ಕರ್ನಾಟಕ

karnataka

ಕಿತ್ತೂರು - ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್​ 12 ಸ್ಥಾನ ಗೆಲ್ಲುತ್ತೆ: ಸಚಿವ ಎಚ್.ಕೆ. ಪಾಟೀಲ್ ವಿಶ್ವಾಸ​​ - HK Patil

By ETV Bharat Karnataka Team

Published : Apr 15, 2024, 10:59 AM IST

Updated : Apr 15, 2024, 12:50 PM IST

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮುಂಬೈ ಕರ್ನಾಟಕ ಮತ್ತು ಹೈದರಾಬಾದ್​​​ ಕರ್ನಾಟಕದ 12 ಕ್ಷೇತ್ರಗಳಲ್ಲೂ ಕಾಂಗ್ರೆಸ್​ ಗೆಲುವು ಸಾಧಿಸುತ್ತದೆ ಎಂದು ಸಚಿವ ಎಚ್. ಕೆ. ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಚಿವ ಎಚ್.ಕೆ. ಪಾಟೀಲ್​​
ಸಚಿವ ಎಚ್.ಕೆ. ಪಾಟೀಲ್​​

ಎಚ್.ಕೆ. ಪಾಟೀಲ್

ಬೆಳಗಾವಿ:ಮುಂಬೈ ಕರ್ನಾಟಕ ಮತ್ತು ಹೈದರಾಬಾದ್​​​ ಕರ್ನಾಟಕದ 12 ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ನಾವು ಕ್ಲೀನ್ ಸ್ವೀಪ್ ಮಾಡುತ್ತೇವೆ ಎಂದು ಸಚಿವ ಎಚ್. ಕೆ. ಪಾಟೀಲ್ ಭವಿಷ್ಯ ನುಡಿದರು. ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನಮ್ಮ ಸರ್ಕಾರ ಮಾಡಿದ ಸಾಧನೆಯ ಕಾರಣಕ್ಕೆ ಬಲಯುತವಾಗಿ ಪಕ್ಷ ಸಂಘಟನೆ ಆಗಿದೆ. ಸರ್ಕಾರ ಜನಪ್ರಿಯತೆಯನ್ನು ಬೆಳೆಸಿಕೊಂಡಿದೆ. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ಆಶ್ಚರ್ಯಕರ ಫಲಿತಾಂಶ ಬರಲಿದೆ" ಎಂದರು.

5 ಗ್ಯಾರಂಟಿಗಳನ್ನು ನಾವು ಕೊಟ್ಟಿದ್ದೇವೆ. ಅವುಗಳ ಮೂಲಕ ನಮ್ಮ ಪ್ರಯತ್ನ ಪರಿಣಾಮಕಾರಿಯಾಗಿದೆ. ಇವು ಕೇವಲ ಕಾರ್ಯಕ್ರಮಗಳಲ್ಲ. ಪ್ರತಿಯೊಬ್ಬ ಬಡವ, ಬಡತನ ರೇಖೆಯಿಂದ ಮೇಲೆ ಬಂದಿದ್ದಾನೆ. 1 ಕೋಟಿಗಿಂತಲೂ ಹೆಚ್ಚು ಕುಟುಂಬಗಳು ಬಡತನ‌ ರೇಖೆಗಿಂತ ಮೇಲೆ ಬಂದಿವೆ. ಅತ್ಯಂತ ಕಡಿಮೆ ಸಮಯದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಿವೆ. ಇದು ನಮ್ಮ ಸರ್ಕಾರದ ಸಾಧನೆ ಎಂದು ಹೆಚ್​ ಕೆ ಪಾಟೀಲ್​ ಹೇಳಿದ್ದಾರೆ.

