ಕರ್ನಾಟಕ

karnataka

ನಾನು ಮಾಡಿದ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಕಾಂಗ್ರೆಸ್ ಅಭ್ಯರ್ಥಿಗೆ ಕಳಿಸಿಕೊಡುವೆ: ಪಿ.ಸಿ.ಗದ್ದಿಗೌಡರ - P C Gaddigoudar

By ETV Bharat Karnataka Team

Published : Apr 5, 2024, 5:56 PM IST

Updated : Apr 6, 2024, 12:50 PM IST

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಸಂಸದರಾಗಿ ನಾಲ್ಕು ಬಾರಿ ಆಯ್ಕೆಯಾಗಿರುವ ಪಿ.ಸಿ.ಗದ್ದಿಗೌಡರ 'ಈಟಿವಿ ಭಾರತ'ದ ವಿಶೇಷ ಸಂದರ್ಶನದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.

ಪಿಸಿ ಗದ್ದಿಗೌಡರ ವಿಶೇಷ ಸಂದರ್ಶನ
ಪಿಸಿ ಗದ್ದಿಗೌಡರ ವಿಶೇಷ ಸಂದರ್ಶನ

ಪಿಸಿ ಗದ್ದಿಗೌಡರ ವಿಶೇಷ ಸಂದರ್ಶನ

ಬಾಗಲಕೋಟೆ: ಈಗ ತಾನೇ ರಾಜಕೀಯಕ್ಕೆ ಬಂದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲರಿಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವರು ಎಲ್ಲವನ್ನೂ ತಿಳಿದುಕೊಂಡು ಮಾತನಾಡಬೇಕು. ನಾನು ಯಾವುದೇ ಜಾತಿ ಮತ್ತು ಭೇದ ಭಾವ ಮಾಡಲು ಹೋಗಲ್ಲ. ಜಾತಿ ಆಧಾರದ ಮೇಲೆ ಗೆಲ್ಲಲು ಸಾಧ್ಯವಿಲ್ಲ. ಪಕ್ಷದ ತತ್ವ, ಸಿದ್ಧಾಂತ ಹಾಗೂ ಪ್ರಧಾನ ಮಂತ್ರಿ ಮೋದಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಈ ಬಾರಿ ಮತ್ತೆ ನನಗೆ ಗೆಲುವು ತಂದುಕೊಡಲಿವೆ ಎಂದು ಪಿ.ಸಿ.ಗದ್ದಿಗೌಡರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಲ್ಕು ಬಾರಿ ಗೆದ್ದಿದ್ದೀರಿ, 5ನೇ ಬಾರಿಯ ಪ್ರಯತ್ನ ಹೇಗಿದೆ?:ಕ್ಷೇತ್ರದಲ್ಲಿ ಈಗಾಗಲೇ ನಮ್ಮ ಪ್ರಚಾರ ಕಾರ್ಯಕ್ರಮ ಆರಂಭವಾಗಿದೆ. ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಸ್ಥಳೀಯರನ್ನು ಭೇಟಿ ಮಾಡಿದ್ದೇನೆ. ಎಲ್ಲರೂ ಒಗ್ಗಟ್ಟಾಗಿ ಗೆಲ್ಲಿಸಿಕೊಂಡು ಬರುವ ಭರವಸೆ ನೀಡಿದ್ದಾರೆ. ತೇರದಾಳ, ಜಮಖಂಡಿ, ನರಗುಂದ ಈ ಮೂರು ಕ್ಷೇತ್ರದಲ್ಲಿನ ಎಲ್ಲ ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಹೋದೆಲ್ಲೆಲ್ಲ ಎಲ್ಲರೂ ಉತ್ಸುಕತೆ ತೋರ್ಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದಾರೆ. ಅವರ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ ಹಾಗೂ ದೃಢ ನಂಬಿಕೆ ನನ್ನನ್ನು ಗೆಲುವಿನ ದಡ ಸೇರಿಸಲಿದೆ.

4 ಬಾರಿ ಗೆದ್ದರೂ ಕ್ಷೇತ್ರ ಅಭಿವೃದ್ಧಿಯಾಗಿಲ್ಲ ಎಂಬ ಆರೋಪವಿದೆಯಲ್ಲ?:ಜಿಲ್ಲೆಗೆ ಏನು ಅಭಿವೃದ್ಧಿ ಮಾಡಬೇಕು, ಏನು ಮಾಡಿದ್ದೇನೆ ಅನ್ನೋದು ನನಗೆ ಗೊತ್ತಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಸಚಿವರು, ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಹತ್ತು ಹಲವು ಸುಧಾರಣಾ ಕಾರ್ಯಗಳನ್ನು ಮಾಡಿದ್ದೇನೆ. ಏನೆಲ್ಲ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ ಎಂಬುದರ ಕುರಿತು ನನ್ನದೊಂದು ಕೈಪಿಡಿ ಬಿಡುಗಡೆಯಾಗಿದೆ. ಆರೋಪ ಮಾಡಿದವರಿಗೆ ಆ ಪ್ರತಿಯನ್ನು ಕಳಿಸಿಕೊಡುವೆ. ಆ ಮೂಲಕ ಮಾಹಿತಿ ಪಡೆದುಕೊಳ್ಳಲಿ.

