ಕರ್ನಾಟಕ

karnataka

ನಾಳೆ ಮಹತ್ವದ ಸುದ್ದಿಗೋಷ್ಟಿ ಕರೆದ ಸದಾನಂದ ಗೌಡ: ಮುಂದಿನ ರಾಜಕೀಯ ನಿರ್ಧಾರ ಪ್ರಕಟ?

By ETV Bharat Karnataka Team

Published : Mar 18, 2024, 2:08 PM IST

Updated : Mar 18, 2024, 2:53 PM IST

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಡಿ.ವಿ.ಸದಾನಂದ ಗೌಡ ನಾಳೆ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದು, ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿದೆ.

Etv Bharat
Etv Bharat

ಬೆಂಗಳೂರು: ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ನಾಳೆ ಮಹತ್ವದ ಸುದ್ದಿಗೋಷ್ಟಿ ಕರೆದಿದ್ದು, ತಮ್ಮ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಈಗಾಗಲೇ ಮತ್ತೋರ್ವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಮತ್ತೆ ಬಿಜೆಪಿಗೆ ವಾಪಸ್ಸಾಗಿರುವ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚಿಸಿಯೇ ಇದೀಗ ತಮ್ಮ ರಾಜಕೀಯ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ವಿಶೇಷವಾಗಿ ಕುಟುಂಬ ಸದಸ್ಯರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ.

ಸಂಜಯ್ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಕಾಂಗ್ರೆಸ್ ನಾಯಕರ ಸಂಪರ್ಕ ವಿಚಾರವನ್ನು ಒಪ್ಪಿಕೊಂಡರು. ನನ್ನನ್ನು ಬೇರೆಬೇರೆಯವರು ಬಂದು ಸಂಪರ್ಕ ಮಾಡುತ್ತಿರುವುದು ಸತ್ಯ. ನಿನ್ನೆ ನಮ್ಮ ಪಕ್ಷದ ಪ್ರಮುಖ ನಾಯಕರೊಬ್ಬರು ಬಂದು ಸಾಂತ್ವನ ಹೇಳಿದರು. ಬೇರೆ ಬೇರೆ ಸಂಗತಿಗಳು ನಡೆಯುತ್ತಿವೆ. ಇವತ್ತು ನನ್ನ ಜನ್ಮದಿನ, ಇಡೀ ದಿನ ಕುಟುಂಬದ ಸದಸ್ಯರ ಜೊತೆ ಕಳೆದು ನಂತರ ನಿಶ್ಚಯ ಮಾಡುತ್ತೇನೆ. ನನ್ನ ನಿರ್ಧಾರಗಳನ್ನು ನಾನು ನನ್ನ ಕುಟುಂಬದ ಸದಸ್ಯರ ಜೊತೆ ಚರ್ಚಿಸಬೇಕು. ನಂತರವೇ ನಿರ್ಧಾರಕ್ಕೆ ಬರಲಿದ್ದೇನೆ ಎಂದರು.

ಇದನ್ನೂ ಓದಿ: ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ: ಕೆ ಎಸ್ ಈಶ್ವರಪ್ಪ ಘೋಷಣೆ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಶೇ.100ರಷ್ಟು ನನ್ನ ಹೆಸರು ಮಾತ್ರ ಬಂದಿತ್ತು. ಆದರೆ ದೆಹಲಿಯಲ್ಲಿ, ಇಲ್ಲಿ ಒಂದಷ್ಟು ವಿದ್ಯಮಾನ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ನಿಮಗೆ ಟಿಕೆಟ್ ಅಂತ ಹೇಳಿ ಕೊನೆಯ ಕ್ಷಣದಲ್ಲಿ ನನ್ನ ರಕ್ಷಣೆಗೆ ಬರಲಿಲ್ಲ. ಕೆಲವೊಂದು ಮನದಾಳದ ವಿಚಾರಗಳನ್ನು ಹೇಳಿಕೊಳ್ಳಬೇಕಿದೆ. ಅದಕ್ಕಾಗಿ ನಾಳೆ ಸುದ್ದಿಗೋಷ್ಟಿ ಕರೆಯುತ್ತೇನೆ. ನಾಳೆ ಯಾವ ನಿರ್ಣಯ ಅಂತ ಈಗಲೇ ಹೇಳಿಬಿಟ್ಟರೆ ನಾಳೆಗೆ ಏನೂ ಉಳಿಯಲ್ಲ. ರಾಜಕೀಯದಲ್ಲಿ ಏರುಪೇರು, ಮುಜುಗರ ಸಹಜ. ಆದರೆ ತಿಳಿದೂ ತಿಳಿದೂ ಹೀಗೆ ಮಾಡಿರೋದು ಬೇಜಾರು ತಂದಿದೆ ಎಂದು ನಾಳಿನ ಸುದ್ದಿಗೋಷ್ಟಿಯ ಸಸ್ಪೆನ್ಸ್ ಉಳಿಸಿಕೊಂಡಿದ್ದಾರೆ.

