ಕರ್ನಾಟಕ

karnataka

ಕನ್ನಡಿಗರ ನೆಲ-ಜಲ ಪಡೆದು ಉದ್ಯೋಗ ನೀಡದಿದ್ದರೆ ಹೇಗೆ? ಖಾಸಗಿ ಕಂಪನಿಗಳ ನಡೆಗೆ ಹೈಕೋರ್ಟ್ ಗರಂ - High Court

By ETV Bharat Karnataka Team

Published : Apr 23, 2024, 9:15 PM IST

Updated : Apr 23, 2024, 9:52 PM IST

ಕನ್ನಡಿಗರ ನೆಲ-ಜಲ ಪಡೆದು ಅವರಿಗೆ ಉದ್ಯೋಗ ನೀಡದಿರುವ ಖಾಸಗಿ ಕಂಪನಿಗಳ ನಡೆಗೆ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.

COMPANIES THAT ACQUIRED LAND  KANNADIGAS  JOB ISSUE  BENGALURU
ಕನ್ನಡಿಗರ ನೆಲ-ಜಲ ಪಡೆದು ಅವರಿಗೆ ಉದ್ಯೋಗ ನೀಡದ ಕಂಪನಿಗಳ ಕ್ರಮಕ್ಕೆ ಹೈಕೋರ್ಟ್ ಕಿಡಿ

ಬೆಂಗಳೂರು: ಕನ್ನಡಿಗರ ನೆಲ-ಜಲ ಪಡೆದು ಅವರಿಗೇ ಉದ್ಯೋಗ ನೀಡುತ್ತಿಲ್ಲ. ಅಧಿಕಾರಿಗಳ ಹುದ್ದೆಗಳಿಗೆ ಕನ್ನಡಿಗರನ್ನು ನೇಮಿಸುವುದಿಲ್ಲ. ಕೇವಲ ‘ಸಿ’ ಹಾಗೂ ‘ಡಿ’ ವೃಂದದ ಉದ್ಯೋಗಗಳನ್ನು ಕನ್ನಡಿಗರಿಗೆ ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ. ಎಲ್ಲಾ ಹಂತದ ಹುದ್ದೆಗಳಲ್ಲೂ ಸಮಾನ ಅವಕಾಶ ನೀಡುವಂತಾಗಬೇಕು. ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳ ಪ್ರಾರಂಭಿಸಲು ಸರ್ಕಾರದಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನು ಪಡೆದರೂ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಲು ಖಾಸಗಿ ಕಂಪನಿಗಳು ತೋರಿಸುತ್ತಿರುವ ನಿರಾಸಕ್ತಿಗೆ ಇಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಕಾಲ್ ಸೆಂಟರ್ ಸೇರಿದಂತೆ ವಿವಿಧ ಕೇಂದ್ರಗಳ ನಿರ್ಮಾಣಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಹಾರ್ಡ್‌ವೇರ್ ಪಾರ್ಕ್‌ನಲ್ಲಿ ನಾಲ್ಕೂವರೆ ಎಕರೆ ಜಮೀನು ಹಂಚಿಕೆ ಮಾಡಿ ಹೊರಡಿಸಿದ್ದ ಆದೇಶ ರದ್ದುಪಡಿಸಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಜಾಗೊಳಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಐಡಿಬಿಐ ಬ್ಯಾಂಕ್ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.

ವಿಚಾರಣೆ ವೇಳೆ ಕನ್ನಡಿಗರಿಗೆ ಉದ್ಯೋಗ ನೀಡಲು ಬ್ಯಾಂಕ್ ಹಿಂದೇಟು ಹಾಕಿರುವ ಅಂಶವನ್ನು ಗಮನಿಸಿದ ನ್ಯಾಯಪೀಠ, ಅತೃಪ್ತಿ ವ್ಯಕ್ತಪಡಿಸಿತು. ಅಲ್ಲದೆ, ಕನ್ನಡಿಗರ ನೆಲ-ಜಲ ಪಡೆದು ಅವರಿಗೆ ಉದ್ಯೋಗ ನೀಡದಿದ್ದರೆ ಹೇಗೆ?. ಉದ್ಯೋಗ ನೀಡದಿದ್ದರೆ ಕನ್ನಡಿಗರ ಆತ್ಮಸಾಕ್ಷಿಗೆ ಚುಚ್ಚಿದಂತಾಗುತ್ತದೆ. ಜವಾನ-ಝಾಡಮಾಲಿ ಅಂತಹ ಉದ್ಯೋಗಗಳಿಗೆ ಮಾತ್ರ ಕನ್ನಡಿಗರನ್ನು ನೇಮಕ ಮಾಡುವುದಲ್ಲ. ಎಲ್ಲಾ ಹಂತದ ಹುದ್ದೆಗಳಿಗೂ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು ಎಂದು ತಾಕೀತು ಮಾಡಿತು. ಸಂಸ್ಥೆಯಲ್ಲಿ ಕನ್ನಡಿಗರಿಗೆ ಶೇ.80ರಷ್ಟು ಉದ್ಯೋಗ ನೀಡುವುದಾಗಿ ಪ್ರಮಾಣಪತ್ರ ಸಲ್ಲಿಸುವಂತೆಯೂ ಐಡಿಬಿಐ ಬ್ಯಾಂಕ್‌ಗೆ ಸೂಚಿಸಿದೆ.