ಕಾಂಗ್ರೆಸ್​ ಅಭ್ಯರ್ಥಿ ಸಂಯುಕ್ತಾ ಪಾಟೀಲ್​ ಸ್ಪರ್ಧೆಯಿಂದ ನಿಮಗೆ ಅನುಕೂಲವಾಯಿತೇ?:ಈ ಲೋಕಸಭೆ ಕ್ಷೇತ್ರದಿಂದ ಜನರು ನನ್ನನ್ನು ನಾಲ್ಕು ಬಾರಿ ಗೆಲ್ಲಿಸಿಕೊಂಡು ಬಂದಿದ್ದಾರೆ. ಇದು ನನ್ನ ಐದನೇ ಸ್ಪರ್ಧೆ. ಈವರೆಗೂ ನಾನು ನನ್ನ ಪ್ರತಿಸ್ಪರ್ಧಿ ಬಗ್ಗೆ ಯಾವತ್ತೂ ಯೋಚನೆ ಮಾಡಿಲ್ಲ, ಮುಂದೆಯೂ ಯೋಚನೆ ಮಾಡುವುದಿಲ್ಲ. ನಾನು ಮಾಡಿದ ಕೆಲಸ ನನ್ನನ್ನು ಕೈಹಿಡಿಯುತ್ತಿದೆ. ಇದನ್ನಷ್ಟೇ ನಾನು ನಂಬಿದ್ದೇನೆ.

ನಿಮ್ಮ ಗೆಲುವು ಜಾತಿ ಆಧಾರದ ಮೇಲೆ ನಿಂತಿದೆ ಎಂಬ ವಿಶ್ಲೇಷಣೆಗೆ ಏನಂತೀರಿ?:ಅವರೆಲ್ಲರೂ ತಮಗೆ ತಿಳಿದಿರುವಂತಹ ವಿಚಾರಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ. ನಾನು ಮಾಡಿದ ಕೆಲಸ ಮತ್ತು ಕಾರ್ಯಗಳು, ಪಕ್ಷದ ಚುಟುವಟಿಕೆಯಿಂದ ನಾನು ಆಯ್ಕೆಯಾಗಿ ಬಂದಿರುವೆ. ಜನರು ನನ್ನ ಮೇಲೆ ಇಟ್ಟಿಕೊಂಡಿರುವ ನಂಬಿಕೆ ಮತ್ತು ವಿಶ್ವಾಸವೇ ನನ್ನ ಗೆಲುವಿಗೆ ಕಾರಣ. ಈ ಬಾರಿಯೂ ನೂರಕ್ಕೆ ನೂರರಷ್ಟು ಅದೇ ಆಗಲಿದೆ.

5ನೇ ಬಾರಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದೀರಿ, ನಿಮ್ಮ ಮೊದಲ ಆದ್ಯತೆ ಏನು?:ಈ ಬಗ್ಗೆ ಇಂದೇ ಹೇಳಲಾಗದು. ಅಗತ್ಯವೆನಿಸುವ ಅಭಿವೃದ್ಧಿ ಕೆಲಸಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು. ರಾಜ್ಯದಲ್ಲಿ ಯಾವುದೇ ಸರ್ಕಾರ ಇದ್ದರೂ ಒತ್ತಡ ಹೇರುವ ಮೂಲಕ ಅನುದಾನ ತಂದು ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಇಚ್ಛೆ ಇದೆ. ಅದು ಇಂತಹದ್ದೇ ಅಂತ ಈಗ ಹೇಳಲಾಗದು.

ಕಾಂಗ್ರೆಸ್​ ಭಿನ್ನಮತದ ಬಗ್ಗೆ ನಿಮ್ಮ ಅಭಿಪ್ರಾಯ, ಎಷ್ಟು ಅಂತರದಿಂದ ಗೆಲ್ಲುವ ವಿಶ್ವಾಸ ಇದೆ?:ನಾನು ಬೇರೆ ಪಕ್ಷದ ನಾಯಕರ ಬಗ್ಗೆ ಯೋಚನೆ ಮಾಡುವುದಿಲ್ಲ. ಇನ್ನು ನನ್ನ ಗೆಲವಿನ ಅಂತರ ನನ್ನ ಪಕ್ಷದ ಕಾರ್ಯಕರ್ತರ ಮೇಲೆ ನಿಂತಿದೆ. ಕ್ಷೇತ್ರದ ಜನ ಕೇಂದ್ರ ಸರ್ಕಾರದ ಕಾರ್ಯ ವೈಖರಿ, ಪ್ರಧಾನಿ ನರೇಂದ್ರ ಮೋದಿ ಅವರ ಶಿಸ್ತು ಮತ್ತು ಸಂಯಮವನ್ನು ಗುರುತಿಸಿದ್ದಾರೆ. ಮೋದಿ ಅವರ ಇಮೇಜ್​ ನನ್ನ ಗೆಲುವಿಗೆ ಸಹಕಾರಿಯಾಗಲಿದೆ. ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಇದೆ.

ಇದನ್ನೂ ಓದಿ:ಅಧಿಕೃತವಾಗಿ ಬಿಜೆಪಿ ಸೇರಿದ ಸಂಸದೆ ಸುಮಲತಾ ಅಂಬರೀಶ್ - MP Sumalata joined BJP

Last Updated :Apr 6, 2024, 12:50 PM IST

ABOUT THE AUTHOR

...view details