ಕರ್ನಾಟಕ

karnataka

ತೆಂಗು ಬೆಳೆಗಾರರಿಗೆ ಗುಡ್ ನ್ಯೂಸ್‌ ನೀಡಿದ ಸರ್ಕಾರ: ಕೊಬ್ಬರಿ ಖರೀದಿಗೆ ನೋಂದಣಿ ಪ್ರಕ್ರಿಯೆ ಶುರು

By ETV Bharat Karnataka Team

Published : Feb 20, 2024, 10:38 PM IST

ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿ ಮತ್ತು ನೋಂದಣಿ ಪ್ರಾರಂಭವಾಗಲಿದೆ ಎಂದು ಸಚಿವ ಶಿವಾನಂದ ಎಸ್. ಪಾಟೀಲ್ ಅವರು ತೆಂಗು ಬೆಳಗಾರರಿಗೆ ಸಿಹಿ ನೀಡಿದ್ದಾರೆ. ​ ​

ಸರ್ಕಾರ
ಸರ್ಕಾರ

ಬೆಂಗಳೂರು :ರಾಜ್ಯ ತೆಂಗು ಬೆಳಗಾರರ ಹಿತದೃಷ್ಟಿಯಿಂದ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿ ಪ್ರಕ್ರಿಯೆಯನ್ನು ಬುಧವಾರದಿಂದ ಪುನಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮಂಗಳವಾರ ಸದಸ್ಯರಾದ ಕೆ.ಎ ತಿಪ್ಪೇಸ್ವಾಮಿ, ಟಿ.ಎ ಶರವಣ ಸೇರಿದಂತೆ ಇತರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅಕ್ರಮ ನೋಂದಣಿಗಳು ನಡೆದಿದ್ದವು. ಅನಧಿಕೃತ ಉಪಕರಣಗಳನ್ನು ಬಳಸಿ ರೈತರ ನೋಂದಣಿ ಮಾಡುವ ಮೂಲಕ ಅಕ್ರಮ ಎಸಗಿದ ಖರೀದಿ ಕೇಂದ್ರಗಳ 9 ಮಂದಿಯನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.

ನೋಂದಣಿ ಮಾಡಿಕೊಂಡಿರುವವರ ಪಟ್ಟಿ ಪುನರ್‌ ಪರಿಶೀಲಿಸಿದ್ದು, ರೈತರ ಹೆಸರಿನಲ್ಲಿ ವರ್ತಕರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂಬುದು ಪತ್ತೆಯಾಗಿದೆ. ಆದ್ದರಿಂದ ಅದನ್ನು ರದ್ದುಪಡಿಸಲಾಗಿದೆ. ಬುಧವಾರದಿಂದ ಕೊಬ್ಬರಿ ಖರೀದಿ ಮತ್ತು ನೋಂದಣಿ ಪ್ರಾರಂಭವಾಗಲಿದೆ. ಹಾಸನ ಜಿಲ್ಲೆಯಲ್ಲಿ ತೆಂಗು ಬೆಳೆ ವಿಸ್ತೀರ್ಣ ಮತ್ತು ಬೆಳೆಗಾರರ ಸಂಖ್ಯೆ ಕಡಿಮೆ ಇದ್ದರೂ, ಹೆಚ್ಚು ಮಂದಿ ಹೆಸರು ನೋಂದಾಯಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಜಾಸ್ತಿಯಿದ್ದರೂ, ಕಡಿಮೆ ರೈತರು ನೋಂದಾಯಿಸಿಕೊಂಡಿದ್ದಾರೆ. ಹಾಗಾಗಿ, ಅಕ್ರಮ ನೋಂದಣಿಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಶಿವಾನಂದ ಎಸ್.ಪಾಟೀಲ್ ಹೇಳಿದರು.

ಕೇಂದ್ರ ಸರ್ಕಾರ ಕಳೆದ ವರ್ಷ 7 ತಿಂಗಳ ಕಾಲ ಕೊಬ್ಬರಿ ಖರೀದಿಗೆ ಅವಕಾಶ ಮಾಡಿ ಕೊಟ್ಟಿತ್ತು. ಆದರೆ, ಈ ಬಾರಿ ಮೊದಲಿಗೆ ಮೂರು ತಿಂಗಳು, ಆನಂತರ ಮೂರು ತಿಂಗಳು ಖರೀದಿಸಲು ಸೂಚಿಸಿದೆ. ಉಂಡೆ ಕೊಬ್ಬರಿ ಜತೆಗೆ ಮಿಲ್ಲಿಂಗ್‌ ಕೊಬ್ಬರಿಯನ್ನೂ ಖರೀದಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ. ಹಾಗೆಯೇ, ಕೊಬ್ಬರಿ ಖರೀದಿ ಮಿತಿಯನ್ನು ಶೇ. 50ಕ್ಕೆ ಹೆಚ್ಚಿಸುವಂತೆಯೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಇದೇ ಕಳೆದ ವರ್ಷ ಕೊಬ್ಬರಿ ಖರೀದಿಯಿಂದ ನಾಫೆಡ್‌ ಸಂಸ್ಥೆಗೆ 200 ಕೋಟಿ ರೂ. ನಷ್ಟ ಉಂಟಾಗಿದೆ ಎಂಬ ಮಾಹಿತಿಯನ್ನು ಸಚಿವ ಶಿವಾನಂದ ಪಾಟೀಲ್ ನೀಡಿದರು.

ಇದನ್ನೂ ಓದಿ :ಕೊಬ್ಬರಿ ಖರೀದಿಗೆ ರೈತರ ನೋಂದಣಿ ಪ್ರಕ್ರಿಯೆ ಒಂದು ವಾರ ಸ್ಥಗಿತ: ಸಚಿವ ಶಿವಾನಂದ ಪಾಟೀಲ್

ABOUT THE AUTHOR

...view details