ಕರ್ನಾಟಕ

karnataka

ಪ್ರೀತಂ ಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವೆ: ಪ್ರಜ್ವಲ್ ರೇವಣ್ಣ

By ETV Bharat Karnataka Team

Published : Mar 10, 2024, 4:35 PM IST

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಾಗಿ ಸಂಸದ ಪ್ರಜ್ವಲ್​ ರೇವಣ್ಣ ತಿಳಿಸಿದ್ದಾರೆ.

prajwal-revanna
ಪ್ರಜ್ವಲ್ ರೇವಣ್ಣ

ಹಾಸನ:ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಹಾಸನ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿರುವ ಹಾಲಿ ಸಂಸದ ಪ್ರಜ್ವಲ್ ರೇವಣ್ಣ, ಬಿಜೆಪಿ ನಾಯಕರೆಡೆಗೆ ತಮ್ಮ ಸ್ನೇಹಹಸ್ತ ಚಾಚಿದ್ದಾರೆ. ಮುಂದಿನ ದಿನಗಳಲ್ಲಿ ಮಾಜಿ ಶಾಸಕ ಪ್ರೀತಂ ಗೌಡರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಟಿಕೆಟ್ ಅನೌನ್ಸ್ ಆದ್ಮೇಲೆ ಎರಡೂ ಪಕ್ಷದವರು ಸೇರಿ ಎಲ್ಲಾ ಭಾಗಗಳಲ್ಲೂ ಸಭೆ ನಡೆಸುತ್ತೇವೆ. ಕಡೂರಿನಲ್ಲಿ ಬೆಳ್ಳಿಪ್ರಕಾಶ್, ಬೇಲೂರು ಶಾಸಕ ಎಚ್.ಕೆ.ಸುರೇಶ್, ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಜೊತೆ ಮಾತನಾಡಿದ್ದೀನಿ. ಅರಕಲಗೂಡಿನ ಯೋಗ ರಮೇಶ್, ಮಾಜಿ ಶಾಸಕ ಪ್ರೀತಂ ಗೌಡ ಸೇರಿದಂತೆ ಎಲ್ಲ ಬಿಜೆಪಿ ಮುಖಂಡರೊಂದಿಗೂ ಮಾತನಾಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ" ಎಂದರು.

"ಈಗಾಗಲೇ ಹಾಸನದ ಹಲವು ಭಾಗಗಳಿಗೆ ಭೇಟಿ ನೀಡಿದ್ದೇನೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರಲ್ಲಿ ಮೈತ್ರಿ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ನಮ್ಮ ಮೈತ್ರಿಗೆ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಿಗಲಿದೆ. ಮುಂದಿನ ಎರಡ್ಮೂರು ದಿನಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳ ಟಿಕೆಟ್​ ಘೋಷಣೆಯಾಗಲಿದೆ" ಎಂದು ಹೇಳಿದರು.

"ಟಿಕೆಟ್ ಘೋಷಣೆ​ ಆಗುತ್ತಿದ್ದಂತೆ ಎರಡೂ ಪಕ್ಷದವರು ಸೇರಿ ಮೊದಲು ಸ್ಥಳೀಯ ಮಟ್ಟದಲ್ಲಿ ಸಭೆ ಮಾಡುತ್ತೇವೆ. ಆ ನಂತರ ದೊಡ್ಡ ಮಟ್ಟದಲ್ಲಿ ಸಭೆ ನಡೆಸುತ್ತೇವೆ. ಕ್ಷೇತ್ರಕ್ಕೆ ಬಿ.ಎಸ್​.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಹೆಚ್​.ಡಿ.ಕುಮಾರಸ್ವಾಮಿ ಆಗಮಿಸುವ ವೇಳೆ ಎಲ್ಲರೊಂದಿಗೆ ಮಾತನಾಡಿ ಪೂರ್ವಭಾವಿ ಸಭೆ ಮಾಡ್ತೇವೆ. ಈಗಾಗಲೇ ನಮ್ಮ ಪಕ್ಷದ ಪೂರ್ವಭಾವಿ ಸಭೆಗಳು ನಡೆದಿವೆ. ಈಗ ಜಂಟಿ ಪೂರ್ವಭಾವಿ ಸಭೆಗಳು‌ ನಡೆಯಬೇಕು" ಎಂದು ತಿಳಿಸಿದರು.

ಇದನ್ನೂ ಓದಿ:ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೊಡಿಸಲು ಶಕ್ತಿ ಮೀರಿ ಪ್ರಯತ್ನ ಮಾಡುವೆ: ಬಿ.ಎಸ್.ಯಡಿಯೂರಪ್ಪ

ABOUT THE AUTHOR

...view details