ಕರ್ನಾಟಕ

karnataka

ಕಾಪಿ ಹೊಡೆಯುವುದು ಮಹಾಪರಾಧವೇ?: ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಮಾಜಿ ಸಚಿವ ಎನ್​. ಮಹೇಶ್ ಆಕ್ಷೇಪ - CCTV IN EXAMINATION HALLS

By ETV Bharat Karnataka Team

Published : Mar 25, 2024, 6:12 PM IST

ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯುವ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿರುವುದಕ್ಕೆ ಮಾಜಿ ಶಿಕ್ಷಣ ಸಚಿವ ಎನ್.ಮಹೇಶ್ ಆಕ್ಷೇಪಿಸಿದ್ದಾರೆ.

ಮಾಜಿ ಸಚಿವ ಎನ್​. ಮಹೇಶ್
ಮಾಜಿ ಸಚಿವ ಎನ್​. ಮಹೇಶ್

ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದು ಮಹಾಪರಾಧವೇ?

ಚಾಮರಾಜನಗರ :ಇಂದಿನಿಂದ ರಾಜ್ಯಾದ್ಯಂತ ಎಸ್ಎಸ್​ಎಲ್​ಸಿ ಪರೀಕ್ಷೆ ಆರಂಭಗೊಂಡಿದ್ದು, ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿರುವುದಕ್ಕೆ ಮಾಜಿ ಶಿಕ್ಷಣ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗುಂಡ್ಲುಪೇಟೆ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಬಿಜೆಪಿ ಅಭ್ಯರ್ಥಿ ಬಾಲರಾಜು ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು​ ಮಾತನಾಡಿದರು. ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಸಿಸಿ ಕ್ಯಾಮರಾ ಕಣ್ಗಾವಲು ಏಕೆ?, ವಿದ್ಯಾರ್ಥಿಗಳೇನು ಕಳ್ಳರೇ? ಪರೀಕ್ಷೆ ಬರೆಯುವುದಕ್ಕೆ ಭಯ ಪಡಿಸುತ್ತಿದ್ದಾರೆ ಎಂದು ಹೇಳಿದರು.

15-16 ವರ್ಷದ ಮಕ್ಕಳು ಕಷ್ಟಪಟ್ಟು ಓದಿಕೊಂಡು ಬಂದಿರುತ್ತಾರೆ. ಆದರೆ ವಿದ್ಯಾರ್ಥಿಗಳಿಗೆ ಭಯದ ವಾತಾವರಣ ಸೃಷ್ಟಿ ಮಾಡಲಾಗಿದೆ. ಒಂದು ವೇಳೆ ಕಾಪಿ ಹೊಡೆದರೆ ಏನು ತಪ್ಪು? ಅದು ಮಹಾ ಅಪರಾಧವೇ ಎಂದು ಮಹೇಶ್​ ಪ್ರಶ್ನೆ ಮಾಡಿದರು. ನಾನು ಇನ್ನು ಒಂದು ವರ್ಷ ಶಿಕ್ಷಣ ಸಚಿವನಾಗಿದ್ದರೆ ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವ ತೆರೆದ ಪುಸ್ತಕ ಪರೀಕ್ಷೆ ನೀತಿಯನ್ನು ಜಾರಿಗೆ ತರುತ್ತಿದ್ದೆ. ಆಗ ಮಕ್ಕಳಿಗೆ ಹುಡುಕುವ ಸಾಮರ್ಥ್ಯ ಬೆಳೆಯುತ್ತಿತ್ತು. ಅವರು ಓದಿರುವುದು ಏನು ಎಂದು ಗೊತ್ತಿದ್ದರೆ ಬರೆಯುತ್ತಾರೆ. ಇಲ್ಲ ಎಂದರೆ ಎಲ್ಲಿ ಬರೆಯುತ್ತಾರೆ. ಅದಕ್ಕೆ ಸಿಸಿ ಕ್ಯಾಮರಾ ಬೇಕೇ ಎಂದು ಮಹೇಶ್​ ಪ್ರಶ್ನಿಸಿದರು.

ಇನ್ನು, ಬಿಜೆಪಿ ಅಭ್ಯರ್ಥಿ ಬಾಲರಾಜು ಮಾತನಾಡಿ, ಈ ದೇಶಕ್ಕೆ ನರೇಂದ್ರ ಮೋದಿಯವರು ಅನಿವಾರ್ಯ ಎಂಬುದು ಕಟ್ಟೆಕಡೆಯ ಗ್ರಾಮದ ವ್ಯಕ್ತಿಗೆ ಅರಿವಿದೆ. ನಾನು ಯಾವುದೇ ಊರಿಗೆ ಹೋದರು ಅಲ್ಲಿನ ಜನರು ಮೋದಿ ಬಗ್ಗೆ ಮಾತನಾಡುತ್ತಾರೆ. ಹೀಗಾಗಿ ಮೋದಿಯವರ ವರ್ಚಸ್ಸು ನಮ್ಮ ಗೆಲುವನ್ನು ಸುಲಭ ಮಾಡಿಕೊಟ್ಟಿದೆ ಎಂದರು.

ಬಿ.ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಸಂಘಟನೆ ಅತ್ಯುತ್ತಮವಾಗಿದೆ. 10 ವರ್ಷ ದುಡಿಸಿಕೊಂಡು ಕಾಂಗ್ರೆಸ್ ನನಗೆ ಅನ್ಯಾಯ ಮಾಡಿದೆ. ಮತ್ತೆ ನಾನು ಬಿಜೆಪಿಗೆ ಹಿಂತಿರುಗಿದಾಗ ಪಕ್ಷ ನನ್ನ ಕೈ ಹಿಡಿದಿದೆ. 20 ವರ್ಷಗಳಿಂದ ನನಗೆ ರಾಜಕೀಯ ಅವಕಾಶ ಸಿಕ್ಕಿಲ್ಲ. ಈ ಬಾರಿ ನನಗೆ ಒಂದು ಅವಕಾಶ ಕೊಡಿ, ನಿಮ್ಮ ಋಣ ತೀರಿಸುತ್ತೇನೆ ಎಂದು ಮನವಿ ಮಾಡಿದರು.

ಇದನ್ನೂ ಓದಿ :ರಂಜಾನ್ ತಿಂಗಳಲ್ಲಿ ಮೂವರನ್ನು ಬಲಿ ಕಾ ಬಕ್ರಾ ಮಾಡಲು ಬಿಜೆಪಿಯಲ್ಲಿ ಸಿದ್ಧತೆ: ಲಕ್ಷ್ಮಣ ಸವದಿ ಲೇವಡಿ - Lakshmana Savadi Displeasure

ABOUT THE AUTHOR

...view details