ಕರ್ನಾಟಕ

karnataka

ETV Bharat / state

ಪೆನ್​ಡ್ರೈವ್​ ವಿಡಿಯೋ ಪ್ರಕರಣ, ಪ್ರಜ್ವಲ್​ ರೇವಣ್ಣ ಅಮಾನತು ವಿಚಾರ; ಕುಮಾರಸ್ವಾಮಿ ಹೇಳಿದ್ದೇನು? - H D Kumaraswamy

ಸಂಸದ ಪ್ರಜ್ವಲ್​ ರೇವಣ್ಣ ಅಮಾನತು ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

hd-kumaraswamy
ಪೆನ್​ಡ್ರೈವ್​ ವಿಡಿಯೋ ಪ್ರಕರಣ: ಪ್ರಜ್ವಲ್​ ರೇವಣ್ಣ ಅಮಾನತು ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು?

By ETV Bharat Karnataka Team

Published : Apr 29, 2024, 5:13 PM IST

ಪೆನ್​ಡ್ರೈವ್​ ವಿಡಿಯೋ ಪ್ರಕರಣ: ಪ್ರಜ್ವಲ್​ ರೇವಣ್ಣ ಅಮಾನತು ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು?

ಶಿವಮೊಗ್ಗ: ''ಸಂಸದ ಪ್ರಜ್ವಲ್​ ರೇವಣ್ಣ ಅಮಾನತು ಮಾಡುವ ಬಗ್ಗೆ ನಿನ್ನೆಯೇ ತೀರ್ಮಾನ ಆಗಿತ್ತು. ನಾಳೆ ಈ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಶಿಫಾರಸು ಆಗಬೇಕಿತ್ತು. ಇದರ ಆದೇಶವು ದೆಹಲಿಯಿಂದ ಆಗಬೇಕು. ಈ ಬಗ್ಗೆ ನಾನೇ ದೇವೇಗೌಡರಿಗೆ ಶಿಫಾರಸು ಮಾಡಿದ್ದೇನೆ. ಆದರೆ ಬಹಳ ಜನರು ಈ ವಿಚಾರದಲ್ಲಿ ಆತುರ ತೋರುತ್ತಿದ್ದಾರೆ'' ಎಂದು ಮಾಜಿ ಮುಖ್ಯಮಂತ್ರಿ ಹೆಚ್​​.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ನಗರದಲ್ಲಿಂದು ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ನಾನು ನಿನ್ನೆಯೇ ಈ ವಿಚಾರದ ಬಗ್ಗೆ ತಿಳಿಸಿದ್ದೇನೆ. ಇದನ್ನು ದೊಡ್ಡದಾಗಿ ಮಾಡಲು ಕಾಂಗ್ರೆಸ್​ನವರು ಎಲ್ಲಾ ರೀತಿಯ ಕುತಂತ್ರ ನಡೆಸಿದ್ದಾರೆ. ಇಲ್ಲಿ ಪ್ರಶ್ನೆ ಅಮಾನತು ಮಾಡುವುದಷ್ಟೇ ಅಲ್ಲ. ಎಸ್​ಐಟಿ ತನಿಖೆ ಜೊತೆಗೆ ಹಲವು ವಿಷಯಗಳ ತನಿಖೆಯಾಗಬೇಕಿದೆ. ಪೆನ್​ಡ್ರೈವ್​ ಸೃಷ್ಟಿಯಾದ ಬಗ್ಗೆಯೂ ತನಿಖೆ ನಡೆಯಬೇಕು'' ಎಂದು ಆಗ್ರಹಿಸಿದರು.

''ಪ್ರಜ್ವಲ್​ ರೇವಣ್ಣ ಅವರದ್ದು ಇದರಲ್ಲಿ ವಾಸ್ತವಾಂಶ ಇದ್ದರೆ ತನಿಖೆ ಕೈಗೊಳ್ಳುವಂತೆ ನಾನು ನಿನ್ನೆಯೇ ಹೇಳಿದ್ದೇನೆ. ಆದರೆ ಈ ಬಗ್ಗೆ ಅವರ ಮೇಲೆ ಯಾರೂ ಕೂಡ ನೇರವಾಗಿ ಆರೋಪ ಮಾಡಿಲ್ಲ. ತಪ್ಪು ಮಾಡಿದವರು ನೀರು ಕುಡಿಯಲೇಬೇಕು, ತಪ್ಪು ಮಾಡಿದವರಿಗೆ ಈ ನೆಲದ ಕಾನೂನಿನಡಿ ಶಿಕ್ಷೆ ಆಗಲೇಬೇಕೆಂದು ಹೇಳಿದ್ದೇನೆ. ಇದರಲ್ಲಿ ಪ್ರಜ್ವಲ್​ ರೇವಣ್ಣ ಅವರ ತಪ್ಪಿದ್ದರೆ, ಯಾವುದೇ ರಾಜಿಗೊಳಗಾಗುವ ಪ್ರಶ್ನೆಯೇ ಇಲ್ಲ. ಕಾನೂನಿನ ಉಲ್ಲಂಘನೆ ಆಗಿದ್ದರೆ, ಬಲವಂತ ಆಗಿದ್ದರೆ ಕ್ರಮಕ್ಕೆ ನಮ್ಮ ಕುಟುಂಬದ ಸಮ್ಮತಿ ಇದೆ'' ಎಂದರು.