ಕಾದಂಬರಿಕಾರ ಗಳಗನಾಥ ಅವರ ಮಾತುಗಳನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ಕನ್ನಡಿಗರಿಗೆ ಕನ್ನಡಿಗರಿಂದ ಆದಷ್ಟು ಅನ್ಯಾಯ ಬೇರೆಯವರಿಂದ ಆಗಿಲ್ಲ. ಇಂತಹ ಅನ್ಯಾಯ ಬೇರೆಲ್ಲೂ ಆಗಿಲ್ಲ. ಬ್ರಿಟಿಷ್ ಅಧಿಕಾರಿ ರಾಬರ್ಟ್ ಕ್ಲೈವ್ ಸ್ಥಳೀಯರನ್ನು ಗ್ರೂಪ್ ಸಿ ಹುದ್ದೆಗೆ ನೇಮಿಸುತ್ತಿದ್ದರು. ಅದೇ ರೀತಿ ನೀವೂ ಸಹ ವರ್ತಿಸಬಾರದೆಂದು ಬ್ಯಾಂಕ್ ಪರ ವಕೀಲರ ಕಿವಿ ಹಿಂಡಿತು.

ಅಂತಿಮವಾಗಿ, ಪ್ರಕರಣದಲ್ಲಿ ಭೂಮಿ ಹಂಚಿಕೆ ಮಾಡಿ ನೀಡಲಾಗಿದ್ದ ಮಂಜೂರಾತಿ ಪತ್ರ ರದ್ದುಪಡಿಸಿರುವ ವಿಚಾರ ಸಂಬಂಧ ಯಥಾಸ್ಥಿತಿ ಕಾಯ್ದಕೊಳ್ಳುವಂತೆ ಕೆಐಎಡಿಬಿ ಮತ್ತು ಐಡಿಬಿಐ ಬ್ಯಾಂಕಿಗೆ ಸೂಚಿಸಿ ವಿಚಾರಣೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಕೆಐಡಿಬಿ ಅಭಿವೃದ್ಧಿಪಡಿಸಿರುವ ಬೆಂಗಳೂರು ಹಾರ್ಡ್‌ವೇರ್ ಪಾಕ್‌ರ್ನಲ್ಲಿ 4.5 ಎಕರೆ ಭೂಪ್ರದೇಶವನ್ನು ಐಡಿಬಿಐ ಬ್ಯಾಂಕಿಗೆ 2013ರ ಫೆ.15ರಂದು ಹಂಚಿಕೆ ಮಾಡಿತ್ತು. ಬ್ಯಾಂಕಿನ ರೀಜನಲ್ ಪ್ರಾಸೆಸಿಂಗ್ ಯೂನಿಟ್, ಕರೆನ್ಸಿ ಚೆಸ್ಟ್ ಸೆಂಟರ್, ಕಾಲ್ ಸೆಂಟರ್, ಸಿಬ್ಬಂದಿ ವಸತಿ ನಿಲಯ ಸೇರಿದಂತೆ ಇನ್ನಿತರ ಕಟ್ಟಡ ನಿರ್ಮಾಣಕ್ಕೆ ಈ ಜಮೀನು ಹಂಚಿಕೆ ಮಾಡಿತ್ತು. ಎರಡು ವರ್ಷದಲ್ಲಿ ಯೋಜನೆ ಜಾರಿಗೆ ತರಬೇಕು. ವೈಯಕ್ತಿಕ ಅಧಿಕಾರಿ ಹುದ್ದೆಗೆ ಕನ್ನಡಿಗರನ್ನು ನೇಮಿಸಬೇಕು ಎಂಬುದಾಗಿ ಭೂಮಿ ಹಂಚಿಕೆಗೆ ಕೆಐಎಡಿಬಿ ಷರತ್ತು ವಿಧಿಸಿತ್ತು. ಹತ್ತು ವರ್ಷವಾದರೂ ಯೋಜನೆ ಜಾರಿ ಮಾಡದ ಹಿನ್ನೆಲೆಯಲ್ಲಿ ಭೂಮಿ ಹಂಚಿಕೆ ಪತ್ರ ರದ್ದುಪಡಿಸಿ 2023ರ ಜು.14ರಂದು ಕೆಐಎಡಿಬಿ ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿ 2024ರ ಮಾ.6ರಂದು ಆದೇಶಿಸಿತ್ತು. ಅಲ್ಲದೆ, ಇಡೀ ಯೋಜನೆಯಲ್ಲಿ ಅಧಿಕಾರಿ ಹುದ್ದೆಯೊಂದಕ್ಕೆ ಕನ್ನಡಿಗರನ್ನು ನೇಮಕ ಮಾಡಬೇಕೆಂಬ ಷರತ್ತು ಪಾಲಿಸದ್ದಕ್ಕೆ ಏಕಸದಸ್ಯ ನ್ಯಾಯಪೀಠ ಗಂಭೀರ ಆಕ್ಷೇಪ ವ್ಯಕ್ತಪಡಿಸಿತ್ತು. ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಬ್ಯಾಂಕ್ ಮೇಲ್ಮನವಿ ಸಲ್ಲಿಸಿದೆ.

ಇದನ್ನೂ ಓದಿ:ಈಶ್ವರಪ್ಪನವರು ಪಕ್ಷದಿಂದ ಉಚ್ಚಾಟನೆಯಾಗಿರುವ ನೋವಿದೆ: ಬಿ.ವೈ.ರಾಘವೇಂದ್ರ - B Y Raghavendra

Last Updated :Apr 23, 2024, 9:52 PM IST

ABOUT THE AUTHOR

...view details