ಕರ್ನಾಟಕ

karnataka

ಸಂಸತ್ತಿನಲ್ಲಿ ಕರ್ನಾಟಕದ ಮಹಿಳಾ ಧ್ವನಿ: 1950 ರಿಂದ ಇಲ್ಲಿವರೆಗೂ ಲೋಕಸಭೆಯಲ್ಲಿ ನಾರಿಯರ ಪ್ರಾತಿನಿಧ್ಯ​ ಹೀಗಿತ್ತು - Karnataka women MPS

By ETV Bharat Karnataka Team

Published : Apr 3, 2024, 12:32 PM IST

Updated : Apr 3, 2024, 5:37 PM IST

ಲೋಕಸಭೆ ಚುನಾವಣೆಗಳಲ್ಲಿ ಕರ್ನಾಟಕದಿಂದ ಆಯ್ಕೆಯಾದ ಮಹಿಳಾ ಅಭ್ಯರ್ಥಿಗಳು ಎಷ್ಟು, ಯಾವ ಕ್ಷೇತ್ರಗಳು ದೇಶದ ಗಮನ ಸೆಳೆದಿದ್ದವು ಎಂಬುದರ ಮಾಹಿತಿ ಇಲ್ಲಿದೆ.

ಸಂಸತ್ತಿನಲ್ಲಿ ಕರ್ನಾಟಕದ ಮಹಿಳಾ ಧ್ವನಿ
ಸಂಸತ್ತಿನಲ್ಲಿ ಕರ್ನಾಟಕದ ಮಹಿಳಾ ಧ್ವನಿ

ಹೈದರಾಬಾದ್​:ಕಳೆದ 17 ಲೋಕಸಭೆ ಚುನಾವಣೆಯಲ್ಲಿ (1952-2019) ಕರ್ನಾಟಕದಿಂದ 12 ಮಹಿಳಾ ಸಂಸದರು ಪೂರ್ಣಾವಧಿಗೆ ಆಯ್ಕೆಯಾಗಿದ್ದಾರೆ. ಜೊತೆಗೆ ಮೂವರು ಉಪಚುನಾವಣೆಗಳಲ್ಲಿ ಗೆದ್ದಿದ್ದಾರೆ. ಅಂದರೆ ಒಟ್ಟು 15 ಮಹಿಳಾ ಸಂಸದೆಯರು ದೆಹಲಿಯಲ್ಲಿ ಕರ್ನಾಟಕದ ಪರವಾಗಿ ಧ್ವನಿಯೆತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿದ್ದು, ಮತ್ತು ದೇಶದ ಗಮನ ಸೆಳೆದ ಚುನಾವಣೆ ಎಂದರೆ ಅದು 1978ರಲ್ಲಿ ನಡೆದ ಚಿಕ್ಕಮಗಳೂರು ಉಪ ಚುನಾವಣೆ. ಏಕೆಂದರೆ ಈ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ಇಂದಿರಾಗಾಂಧಿ. ಇಂದಿರಾಗೆ ರಾಜಕೀಯ ಮರು ಜನ್ಮ ನೀಡಿದ್ದು ಕರ್ನಾಟಕದ ಚಿಕ್ಕಮಗಳೂರು.

1956ರಲ್ಲಿ ಕರ್ನಾಟಕ ರಾಜ್ಯ ಏಕೀಕರಣವಾಗುವರೆಗೂ ಮೈಸೂರು ಪ್ರಾಂತ್ಯ ಎಂದು ಕರೆಯಲಾಗುತ್ತಿತ್ತು. ಮೈಸೂರು ಪ್ರಾಂತ್ಯದಿಂದ ಸಂಸದೆಯಾಗಿ ಆಯ್ಕೆಯಾದ ಮೊಟ್ಟ ಮೊದಲ ಎಂಪಿ ಎಂದರೆ ಅದು ಸರೋಜಿನಿ ಬಿಂದುರಾವ್​ ಮಹಿಷಿ. 1973 ರಲ್ಲಿ ಕರ್ನಾಟಕ ಎಂದು ನಾಮಕರಣವಾದ ಬಳಿಕವೂ ಸರೋಜಿನಿ ಮಹಿಷಿ ಅವರೇ ಏಕೈಕ ಮಹಿಳಾ ಸಂಸದೆಯಾಗಿದ್ದರು. ಇವರು ನಾಲ್ಕು ಬಾರಿ ರಾಜ್ಯದಿಂದ ಆಯ್ಕೆಯಾಗಿದ್ದಾರೆ.

ಕರ್ನಾಟಕದ ಜಿದ್ದಾಜಿದ್ದಿನ ಲೋಕಸಭೆ ಕದನವನ್ನೂ ಕಂಡಿದೆ. 1978 ರಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಲೋಕಸಭಾ ಉಪಸಮರದಲ್ಲಿ ಸ್ಪರ್ಧಿಸಿದಾಗ ವಿಶ್ವಮಟ್ಟದಲ್ಲಿ ಸದ್ದು ಮಾಡಿತ್ತು. ಇಂತದ್ದೇ ಸೌಂಡ್​ ಮಾಡಿದ್ದು 1999 ರಲ್ಲಿ ಸೋನಿಯಾ ಗಾಂಧಿ ಮತ್ತು ಸುಷ್ಮಾ ಸ್ವರಾಜ್​ ಅವರು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಾಗ.

