ಕರ್ನಾಟಕ

karnataka

ತಪ್ಪು ಮಾಡಿದವರ ವಿರುದ್ಧ ಪಕ್ಷದಿಂದಲೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ: ಹೆಚ್​​​​ಡಿಕೆ - HDK On Pen Drive Case

By ETV Bharat Karnataka Team

Published : Apr 29, 2024, 1:53 PM IST

Updated : Apr 29, 2024, 4:19 PM IST

ಹಾಸನ ವೈರಲ್​ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ತಪ್ಪು ಮಾಡಿದವರ ವಿರುದ್ದ ಪಕ್ಷದಿಂದಲೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ: ಹೆಚ್.ಡಿ ಕುಮಾರಸ್ವಾಮಿ
ತಪ್ಪು ಮಾಡಿದವರ ವಿರುದ್ಧ ಪಕ್ಷದಿಂದಲೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ: ಹೆಚ್.ಡಿ ಕುಮಾರಸ್ವಾಮಿ

ಹೆಚ್​​​​ಡಿಕೆ ಪ್ರತಿಕ್ರಿಯೆ

ಶಿವಮೊಗ್ಗ: ಹಾಸನ ಪೆನ್​ಡ್ರೈವ್​ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಡಿದವರ ವಿರುದ್ಧ ಪಕ್ಷದಿಂದಲೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಈಬಗ್ಗೆ ತನಿಖೆ ನಡೆಸಲು ಎಸ್​ಐಟಿ ರಚನೆ ಮಾಡಲಾಗಿದೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗುತ್ತದೆ. ಆದರೆ ಇದರಲ್ಲಿ ಕುಟುಂಬವನ್ನು ಎಳೆದು ತರುವುದು ಸರಿಯಲ್ಲ. ವ್ಯಕ್ತಿ ಬಗ್ಗೆ ಚರ್ಚಿಸಬೇಕು. ಇದರಲ್ಲಿ ದೇವೇಗೌಡರು​ ಮತ್ತು ಕುಮಾರಸ್ವಾಮಿ ಹೆಸರು ತರುವುದು ಸೂಕ್ತವಲ್ಲ ಎಂದು ಕಾಂಗ್ರೆಸ್​ ನಾಯಕರ ವಿರುದ್ಧ ಹರಿಹಾಯ್ದರು. ತಪ್ಪು ಮಾಡಿದ ವ್ಯಕ್ತಿಯನ್ನು ನಾವು ವಹಿಸಿಕೊಳ್ಳುತ್ತಿಲ್ಲ. ಎಸ್​ಐಟಿ ರಚನೆಯಾಗಿದೆ ಅವರು ತನಿಖೆ ನಡೆಸಿ ವರದಿ ನೀಡುತ್ತಾರೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಇಂತಹ ವಿಷಯಗಳು ನನಗೊಬ್ಬನಿಗೆ ಅಲ್ಲ, ಇಡೀ ಸಮಾಜಕ್ಕೆ ಮುಜುಗರ ಆಗುತ್ತದೆ. ಎಸ್​ಐಟಿ ತನಿಖೆಯು ಪಾರದರ್ಶಕವಾಗಿ ನಡೆಯಬೇಕು ಎಂದು ಮನವಿ ಮಾಡಿದರು.

''ಜೆಡಿಎಸ್​ ಅಂದ್ರೆ ನಾನು ಮತ್ತು ಹೆಚ್​ ಡಿ ದೇವೇಗೌಡರು ಅಷ್ಟೇ. ರೇವಣ್ಣ ಕುಟುಂಬದವರು ನಾಲ್ಕು ಜನ ಇದ್ದಾರೆ, ನಾವು ಬೇರೆ ಇದ್ದೇವೆ. ಈ ವಿಷಯ ಈಗ ಹೊರಗೆ ಬಂದಿದೆ. ನನಗೆ ಇದರ ಬಗ್ಗೆ ಮೊದಲೇ ಗೊತ್ತಾಗಿಲ್ಲ. ನಾನಾಗಲಿ ದೇವೇಗೌಡರಾಗಲಿ ಮಹಿಳೆಯರನ್ನು ಗೌರವದಿಂದ ಕಂಡಿದ್ದೇವೆ. ಚುನಾವಣೆ ಮುಂಚೆ ಈ ವಿಷಯ ತಿಳಿದಿದ್ದರೆ ಪಕ್ಷದಿಂದ ಕ್ರಮ ಕೈಗೊಳ್ಳಬಹುದಾಗಿತ್ತು. ಸದ್ಯ ತನಿಖೆಯ ವರದಿ ಬರಲಿ, ಅದರ ಬಳಿಕ ಮತನಾಡುವೆ'' ಎಂದು ಹೆಚ್​ಡಿಕೆ ತಿಳಿಸಿದರು.