ದೇವೇಗೌಡರಾಗಲಿ, ನಾನಾಗಲಿ ಲಕ್ಷಾಂತರ ಕುಟುಂಬದವರಿಗೆ ಸಹಾಯ ಮಾಡಿದ್ದೇವೆ. ಲಕ್ಷಾಂತರ ಕುಟುಂಬಗಳ ಮನೆ ದೀಪ ಬೆಳಗಿದ್ದೇವೆ. ಆ ರೀತಿಯಲ್ಲಿ ನಾವು ಬದುಕಿದ್ದೇವೆ. ಆದರೆ ಚುನಾವಣೆಗೆ ಮೂರು ದಿನ ಮುಂಚೆ ಗಲ್ಲಿ ಗಲ್ಲಿಗಳಲ್ಲಿ ಪೆನ್​ಡ್ರೈವ್ ಹಂಚಲಾಗಿದ್ದು,​ ಇದರ ಬಗ್ಗೆಯೂ ತನಿಖೆ ನಡೆಯಬೇಕು. ತಪ್ಪಿತಸ್ಥರ ಜೊತೆಗೆ, ಎಸ್​ಐಟಿ ಇದರ ಬಗ್ಗೆಯೂ ತನಿಖೆ ನಡೆಸಬೇಕು. ಪೆನ್​ಡ್ರೈವ್​ ಹಂಚಿಕೆ ಮಾಡಿದವರೂ ಕೂಡ ಅದಕ್ಕಿಂತ ದೊಡ್ಡ ಕೆಟ್ಟ ಅಪರಾಧ ಮಾಡಿದಂತಾಗಿದೆ. ಅದರ ಬಗ್ಗೆಯೂ ಎಲ್ಲ ಸತ್ಯ ಹೊರಬರಬೇಕಿದೆ'' ಎಂದು ಒತ್ತಾಯಿಸಿದರು.

ದೇವೇಗೌಡರ ಕುಟುಂಬ ಎಂಬ ವಿಚಾರ ಬರಲ್ಲ: ''ಇದರಲ್ಲಿ ದೇವೇಗೌಡರ ಕುಟುಂಬ ಎಂಬ ವಿಚಾರ ಬರುವುದಿಲ್ಲ. ಇದು ಕುಟುಂಬದ ವಿರುದ್ಧವಲ್ಲ. ರೇವಣ್ಣ ಕುಟುಂಬವೆಂದರೆ ರೇವಣ್ಣ, ಅವರ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ನಾವು ಈಗಾಗಲೇ ಡಿವೈಡ್​ ಆಗಿದ್ದು, ಬೇರೆ ಬೇರೆ ವಾಸಿಸುತ್ತಿದ್ದೇವೆ. ನಮ್ಮ ಬೇರೆ ಬೇರೆ ವ್ಯವಹಾರಗಳೂ ಇವೆ. ರಾಜಕೀಯವಾಗಿ ಸಭೆಗಳಲ್ಲಿ ಭಾಗವಹಿಸುತ್ತೇವೆ. ಆದರೆ ಕಾಂಗ್ರೆಸ್​ನವರು ನಮ್ಮ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಇದರಲ್ಲಿ ನನಗೂ ಅದಕ್ಕೂ ಸಂಬಂಧವೇನು? ದೇವೇಗೌಡರ ಮುಖ ಬಳಸಿ ಅಣಕು ಪ್ರದರ್ಶನ ಮಾಡಿದ್ದಾರೆ. ದೇವೇಗೌಡರಿಗೂ ಈ ಪ್ರಕರಣಕ್ಕೂ ಸಂಬಂಧವೇನು? ದಿನಾಲೂ ನಾವು ಯಾರು ಎಲ್ಲಿಗೆ ಹೋಗುತ್ತಾರೆಂದು ಕಾಯುತ್ತ ಕುಳಿತುಕೊಳ್ಳುವುದಕ್ಕಾಗುತ್ತಾ? ವಯಸ್ಸಿನಲ್ಲಿ ಬೆಳೆದಿರುವ ಮಕ್ಕಳು. ಹಲವಾರು ರೀತಿಯ ಅವರದ್ದೇ ಆದ ಸಮಸ್ಯೆಗಳಿರುತ್ತವೆ'' ಎಂದು ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ:ಪೆನ್​ಡ್ರೈವ್ ವಿಡಿಯೋ ಕೇಸ್, ಹೆಚ್​​​​ಡಿಕೆ ನಿಲುವೇ ನಮ್ಮ ನಿಲುವು: ಆರ್​.ಅಶೋಕ್ - R Ashok React

ABOUT THE AUTHOR

...view details