ಬಹಳಷ್ಟು ಯೋಜ‌ನೆಗಳು ಕೇವಲ ಶೇ. 50-60 ಪರ್ಸೆಂಟ್ ಮಾತ್ರ ಜನರಿಗೆ ತಲುಪುತ್ತವೆ. ಆದರೆ, ನಮ್ಮ ರಾಜ್ಯದಲ್ಲಿ ತಂತ್ರಜ್ಞಾನ ಉಪಯೋಗಿಸಿ ಶೇ.99.16ರಷ್ಟು ತಲುಪಿದ್ದೇವೆ. ಗೃಹಜ್ಯೋತಿಯಲ್ಲಿ ಶೇ.100 ರಷ್ಟು ಮನೆಗೆ ತಲುಪಿವೆ. ರಾಜೀವ್​ ಗಾಂಧಿಯವರು ಸಂಸತ್​ನಲ್ಲಿ ಹೇಳಿದ್ದರು. 1 ರೂ. ದೆಹಲಿಯಿಂದ ಕಳಿಸಿದರೆ ಅದು ಕೇವಲ 16 ಪೈಸೆ ಆಗಿರುತ್ತೆ ಅಂತ ಹೇಳಿದ್ದರು. ಅಷ್ಟು ಸೋರಿಕೆ ಅನುತ್ಪಾದಕ ವ್ಯಯ ಆಗುತ್ತಿತ್ತು. ಆದರೆ, ಇಂದು ಹಣ ಬಂದಿದ್ದು ಗಂಡನಿಗೂ ಗೊತ್ತಾಗಲ್ಲ. ಡಿಬಿಟಿ ಸಿಸ್ಟಮ್​​ನಲ್ಲಿ ಹಣ ಸಂದಾಯ ಆಗ್ತಿದೆ. ಇದು ನಮ್ಮ ಪಕ್ಷಕ್ಕೆ ಆಶೀರ್ವಾದದ ರೂಪದಲ್ಲಿ ಬರುತ್ತದೆ. ಕೈ ಸಾಲ ಇಲ್ಲದೆ ಹೆಣ್ಣು ಮಕ್ಕಳು ಇಂದು ಮಾರ್ಕೇಟ್​ನಲ್ಲಿ ಖರೀದಿ ಮಾಡುತ್ತಿದ್ದಾರೆ ಎಂದು ಎಚ್. ಕೆ. ಪಾಟೀಲ್ ತಮ್ಮ ಸರ್ಕಾರದ ಯೋಜನೆಗಳನ್ನ ಸಮರ್ಥಿಸಿಕೊಂಡರು.

ಮುಂದುವರೆದು ಮಾತನಾಡಿದ ಅವರು, ಗೋವಾ ಸಿಎಂ ಹಾಗೂ ಕರ್ನಾಟಕ ಸಿಎಂ ಕರೆಸಿ ಮಹದಾಯಿ ಸಮಸ್ಯೆ ಬಗೆ ಹರಿಸ್ತಿನಿ ಅಂತ ಪ್ರಧಾನಿ ಹೇಳಿದ್ದರು. ಆದರೆ, ಅದನ್ನು ಮಾಡದೇ ಪ್ರಧಾನಿ ವಚನಭ್ರಷ್ಟರಾದರು ಎಂದು ಟೀಕಿಸಿದರು. ಮಹದಾಯಿಗೆ ನಾವು ಅಡ್ಡಿ ಮಾಡೋದಿಲ್ಲ ಎಂದು ಗೋವಾದಿಂದ ಪತ್ರ ಬಂದಿತ್ತು. ಅದನ್ನು ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಪ್ರದರ್ಶನ ಮಾಡಿದ್ದರು. ಅದನ್ನು ನೀವು ಎಲ್ಲರೂ ನೋಡಿದ್ದೀರಿ. ಪ್ರಹ್ಲಾದ ಜೋಶಿ‌ ಸಿಡಬ್ಲುಸಿ ಅವರು ಕ್ಲೀಯರನ್ಸ್ ಕೊಟ್ಟಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್​ನಲ್ಲಿ ಅನ್ ಡೇಟೆಡ್ ಆದೇಶವನ್ನು ಲಗತ್ತಿಸಲಾಗಿತ್ತು. ವನ್ಯಜೀವಿ ಆಯೋಗಕ್ಕೆ ಅದರದ್ದೇ ಆದ ಆತಂಕಗಳಿವೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದವರು ಸೂಚನೆ ನೀಡಿದ್ದು, ತನ್ನದೆ ಆದ ಅಧ್ಯಯನ ಮಾಡಿ ಒಂದು ಅಭಿಪ್ರಾಯಕ್ಕೆ ಬಂದರು ಎಂದು ಕಾನೂನು ಸಚಿವರು ಹೇಳಿದರು.