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಬಳಿಕ ನಡೆದ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಪಾರಂಪರಿಕ ಉತ್ತರ ಪ್ರದೇಶದ ಲೋಕ ಕದನದಲ್ಲಿ ಸೋಲು ಕಂಡಿದ್ದರು. ಇದಾದ ಬಳಿಕ ಅವರು ಕರ್ನಾಟಕದಿಂದ ಸ್ಪರ್ಧಿಸಿ ರಾಜಕೀಯ ಪುನರ್ಜನ್ಮ ಪಡೆದಿದ್ದರು. ಇದಲ್ಲದೇ, 17 ಚುನಾವಣೆಗಳಲ್ಲಿ 1991ರಲ್ಲಿ ಮಾತ್ರ ಮೂವರು ಮಹಿಳೆಯರು ಏಕಕಾಲಕ್ಕೆ ಸಂಸತ್ತಿಗೆ ಆಯ್ಕೆಯಾಗಿದ್ದರು. ಬಳ್ಳಾರಿಯಿಂದ ಬಸವರಾಜೇಶ್ವರಿ, ಚಿಕ್ಕಮಗಳೂರಿನಿಂದ ಡಿ.ಕೆ. ತಾರಾದೇವಿ ಮತ್ತು ಮೈಸೂರಿನಿಂದ ಚಂದ್ರಪ್ರಭಾ ಅರಸ್ ಅವರು ಆಯ್ಕೆಯಾಗಿದ್ದರು.

ಪಕ್ಷವಾರು ಆಯ್ಕೆ:1962 ರಿಂದ 2019 ರ ನಡುವೆ ನಡೆದ 17 ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್​ನಿಂದ ಅತಿ ಹೆಚ್ಚು ಮಹಿಳೆಯರು ಸಂಸತ್ತಿಗೆ ಆಯ್ಕೆಯಾಗಿ ಹೋಗಿದ್ದಾರೆ. ಆ ಪಕ್ಷದಿಂದ 13 ಮಹಿಳಾ ಅಭ್ಯರ್ಥಿಗಳು ಗೆದ್ದಿದ್ದರೆ, ಬಿಜೆಪಿಯಿಂದ 4, ಜೆಡಿಯುನಿಂದ ಒಬ್ಬ ಮಹಿಳೆ ಗೆಲುವಿನ ನಗೆ ಬೀರಿದ್ದಾರೆ. ಒಬ್ಬರು ಪಕ್ಷೇತರರಾಗಿ ಆಯ್ಕೆ ಆಗಿದ್ದಾರೆ.

2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​, ಜೆಡಿಎಸ್​ - ಕಾಂಗ್ರೆಸ್​ನ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಅವರನ್ನು ಸೋಲಿಸಿ ಭರ್ಜರಿ ಗೆಲುವು ಸಾಧಿಸಿದ್ದರು.

ಉಪ ಚುನಾವಣಾ ಫಲಿತಾಂಶ:ಉಪ ಚುನಾವಣೆಗಳಲ್ಲೂ ಮಹಿಳೆಯರು ಗೆಲುವಿನ ನಗೆ ಬೀರಿದ್ದಾರೆ. ಮಂಗಳಾ ಅಂಗಡಿ, ನಟಿ ರಮ್ಯಾ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಜಯ ಕಂಡಿದ್ದಾರೆ. 1978 ರಲ್ಲಿ ಚಿಕ್ಕಮಗಳೂರು ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಗೆಲುವು ಸಾಧಿಸಿ ರಾಜಕೀಯ ಜೀವನದಲ್ಲಿ ತಿರುವು ಪಡೆದಿದ್ದರು. ಅವರ ಪ್ರತಿಸ್ಪರ್ಧಿ ಜನತಾ ಪಾರ್ಟಿ( ಜನತಾಪಕ್ಷ)ಯ ವೀರೇಂದ್ರ ಪಾಟೀಲ್ ವಿರುದ್ಧ 70 ಸಾವಿರ ಮತಗಳಿಂದ ಗೆದ್ದಿದ್ದರು.

2013ರಲ್ಲಿ ಮಂಡ್ಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ ನಟಿ ರಮ್ಯಾ(ದಿವ್ಯ ಸ್ಪಂದನ) ಅವರು ಗೆಲುವು ಸಾಧಿಸಿದ್ದರು. ಇದಾದ ಬಳಿಕ ಕೇಂದ್ರದ ಮಾಜಿ ಸಚಿವ ಸುರೇಶ್​ ಅಂಗಡಿ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ 2021 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಮಂಗಳಾ ಸುರೇಶ್​ ಅಂಗಡಿ ಅವರು ಸ್ಪರ್ಧಿಸಿದ್ದರು. ಕಾಂಗ್ರೆಸ್​ನ ಕಾರ್ಯಾಧ್ಯಕ್ಷರಾಗಿದ್ದ ಸತೀಶ್ ಜಾರಕಿಹೊಳಿ ಅವರನ್ನು 5,240 ಮತಗಳಿಂದ ಸೋಲಿಸಿದ್ದರು. ಸತೀಶ್​ ಜಾರಕಿಹೊಳಿ ಅವರ 30 ವರ್ಷಗಳ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಮಹಿಳಾ ಸಂಸದೆಯೊಬ್ಬರು ಸೋಲುಣಿಸಿದ್ದು ಇತಿಹಾಸವಾಗಿದೆ.