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಬಂಡಾಯ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸದಾನಂದ ಗೌಡ, ನಾನು ಈಶ್ವರಪ್ಪ ಅವರನ್ನು ಭೇಟಿ ಮಾಡಿ ಮಾತಾಡಿದ್ದೇನೆ. ಯಾರೆಲ್ಲ ನಾವು ಮನಸಿಗೆ ನೋವಾದವರು, ಪಕ್ಷ ಕಟ್ಟಿದವರು ಇದ್ದೀವೋ ಅವರೆಲ್ಲ ಒಟ್ಟಿಗೆ ಹೋಗಿ ವರಿಷ್ಠರ ಜೊತೆ ಮಾತಾಡಿ ತೀರ್ಮಾನ ತೆಗೆದುಕೊಳ್ಳೋಣ ಅಂದಿದ್ದೆ. ಆದರೆ ಈಶ್ವರಪ್ಪ ಅವರು ಅವರದ್ದೇ ಆದ ನಿರ್ಣಯ ತೆಗೆದುಕೊಂಡಿದ್ದಾರೆ. ಅದರ ಬಗ್ಗೆ ನಾನು ಹೆಚ್ಚು ಮಾತಾಡಲ್ಲ. ನನ್ನ ಬಗ್ಗೆ ನಾನು ನಾಳೆ ಸುದ್ದಿಗೋಷ್ಟಿಯಲ್ಲಿ ವಿವರವಾಗಿ ಎಲ್ಲವನ್ನೂ ಹಂಚಿಕೊಳ್ಳುತ್ತೇನೆ ಎಂದರು.

ಸದಾನಂದಗೌಡರ ಹುಟ್ಟುಹಬ್ಬ

ಮನವೊಲಿಕೆ ಯತ್ನ:ಸದಾನಂದಗೌಡರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಡಿವಿಎಸ್ ನಿವಾಸಕ್ಕೆ ಭೇಟಿ ನೀಡಿ, ಶುಭ ಕೋರಿದರು. ನಂತರ ಗೌಡರ ನಿವಾಸದಲ್ಲಿ ಮೂವರೂ ನಾಯಕರು ಪ್ರತ್ಯೇಕವಾಗಿ ಸಭೆ ನಡೆಸಿ, ಟಿಕೆಟ್ ಕೈತಪ್ಪಿದ ಕುರಿತು ಚರ್ಚೆ ನಡೆಸಿದರು. ಆದರೆ, ಮನವೊಲಿಕೆ ಯತ್ನದ ಬಗ್ಗದ ಸದಾನಂದಗೌಡ ನಾಳೆ ಸುದ್ದಿಗೋಷ್ಟಿ ನಡೆಸುತ್ತೇನೆ ಎಲ್ಲ ಮಾಹಿತಿಯನ್ನು ಅಲ್ಲಿಯೇ ಬಹಿರಂಗಪಡಿಸುತ್ತೇನೆ ಎಂದಿದ್ದಾರೆ. ಟಿಕೆಟ್ ಮಿಸ್ ಹಾಗೂ ಕಾಂಗ್ರೆಸ್ ನಾಯಕರ ಸಂಪರ್ಕದ ಬಗ್ಗೆಯೂ ಸುದ್ದಿಗೋಷ್ಟಿಯಲ್ಲಿಯೇ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

ಆದರೂ, ಸದಾನಂದಗೌಡರ ಜೊತೆ ಚರ್ಚಿಸಿ, ಸಮಾಧಾನ ಮಾಡಲು ಬಿಜೆಪಿ ನಾಯಕರು ಯತ್ನ ನಡೆಸಿದರು. ಇದಕ್ಕೆ ಬಗ್ಗದ ಸದಾನಂದಗೌಡ, ಪರೋಕ್ಷವಾಗಿ ಪಕ್ಷದ ಹಿರಿಯ ನಾಯಕ ಯಡಿಯೂರಪ್ಪ ವಿರುದ್ದ ಅಕ್ರೋಶ ಹೊರಹಾಕಿದ್ದಾರೆ. ಶೋಭಾ ಕರಂದ್ಲಾಜೆಗೆ ಟಿಕೆಟ್ ಕೊಡಿಸಲು‌ ನನ್ನನ್ನು ಬಲಿಪಶು ಮಾಡಿದ್ದಾರೆ ಎಂದಿದ್ದಾರೆ. ಡಿವಿಎಸ್ ಮನವೊಲಿಕೆಗೆ ಬಗ್ಗದ ಕಾರಣ ನಾಯಕರು ನಿರಾಶರಾಗಿ ಮರಳಿದ್ದಾರೆ.

ಇದನ್ನೂ ಓದಿ: ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ವರಿಷ್ಠರಿಗೆ ತಿಳಿಸಿದ್ದೇನೆ : ಕೆ ಎಸ್ ಈಶ್ವರಪ್ಪ

Last Updated : Mar 18, 2024, 2:53 PM IST

ABOUT THE AUTHOR

...view details