ಹಾಸನ ಅಭ್ಯರ್ಥಿ ಒಳ್ಳೆ ಲೀಡ್​ನಿಂದ ಗೆಲುವು ಸಾಧಿಸುತ್ತಾರೆ:ರಾಜ್ಯದಲ್ಲಿಮೊದಲ ಹಂತದ ಚುನಾವಣೆ ಮುಕ್ತಾಯಗೊಂಡಿದ್ದು 14 ಕ್ಷೇತ್ರಗಳ ಪೈಕಿ 13ರ ರಲ್ಲಿ ನಮ್ಮ ಮೈತ್ರಿ ಪಕ್ಷ ಗೆಲುವು ಸಾಧಿಸಲಿದೆ. ಹಾಸನದಲ್ಲೂ ಅಭ್ಯರ್ಥಿ ಒಳ್ಳೆ ಲೀಡ್​ನಿಂದ ಗೆಲ್ಲಲಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.

ಶಿವಮೊಗ್ಗದಲ್ಲಿ ಚುನಾವಣೆ ಪ್ರಚಾರ:ಮೊದಲನೇ ಹಂತದ ಚುನಾವಣಾ ಪ್ರಕ್ರಿಯೆ ಮುಗಿದಿದೆ. ಈಗ ಎರಡನೇ ಹಂತದ ಚುನಾವಣಾ ಪ್ರಚಾರ ನಡೆಸಲಾಗುತ್ತಿದೆ. ಇಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಘವೇಂದ್ರ ಪರವಾಗಿ ಪ್ರಚಾರ ನಡೆಸಲು ಬಂದಿದ್ದೇನೆ. ಇಂದು ಮೂರು ಸಭೆಗಳಲ್ಲಿ ಭಾಗವಹಿಸಲಿದ್ದೇನೆ. ಮೊದಲನೇ ಹಂತದಲ್ಲಿ ನಡೆದ ಚುನಾವಣೆಯಲ್ಲಿ ನಾನು, ಯಡಿಯೂರಪ್ಪ, ವಿಜಯೇಂದ್ರ ಸೇರಿ ಪ್ರಚಾರ ನಡೆಸಿದ್ದೆವು. ಮಂಡ್ಯದಲ್ಲಿ ನಾನು ಅಭ್ಯರ್ಥಿಯಾಗಿದ್ದರೂ ಸಹ ಅಲ್ಲಿನ ಕಾರ್ಯಕರ್ತರಿಗೆ ಜವಾಬ್ದಾರಿಯನ್ನು ನೀಡಿ 12 ಕಡೆ ಪ್ರಚಾರ ನಡೆಸಿದ್ದೆ.

ಹುಬ್ಬಳ್ಳಿಯಲ್ಲಿ ನಾಳೆ ಕೋರ್ ಕಮಿಟಿ ಸಭೆಯನ್ನು ಕರೆಯಲಾಗಿದೆ. ಉಳಿದ 14 ಕ್ಷೇತ್ರಗಳ ಚುನಾವಣಾ ಪ್ರಚಾರದಲ್ಲಿ ನಮ್ಮ ಪಕ್ಷ ಭಾಗಿಯಾಗುವ ಕುರಿತು ಸಭೆ ಕರೆಯಲಾಗಿದೆ. ಬಳಿಕ ಉಳಿದ ಕಡೆ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದು ಇದೇ ವೇಳೆ ಕುಮಾರಸ್ವಾಮಿ ಮಾಹಿತಿ ನೀಡಿದರು.

ಇದನ್ನೂ ಓದಿ:ಪೆನ್​ಡ್ರೈವ್​ ಪ್ರಕರಣ: ತ್ವರಿತಗತಿಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಎಸ್​ಐಟಿಗೆ ಸೂಚನೆ; ಜಿ.ಪರಮೇಶ್ವರ್​​​ - G Parameshwar

Last Updated : Apr 29, 2024, 4:19 PM IST

ABOUT THE AUTHOR

...view details