ಪ್ರಮೋದ್ ಮಧ್ವರಾಜ್ ಮಾಧ್ಯಮದವರ ಜೊತೆ ಮಾತನಾಡಿದರು. ಚಿಕ್ಕಮಗಳೂರು:ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ಗಾಗಿ ಪೈಪೋಟಿ ಇದ್ದು, ಬಿಜೆಪಿಯಿಂದ ಬಹಳಷ್ಟು ಜನ ಆಕಾಂಕ್ಷಿಗಳಿದ್ದಾರೆ. ನಾನು ಕೂಡ ಪ್ರಬಲ ಆಕಾಂಕ್ಷಿ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೆಲ ದಿನಗಳಿಂದ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದು, ಬಿಜೆಪಿ ಕಾರ್ಯಕರ್ತರು, ಜನರಿಂದ ನನಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ನಾನೊಬ್ಬ ಬಿಜೆಪಿ ಸಾಮಾನ್ಯ ಕಾರ್ಯಕರ್ತ, ನನಗೆ ಅರ್ಹತೆ ಇದ್ದರೆ ಟಿಕೆಟ್ ಕೊಡಿ. ನಾನೂ ಒಬ್ಬ ಹಿಂದುಳಿದ ವರ್ಗದ ಮೀನುಗಾರ ಸಮುದಾಯಕ್ಕೆ ಸೇರಿದವನಾಗಿದ್ದು, ಟಿಕೆಟ್ ನೀಡಬೇಕೆಂದು ಆಗ್ರಹಿಸಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ನನಗೆ ಜನಪ್ರಿಯತೆ ಇದ್ದರೆ, ಸರ್ವೇಗಳಲ್ಲಿ ನನ್ನ ಹೆಸರು ಮುಂಚೂಣಿಯಲ್ಲಿ ಇದ್ರೆ, ಕಾರ್ಯಕರ್ತರು ನನ್ನ ಹೆಸರನ್ನು ಸೂಚಿಸಿದರೆ ಮಾತ್ರ ನನಗೆ ಟಿಕೆಟ್ ಕೊಡಿ. ಟಿಕೆಟ್ ಸಿಗದಿದ್ದರೂ ನನ್ನ ಜೀವಮಾನ ಇರುವವರೆಗೆ ಬಿಜೆಪಿಯಲ್ಲೇ ಇರುತ್ತೇನೆ. ಬಿಜೆಪಿ ಹೈಕಮಾಂಡ್ ಯಾರಿಗಾದರೂ, ಟಿಕೆಟ್ ಘೋಷಣೆ ಮಾಡಿದ್ರೂ ಅವರನ್ನು ಗೆಲ್ಲಿಸಲು ಕೆಲಸ ಮಾಡುತ್ತೇನೆ ಎಂದು ಪ್ರಮೋದ್ ಮಧ್ವರಾಜ್ ತಿಳಿಸಿದರು.
ಕೇಂದ್ರ ಸಚಿವೆ, ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೇಳುವ ಎಲ್ಲ ಹಕ್ಕಿದೆ. ನನ್ನಂತ ಸಾಮಾನ್ಯ ಕಾರ್ಯಕರ್ತನಿಗೂ ಟಿಕೆಟ್ ಕೇಳುವ ಹಕ್ಕಿದೆ. ಶೋಭಾ ಕರಂದ್ಲಾಜೆ ವಿರುದ್ಧ ನಡೆಯುತ್ತಿರುವ ಪತ್ರ ಚಳವಳಿಯಲ್ಲಿ ನನಗೆ ನಂಬಿಕೆ ಇಲ್ಲ. 'ಗೋ ಬ್ಯಾಕ್ ಶೋಭಕ್ಕ' ಅಭಿಯಾನದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಮಧ್ವರಾಜ್ ಸ್ಪಷ್ಟಪಡಿಸಿದರು.
ಇದನ್ನೂಓದಿ:ಶೋಭಾ ಕರಂದ್ಲಾಜೆ ಈ ಬಾರಿ ಗೆದ್ದೇ ಗೆಲ್ಲುತ್ತಾರೆ ಎಂದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