ಕರ್ನಾಟಕ

karnataka

ಕಲಬುರಗಿ: 9 ನಾಡ ಕಚೇರಿಗಳ ಮೇಲೆ ಏಕಕಾಲಕ್ಕೆ ಲೋಕಾಯುಕ್ತರ ದಾಳಿ

By ETV Bharat Karnataka Team

Published : Feb 27, 2024, 7:49 AM IST

ಕಲಬುರಗಿ ಜಿಲ್ಲೆಯ 9 ನಾಡ ಕಚೇರಿಗಳ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಕಡತಗಳನ್ನು ಪರಿಶೀಲನೆ ನಡೆಸಿದರು.

Etv Bharat
Etv Bharat

ಕಲಬುರಗಿ:ಕಲಬುರಗಿ ಜಿಲ್ಲೆಯ 9 ತಾಲೂಕಿನ ನಾಡ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಸಂಜೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಜಾನ್ ಆಂಟೋನಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮಂಜುನಾಥ್ ಗಂಗಾಲ್ ಮತ್ತು ಗೀತಾ ಬೆನಾಳ್ ನೇತೃತ್ವದಲ್ಲಿ ತಲಾ ಹತ್ತು ಅಧಿಕಾರಿ‌ ಹಾಗೂ ಸಿಬ್ಬಂದಿ ತಂಡ 9 ಕಡೆಗಳಲ್ಲಿರುವ ನಾಡ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ‌ ಮಾಡಿದ್ದಾರೆ. ನಾಡ ಕಚೇರಿಗಳಲ್ಲಿ ಸಾರ್ವಜನಿಕರಿಗೆ ನಿಗದಿತ ಸೇವಾ ಶುಲ್ಕಕ್ಕಿಂತ ಹೆಚ್ಚಿನ ಹಣ ಸುಲಿಗೆ ಮಾಡಲಾಗುತ್ತಿದೆ. ಆದಾಯ ಪ್ರಮಾಣಪತ್ರ ಸೇರಿ ಸರ್ಕಾರಿ ದಾಖಲೆಗಳನ್ನು ಮಾಡಿಕೊಡಲು ಹಣ ಸುಲಿಗೆ ಮಾಡುತ್ತಿರುವ ಆರೋಪಗಳು ಕೇಳಿ ಬಂದಿದ್ದವು. ಇದೇ ವಿಚಾರವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ದಿಢೀರ್​ ದಾಳಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮಟ್ಕಾ, ಜೂಜಾಟ- 13 ಜನರ ಬಂಧನ:ಕಲಬುರಗಿ ನಗರದ ಎಸ್​ಟಿಬಿಟಿ ಹತ್ತಿರ ಮಟ್ಕಾ ಬರೆದುಕೊಳ್ಳುತ್ತಿದ್ದ ಓರ್ವನನ್ನು, ಗಂಜ್ ಏರಿಯಾದಲ್ಲಿ ಜೂಜಾಡುತ್ತಿದ್ದ 6 ಜನ ಮತ್ತು ಕವಲಗಾ (ಬಿ) ಸೀಮಾಂತರದಲ್ಲಿ ಜೂಜಾಟವಾಡುತ್ತಿದ್ದ 6 ಜನ ಸೇರಿ ಒಟ್ಟು 13 ಜನರನ್ನು ಬಂಧಿಸಲಾಗಿದೆ. ಪೊಲೀಸರು ಬಂಧಿತರಿಂದ 35,250 ರೂ. ನಗದು ಜಪ್ತಿ ಮಾಡಿದ್ದಾರೆ.

ಎಸ್​ಟಿಬಿಟಿ ಸರ್ಕಲ್ ಹತ್ತಿರ ಮಟ್ಕಾ ಬರೆದುಕೊಳ್ಳುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ದಾಳಿ ನಡೆಸಿ ಶಹಾಬಜಾರ ತಾಂಡಾದ ಅನೀಲ್​ ಜಾಧವ್ ಎಂಬಾತನನ್ನು ಬಂಧಿಸಿ 1,250 ರೂ. ನಗದು ಮತ್ತು ಮಟ್ಕಾ ಚೀಟಿ ಜಪ್ತಿ ಮಾಡಿದ್ದಾರೆ. ಅದರಂತೆ ನಗರದ ಗಂಜ್ ಏರಿಯಾದಲ್ಲಿ ಜೂಜಾಟ ನಡೆದಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಸಿಸಿಬಿ ಪೊಲೀಸರು, ಬಸವರಾಜ ಹಿರೇಗೌಡ, ಲಿಂಗರಾಜ ದೇವಣಿ, ಆನಂದ ಪಾಟೀಲ, ಸಿದ್ರಾಮಪ್ಪ ಗಾಜರೆ, ಜಗದೀಶ ಪಾಟೀಲ ಎಂಬುವವರನ್ನು ಬಂಧಿಸಿ 23,280 ರೂ. ನಗದು ಜಪ್ತಿ ಮಾಡಿದ್ದಾರೆ.

ಇನ್ನು ಕವಲಗಾ (ಬಿ) ಸೀಮಾಂತರದ ಸರ್ಕಾರಿ ಶಾಲೆ ಹತ್ತಿರ ಜೂಜಾಟ ನಡೆದಿರುವ ಬಗ್ಗೆ ಮಾಹಿತಿ ಪಡೆದ ಫರಹತಾಬಾದ ಪಿಎಸ್‍ಐ ಹಾಗೂ ಸಿಬ್ಬಂದಿ ದಾಳಿ ನಡೆಸಿ, ಬೀರಪ್ಪ ಗುಡೂರ, ಮಂಜು ಲಗಶೆಟ್ಟಿ, ಕೆಂಚಪ್ಪ ಪೂಜಾರಿ, ರಮೇಶ ಮ್ಯಾಕೇರಿ, ನೀಲಕಂಠಯ್ಯ ಮತ್ತು ಚಂದ್ರಕಾಂತ ಮುಸಂಡಿ ಎಂಬುವವರನ್ನು ಬಂಧಿಸಿ 10,720 ರೂ. ನಗದು ಜಪ್ತಿ ಮಾಡಿದ್ದಾರೆ. ಈ ಕುರಿತಾಗಿ ಪ್ರತ್ಯೇಕವಾಗಿ ಬ್ರಹ್ಮಪುರ, ಚೌಕ್ ಮತ್ತು ಫರಹತಾಬಾದ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದನ್ನೂ ಓದಿ:ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಅಡ್ಡ ಮತದಾನದ ಭೀತಿ ಇದೆ ಅನ್ನೋದು ಸುಳ್ಳು: ಖರ್ಗೆ

ABOUT THE AUTHOR

...view details