ಆಯ್ಕೆಯಾದ ಸಂಸದೆಯರ ಪಟ್ಟಿ ​ ಪಕ್ಷ ಕ್ಷೇತ್ರ
1 ಸರೋಜಿನಿ ಬಿಂದುರಾವ್​ ಮಹಿಷಿ ಕಾಂಗ್ರೆಸ್​ ಧಾರವಾಡ ಉತ್ತರ
2 ಬಸವರಾಜೇಶ್ವರಿ ಕಾಂಗ್ರೆಸ್​ ಬಳ್ಳಾರಿ
3 ಡಿ.ಕೆ. ತಾರಾದೇವಿ ​ ಕಾಂಗ್ರೆಸ್​ ಚಿಕ್ಕಮಗಳೂರು
4 ಚಂದ್ರಪ್ರಭಾ ಅರಸ್​​ ಕಾಂಗ್ರೆಸ್​ ಮೈಸೂರು
5 ರತ್ನಮಾಲಾ ಧಾರೇಶ್ವರ್​ ಸವಣೂರು ಜೆಡಿಯು ಚಿಕ್ಕೋಡಿ
6 ಸೋನಿಯಾ ಗಾಂಧಿ ಕಾಂಗ್ರೆಸ್​ ಬಳ್ಳಾರಿ
7 ಆಳ್ವಾ ಮಾರ್ಗರೇಟ್​ ಕಾಂಗ್ರೆಸ್​ ಕೆನರಾ(ಉತ್ತರ ಕನ್ನಡ)
8 ತೇಜಸ್ವಿನಿ ರಮೇಶ್​ ಕಾಂಗ್ರೆಸ್ ಕನಕಪುರ
9 ಮನೋರಮಾ ಮಧ್ವರಾಜ್​ ಬಿಜೆಪಿ ಉಡುಪಿ
10 ಜೆ.ಶಾಂತಾ ಬಿಜೆಪಿ ಬಳ್ಳಾರಿ
11 ಶೋಭಾ ಕರಂದ್ಲಾಜೆ ಬಿಜೆಪಿ ಉಡುಪಿ- ಚಿಕ್ಕಮಗಳೂರು
12 ಸುಮಲತಾ ಅಂಬರೀಶ್​ ಪಕ್ಷೇತರ ಮಂಡ್ಯ
ಉಪ ಚುನಾವಣೆಯಲ್ಲಿ ಗೆದ್ದವರು ಪಕ್ಷ ಕ್ಷೇತ್ರ
13 ಇಂದಿರಾ ಗಾಂಧಿ ಕಾಂಗ್ರೆಸ್​ ಚಿಕ್ಕಮಗಳೂರು
14 ರಮ್ಯಾ (ದಿವ್ಯ ಸ್ಪಂದನಾ) ಕಾಂಗ್ರೆಸ್​ ಮಂಡ್ಯ
15 ಮಂಗಳಾ ಅಂಗಡಿ ಬಿಜೆಪಿ ಬೆಳಗಾವಿ
  • 1962-2019ರವರೆಗೆ ಮಹಿಳಾ ಮತದಾರರು ಹಕ್ಕು ಚಲಾಯಿಸಿದ ವಿವರ ಹೀಗಿದೆ..
ವರ್ಷಒಟ್ಟು ಮಹಿಳಾ ಮತದಾರರುಹಕ್ಕು ಚಲಾಯಿಸಿದವರುಶೇಕಡಾವಾರು
1962 5513993 2854100 51.76
1967 6257870 3651098 58.34
1971 6598795 3478367 52.71
1977 8162610 4743376 58.11
1980 9606787 4957213 51.6
1984 10365763 6308129 60.86
1989 13968457 8954732 64.11
1991 14111120 6929185 49.1
1996 15662388 8694923 55.51
1998 16333323 9950823 60.92
1999 16836520 10942454 64.99
2004 18986838 11962519 63
2009 20474457 11592518 56.62
2014 22621081 14876307 65.76
2019 25248925 17080301 67.65
2024 - - -

ಇದನ್ನೂ ಓದಿ:ನಾಳೆನೇ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿದ್ರೆ ನಾನು ಚುನಾವಣೆಗೆ ನಿಲ್ಲುವುದಿಲ್ಲ: ಕೆ ಎಸ್​ ಈಶ್ವರಪ್ಪ - KS ESHWARAPPA

Last Updated : Apr 3, 2024, 5:37 PM IST

ABOUT THE AUTHOR

...view details