ಕಳಸಾ ಯೋಜನೆಯಿಂದ ವನ್ಯಜೀವಿಗಳಿಗೆ ಮಾರಕ ಆಗೊಲ್ಲ ಎಂದು ವರದಿ ಬಂತು. ಆದರೂ ಕರ್ನಾಟಕಕ್ಕೆ ನ್ಯಾಯ ಕೊಡಲು ಕೇಂದ್ರದ ವನ್ಯಜೀವಿ ಮತ್ತು ಪರಿಸರ ಇಲಾಖೆಯವರು ಮನಸು ಮಾಡಲಿಲ್ಲ. 25 ಜನ ಎಂಪಿ ಇದ್ದಾರೆ ಅವರು ಏನು ಮಾಡುತ್ತಿದ್ದಾರೆ. ಮೀಟಿಂಗ್​ಗೆ ರೆಕಮಂಡೇಷನ್ ಬಂದಾಗ ಅದನ್ನು ಡೆಫರ್ ಮಾಡಿದ್ದರು. ಜನವರಿ 30ನೇ ತಾರೀಖು ಸಭೆ ಮಾಡಿ ನಿರ್ಧಾರ ಕೈಗೊಳ್ಳದೇ ಅದನ್ನು ಮುಂದೂಡ್ತಿರಿ. ನಿಮ್ಮ ಉದ್ದೇಶ ಏನೂ ಎನ್ನುವುದನ್ನು ಸ್ಪಷ್ಟಪಡಿಸಿ ಎಂದು ಜೋಶಿ ಹಾಗೂ ಬಿಎಸ್​ ಯಡಿಯೂರಪ್ಪ ಅವರಿಗೆ ಎಚ್.ಕೆ. ಪಾಟೀಲ್​ ಸವಾಲು ಹಾಕಿದರು.

ಅಲ್ಲದೇ, ಕೇಂದ್ರದ ಮಂತ್ರಿಗಳು ಹಾಗೂ ಸಂಸದರು ಮಹಾದಾಯಿ ವಿಚಾರವಾಗಿ ಗೌಪ್ಯವಾಗಿರುವ ಸಂಗತಿಗಳನ್ನು ಸ್ಪಷ್ಟಪಡಿಸಬೇಕು. ಮಹದಾಯಿ‌ ಬಗ್ಗೆ ಮಾತಾನಾಡಲು ಬಿಜೆಪಿಯವರು ನೈತಿಕ ಹಕ್ಕು ಕಳೆದುಕೊಂಡಿದ್ದಾರೆ ಎಂದು ಹರಿಹಾಯ್ದರು. ದೇಶದಲ್ಲಿ ಸತ್ಯವನ್ನು ಮರೆಮಾಚಲು ಹಲವಾರು ಪ್ರತಿಷ್ಠಿತ ವ್ಯಕ್ತಿಗಳು ಪ್ರಯತ್ನ ಮಾಡ್ತಿದ್ದಾರೆ. ಮುಂಬೈ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದಲ್ಲಿ ನಾನು ಪ್ರವಾಸ ಮಾಡಿದ್ದೇನೆ. ಮಾಧ್ಯಮಗಳ‌ ಸಂಪೂರ್ಣ ಹಿಡಿತವನ್ನು ಬಿಜೆಪಿ ಮತ್ತು ಮೋದಿ ಹೊಂದಿದ್ದಾರೆ. ಜಾಹೀರಾತು ಸುದ್ದಿಗಳು ಬರದ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ. ಸುದ್ದಿ ಮಾಧ್ಯಮದ ಮಾಲೀಕರು ಬಿಜೆಪಿಗೆ ಅನಿವಾರ್ಯ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:"ಬಿಜೆಪಿ ದೃಷ್ಟಿಯಲ್ಲಿ ದಲಿತರು ನಾಯಿಗೆ ಸಮಾನ": ಹುಬ್ಬಳ್ಳಿಯಲ್ಲಿ ಗುಜರಾತ್​ ಶಾಸಕ ಜಿಗ್ನೇಶ್​​ ಮೇವಾನಿ ಹೇಳಿಕೆ - MLA Jignesh Mevani

Last Updated :Apr 15, 2024, 12:50 PM IST

ABOUT THE AUTHOR

...view details