ಕರ್ನಾಟಕ

karnataka

ನ್ಯಾಯಾಧೀಶರ ವರ್ಗಾವಣೆ ಮಾಡದಂತೆ ಸಿಜೆಗೆ ಪತ್ರ: ಉದ್ಯಮಿ ಭರತ್ ವಿರುದ್ಧದ ನ್ಯಾಯಾಂಗ ನಿಂದನೆ ಆರೋಪ ಕೈಬಿಟ್ಟ ಹೈಕೋರ್ಟ್

By ETV Bharat Karnataka Team

Published : Feb 13, 2024, 7:13 AM IST

ಎಸ್ ಜೆ ಎಂ ವಿದ್ಯಾಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದ ಎಂ ಭರತ್ ವಿರುದ್ಧದ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಹೈಕೋರ್ಟ್ ಕೈಬಿಟ್ಟಿದೆ.

Etv Bharat
Etv Bharat

ಬೆಂಗಳೂರು: ಚಿತ್ರದುರ್ಗ ಮುರುಘಾ ಮಠದ ಅಧೀನದ ಎಸ್ ಜೆ ಎಂ ವಿದ್ಯಾಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರೂ ಆಗಿದ್ದ ಉದ್ಯಮಿ ಎಂ.ಭರತ್‌ ಕುಮಾರ್ ವಿರುದ್ಧದ ಕ್ರಿಮಿನಲ್ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಹೈಕೋರ್ಟ್‌ ಕೈಬಿಟ್ಟಿದೆ. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪಿ.ಎಸ್.ದಿನೇಶಕುಮಾರ್ ಮತ್ತು ಟಿ.ಜೆ.ಶಿವಶಂಕರೇಗೌಡ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.

ಸೋಮವಾರ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿದ್ದ ಭರತ್‌ ಕುಮಾರ್, ತಮ್ಮ ವಕೀಲ ಆರ್.ಸುಬ್ರಹ್ಮಣ್ಯ ಅವರ ಮುಖಾಂತರ ನ್ಯಾಯಪೀಠಕ್ಕೆ ಬೇಷರತ್‌ ಕ್ಷಮಾಪಣೆ ಪತ್ರ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆ ಕೈಬಿಟ್ಟಿರುವುದಾಗಿ ಆದೇಶಿಸಿತು.

ಪ್ರಕರಣವೇನು?ಪೋಕ್ಸೋ ಪ್ರಕರಣದ ಆರೋಪದಲ್ಲಿ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ಜೈಲು ಸೇರಿದ ನಂತರ ರಾಜ್ಯ ಸರ್ಕಾರ ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್.ವಸ್ತ್ರದ ಅವರನ್ನು 2022ರ ಡಿಸೆಂಬರ್ 13ರಂದು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಇದಕ್ಕೂ ಮುನ್ನ 2022ರ ಡಿಸೆಂಬರ್ 2ರಂದು ಎಸ್‌ಜೆಎಂ ವಿದ್ಯಾಪೀಠದ ಕಾರ್ಯ ನಿರ್ವಹಣಾಧಿಕಾರಿಯಾಗಿ ಎಂ.ಭರತ್‌ ಕುಮಾರ್ ಅವರನ್ನು ಶರಣರು ನೇಮಕ ಮಾಡಿದ್ದರು.

ಸರ್ಕಾರದ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಮಠದ ತಾತ್ಕಾಲಿಕ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಏತನ್ಮಧ್ಯೆ ವಸ್ತ್ರದ ಅವರು ಆರು ತಿಂಗಳ ಅವಧಿ ನಂತರ ಹುದ್ದೆಯಿಂದ ತೆರವಾಗಿದ್ದರು. ಈ ಕುರಿತ ಮೇಲ್ಮನವಿಯ ವಿಚಾರಣಾ ಅವಧಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠವು, ಮಠಕ್ಕೆ ತಾತ್ಕಾಲಿಕ ಆಡಳಿತಾಧಿಕಾರಿಯನ್ನಾಗಿ ಚಿತ್ರದುರ್ಗ ಜಿಲ್ಲಾ ಪ್ರಧಾನ ನ್ಯಾಯಾಧೀಶರನ್ನು ನೇಮಕ ಮಾಡಿ ಆದೇಶಿಸಿತ್ತು.

ಕಾನೂನು ಹೋರಾಟದ ಹಲವು ಬೆಳವಣಿಗೆಗಳ ನಡುವೆ ಚಿತ್ರದುರ್ಗ ಜಿಲ್ಲಾ ಪ್ರಧಾನ ನ್ಯಾಯಾಧೀಶರಾಗಿದ್ದ ಬಿ.ಎಸ್‌.ರೇಖಾ ಅವರನ್ನು ವರ್ಗಾವಣೆ ಮಾಡಿ ಹೈಕೋರ್ಟ್‌ ಆದೇಶಿಸಿತ್ತು. ಈ ವರ್ಗಾವಣೆಯನ್ನು ತಡೆಯಬೇಕು ಮತ್ತು ಮಠದ ಆಡಳಿತದ ಹಿತದೃಷ್ಟಿಯಿಂದ ಅವರನ್ನು ಇಲ್ಲಿಯೇ ಉಳಿಸಬೇಕು ಎಂದು ಕೋರಿ ಎಂ.ಭರತ್‌ ಕುಮಾರ್‌ 2023ರ ಡಿಸೆಂಬರ್ 15ರಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರವೊಂದನ್ನು ಬರೆದಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್ ರಿಜಿಸ್ಟ್ರಾರ್, ಭರತ್ ಕುಮಾರ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಂಡಿದ್ದರು. ಅಲ್ಲದೇ, ನ್ಯಾಯಾಧೀಶರ ವರ್ಗಾವಣೆ ಹೈಕೋರ್ಟ್ ಆಡಳಿತಕ್ಕೆ ಸಂಬಂಧಿಸಿದ್ದು, ಇಂತಹ ಸೂಕ್ಷ್ಮ ವಿಷಯದಲ್ಲಿ ಭರತ್‌ ಕುಮಾರ್ ಮೂಗು ತೂರಿಸಿದ್ದಾರೆ. ನ್ಯಾಯಾಂಗದ ಘನತೆಗೆ ಅಗೌರವ ತೋರಿದ್ದಾರೆ. ಸಂಸ್ಥೆಗೆ ಕೆಟ್ಟ ಹೆಸರು ತರಲು ಕಾರಣರಾಗಿದ್ದಾರೆ. ಇದು ಕ್ರಿಮಿನಲ್ ಅಪರಾಧ ಎಂದು ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ:ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿರುವಾಗ ಜೀವನಾಂಶ ನೀಡಲು ನಿರಾಕರಿಸುವಂತಿಲ್ಲ : ಹೈಕೋರ್ಟ್

ABOUT THE AUTHOR

...view details