ಕರ್ನಾಟಕ

karnataka

'ದೆಹಲಿ ಚಲೋ'ಗೆ ತಡೆ: ಕೇಂದ್ರದ ವಿರುದ್ಧ ವಿವಿಧೆಡೆ ಬೀದಿಗಿಳಿದ ರೈತ, ಕಾರ್ಮಿಕ ಸಂಘಟನೆಗಳು

By ETV Bharat Karnataka Team

Published : Feb 16, 2024, 5:39 PM IST

ದೆಹಲಿ ಪ್ರತಿಭಟನೆಗೆ ರೈತರು ಹೋಗುವುದನ್ನು ತಡೆಯುತ್ತಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ರಾಜ್ಯದ ವಿವಿಧೆಡೆ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ರೈತ ಸಂಘಟನೆಗಳ ಪ್ರತಿಭಟನೆ
ರೈತ ಸಂಘಟನೆಗಳ ಪ್ರತಿಭಟನೆ

ದೆಹಲಿ ಚಲೋ ತಡೆ ವಿರೋಧಿಸಿ ರೈತ ಸಂಘಗಳಿಂದ ಪ್ರತಿಭಟನೆ

ಶಿವಮೊಗ್ಗ/ಬೆಳಗಾವಿ:ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ ವಿವಿಧ ರೈತ ಸಂಘಟನೆಗಳು ದೆಹಲಿ ಚಲೋ ನಡೆಸುತ್ತಿದ್ದು, ಇದರಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ರೈತರನ್ನು ತಡೆಯುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡಿಸಿ ಇಂದು ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯಿತು. ಶಿವಮೊಗ್ಗದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಪ್ರತಿಭಟಿಸಿದರು. ನಗರದ ಸೈನ್ಸ್ ಮೈದಾನದಿಂದ ಹೊರಟ ರೈತ ಸಂಘದ ಪ್ರತಿಭಟನಾ ಮೆರವಣಿಗೆ ಬಿ.ಹೆಚ್.ರಸ್ತೆ, ಶಿವಪ್ಪ‌ನಾಯಕ ವೃತ್ತ, ನೆಹರು ರಸ್ತೆ, ಟಿಎಸ್​ಬಿ ಶೀನಪ್ಪ ಶೆಟ್ಟಿ ವೃತ್ತದ ಮೂಲಕ, ಬಾಲರಾಜ್ ಅರಸ್ ರಸ್ತೆಯಿಂದ ಮಹಾವೀರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು.

ಕನಿಷ್ಠ ಬೆಂಬಲ ಬೆಲೆ, ವಿದ್ಯುತ್ ಖಾಸಗೀಕರಣಕ್ಕೆ ವಿರೋಧ, ಸಾಲ ಮನ್ನಾ, ಡಾ.ಸ್ವಾಮಿನಾಥನ್ ವರದಿ ಜಾರಿಗೆ ಅಗ್ರಹಿಸಿ ರೈತರು ದೆಹಲಿ ಚಲೋ ಹಮ್ಮಿಕೊಂಡಿದ್ದಾರೆ.‌ ಇದನ್ನು ತಡೆಯಲು ರೈತರ ಮೇಲೆ ಲಾಠಿ ಪ್ರಹಾರ, ರಬ್ಬರ್ ಬುಲೆಟ್, ರಾತ್ರಿ ರಸ್ತೆ ಮೇಲೆ ಮಲಗಿದ ರೈತರ ಮೇಲೊ ಆಶ್ರುವಾಯು ಸಿಡಿಸಿರುವುದು ಭಯಾನಕವಾಗಿದೆ. ಕೇಂದ್ರ ಸರ್ಕಾರ ತಕ್ಷಣ ರೈತರ‌ ಮೇಲಿನ‌ ದೌರ್ಜನ್ಯ ನಿಲ್ಲಿಸಿ ಮನವಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಈ ಪ್ರತಿಭಟನೆಗೆ ಸಿಐಟಿಯು ಬಿಸಿಯೂಟ ತಯಾರಕರು ಬೆಂಬಲ ನೀಡಿದರು.

ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, "ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ದೆಹಲಿಗೆ ಪ್ರತಿಭಟನೆ ನಡೆಸಲು ಹೊರಟ ರೈತರ ಮೇಲೆ ಆಶ್ರುವಾಯು ಸಿಡಿಸುತ್ತಿದೆ. ರಸ್ತೆಯಲ್ಲಿ ಸಿಮೆಂಟ್ ಬ್ಲಾಕ್​ಗಳನ್ನಿಟ್ಟು, ಬ್ಯಾರಿಕೇಡ್ ಹಾಕಿ ತಡೆಯಲು ಪ್ರಯತ್ನಿಸುತ್ತಿದೆ. ಇದು ಸರಿಯಲ್ಲ. ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕಿದೆ. ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೋ? ಬೇರೆ ಕಡೆ ಇದ್ದೇವೋ ತಿಳಿಯುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಕೇಂದ್ರದ ವಿರುದ್ಧ ರೈತರ ಪ್ರತಿಭಟನೆ

ಬೆಳಗಾವಿಯಲ್ಲಿ ಪ್ರತಿಭಟನೆ:ಕೇಂದ್ರ ಸರ್ಕಾರರೈತ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಕೇಂದ್ರದ ವಿರುದ್ಧ ಘೋಷಣೆ ಮೊಳಗಿಸಿದರು. ಜಿಲ್ಲೆಯ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಧರಣಿ ನಡೆಯಿತು.

ಇದನ್ನೂ ಓದಿ :ರೈತ ಮುಖಂಡರ ಜೊತೆ ಬಜೆಟ್ ಪೂರ್ವಭಾವಿ ಸಭೆ; ಸಾಲ ಮನ್ನಾ, ರೈತರ ಮದುವೆಯಾಗುವ ಹೆಣ್ಣಿಗೆ ಪ್ರೋತ್ಸಾಹ ಧನ ನೀಡಲು ಮನವಿ

ABOUT THE AUTHOR

...view details