವಿಲ್ಲದೆ ಕೃತ್ಯ ಎಸಗಿದ್ದಾನೆ. ಎಸ್ ಐಟಿಯಲ್ಲಿ ಮನವಿ ಮಾಡುತ್ತೇನೆ, ಶೋಷಣೆಗೆ ಒಳಗಾದ ಹೆಣ್ಣುಮಕ್ಕಳ ಗುರುತನ್ನು ಅದಷ್ಟು ಗುಪ್ತವಾಗಿ ಇರಿಸಿ ಹಾಗೂ ಅನ್ಯಾಯಕ್ಕೆ ಒಳಗಾದ ಎಲ್ಲಾ ಮಹಿಳೆಯರ ಪರವಾಗಿ ನಾವು ಇರುತ್ತೇವೆ. ನೀವು ಮುಂದೆ ಬಂದು ಆರೋಪಿ ತಪ್ಪಿಸಿಕೊಳ್ಳದಂತೆ ದೂರು ನೀಡಬೇಕು. ಪೊಲೀಸ್ ಠಾಣೆಗೆ ಬರಲು ಹೆದರಿಕೆಯಾದರೆ ಆನ್ ಲೈನ್ ಮೂಲಕ ದೂರು ದಾಖಲಿಸಿ'' ಎಂದು ಅಲ್ಕಾ ಲಂಬಾ ಆಗ್ರಹಿಸಿದರು.