ಕರ್ನಾಟಕ

karnataka

ಮೈಸೂರು: ಆನೆ ದಾಳಿಗೆ ಅರಣ್ಯ ಇಲಾಖೆ ವೀಕ್ಷಕ ಬಲಿ

By ETV Bharat Karnataka Team

Published : Feb 8, 2024, 6:58 PM IST

ಅರಣ್ಯ ಇಲಾಖೆ ವೀಕ್ಷಕನ ಮೇಲೆ ಕಾಡಾನೆ ದಾಳಿ ನಡೆಸಿ ಬಲಿ ಪಡೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಆನೆ ದಾಳಿಗೆ ಅರಣ್ಯ ಇಲಾಖೆ ವೀಕ್ಷಕ ಬಲಿ
ಆನೆ ದಾಳಿಗೆ ಅರಣ್ಯ ಇಲಾಖೆ ವೀಕ್ಷಕ ಬಲಿ

ಮೈಸೂರು: ಕರ್ತವ್ಯಕ್ಕೆ ತೆರಳಿದ್ದ ಅರಣ್ಯ ಇಲಾಖೆಯ ವೀಕ್ಷಕನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸರಗೂರು ತಾಲೂಕಿನ ಕೆಬ್ಬೆಪುರ ಹಾಡಿಯ ಬಳಿ ನಡೆದಿದೆ.

ಬಂಡೀಪುರ ಅರಣ್ಯ ವ್ಯಾಪ್ತಿಯ ಮೊಳೆಯೂರು ವಿಭಾಗದ ಕೆಬ್ಬೆಪುರ ಹಾಡಿಯ ನಿವಾಸಿ ಹಾಗೂ ಅರಣ್ಯ ಇಲಾಖೆಯಲ್ಲಿ ವಾಚರ್​ ಆಗಿ ಸೇವೆ ಸಲ್ಲಿಸುತ್ತಿದ್ದ ಬಿ.ರಾಜು (38) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ರಾಜು ನಾಗರಹೊಳೆ ಅರಣ್ಯ ಪ್ರದೇಶದ ಉದ್ಬೂರು ಗೇಟ್​ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎಂದಿನಂತೆ ಇಂದು ಬೆಳಗ್ಗೆ ಕೆಲಸಕ್ಕೆ ಸಿದ್ಧರಾಗಿ ಬಸ್ ಹತ್ತಲು ಕೆಬ್ಬೆಪುರದ ಹಾಡಿಯಿಂದ ಮೊಳೆಯೂರಿಗೆ ನಡೆದುಕೊಂಡು ಬರುವ ವೇಳೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿ ರಾಜುರನ್ನು ಬಲಿ ಪಡೆದಿದೆ.

ಮೃತದೇಹ ರಸ್ತೆ ಪಕ್ಕದ ಹಳ್ಳವೊಂದರಲ್ಲಿ ಬಿದ್ದಿದ್ದ ಪರಿಣಾಮ ಮಧ್ಯಾಹ್ನದವರೆಗೂ ಯಾರಿಗೂ ಘಟನೆ ಬಗ್ಗೆ ತಿಳಿದು ಬಂದಿಲ್ಲ. ಈ ವೇಳೆ ರಾಜುವಿನ ಮಗಳು ಬಟ್ಟೆ ಒಗೆಯಲು ಹೋಗುವ ವೇಳೆ ತಂದೆಯ ಮೃತ ದೇಹವನ್ನು ಕಂಡು ಗಾಬರಿಗೊಂಡು ಗ್ರಾಮಸ್ಥರಿಗೆ ವಿಚಾರ ಮುಟ್ಟಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆ ವಿರುದ್ಧ ಆಕ್ರೋಶ:ಈ ಭಾಗದಲ್ಲಿ ನಿರಂತರವಾಗಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು, ಒಂದಲ್ಲ ಒಂದು ಪ್ರಾಣಿ ಜನರನ್ನು ಬಲಿಪಡೆಯುತ್ತಿವೆ. ಅಲ್ಲದೆ ಕಾಡಾನೆಯ ದಾಳಿಗಳನ್ನು ನಿಯಂತ್ರಿಸಲು ರೈಲ್ವೆಕಂಬಿ ಬ್ಯಾರಿಕೇಡ್ ಅಳವಡಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪರಿಣಾಮ ಕಾಡಾನೆಗಳ ದಾಳಿಗೆ ಜೀವಗಳು ಬಲಿಯಾಗುತ್ತಿವೆ.

ಕೂಡಲೇ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬರಬೇಕು, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡುವ ಜತೆಗೆ ಮೃತರ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು. ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಪಟ್ಟುಹಿಡಿದರು. ಘಟನೆ ನಡೆದು ಸಾಕಷ್ಟು ಸಮಯ ಕಳೆದರೂ ಸ್ಥಳಕ್ಕೆ ಆಗಮಿಸದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 5 ದಿನಗಳ ಹಿಂದಷ್ಟೇ ಆನೆ ತುಳಿತಕ್ಕೆ ವೃದ್ಧರೊಬ್ಬರು ಸಾವನ್ನಪ್ಪಿದ್ದ ಘಟನೆ ಹುಣಸೂರು ತಾಲೂಕಿನ ವೀರನಹೊಸಳ್ಳಿ ಬಳಿಯ ಮುದಗನೂರು ಗ್ರಾಮದ ಜಮೀನಿನ ಬಳಿ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮೈಸೂರಿನಲ್ಲಿ ಮತ್ತೆ ಕಾಡಾನೆ ದಾಳಿ ನಡೆದಿದೆ.

ಇದನ್ನೂ ಓದಿ:ರಾಮನಗರ: ಕಾಡಾನೆ ದಾಳಿಯಿಂದ ರೈತ ಸಾವು

ABOUT THE AUTHOR

...view details