ಕರ್ನಾಟಕ

karnataka

ಪಕ್ಷ ಸೇರ್ಪಡೆ ಚರ್ಚೆ ಬೆನ್ನಲ್ಲೇ ಡಾ. ಸಿ ಎನ್ ಮಂಜುನಾಥ್​ಗೆ ಬಿಜೆಪಿ ಟಿಕೆಟ್​

By ETV Bharat Karnataka Team

Published : Mar 14, 2024, 7:08 AM IST

Updated : Mar 14, 2024, 2:21 PM IST

ಜಯದೇವ ಹೃದ್ರೋಗ ಸಂಸ್ಥೆ ಮಾಜಿ ನಿರ್ದೇಶಕ ಡಾ. ಸಿ ಎನ್ ಮಂಜುನಾಥ್ ಬಿಜೆಪಿ ಹಿರಿಯ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ ಬೆನ್ನಲ್ಲೇ ಅವರಿಗೆ ಪಕ್ಷವು ಲೋಕಸಭೆ ಟಿಕೆಟ್​ ನೀಡಿದೆ.

ಡಾ.ಸಿಎನ್ ಮಂಜುನಾಥ್
ಡಾ.ಸಿಎನ್ ಮಂಜುನಾಥ್

ಬೆಂಗಳೂರು:ಲೋಕಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಮಾಜಿ ನಿರ್ದೇಶಕ ಡಾ. ಸಿ ಎನ್ ಮಂಜುನಾಥ್ ಅವರಿ​ಗೆ ಟಿಕೆಟ್ ಪ್ರಕಟಿಸಿದೆ.

ಡಿಸಿಎಂ ಡಿ ಕೆ ಶಿವಕುಮಾರ್ ಸಹೋದರ ಡಿ ಕೆ ಸುರೇಶ್ ಪ್ರತಿನಿಧಿಸುತ್ತಿರುವ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ ಗೆದ್ದಿದ್ಧ ಏಕೈಕ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಗೆಲ್ಲಲು ಹಲವು ಕಾರ್ಯತಂತ್ರದ ಕುರಿತು ಆಲೋಚನೆ ನಡೆಸಿದ ಬಿಜೆಪಿ ಪಕ್ಷ ಸೇರ್ಪಡೆಗೆ ಸಮ್ಮತಿ ಸೂಚಿಸಿರುವ ಮಂಜುನಾಥ್​ ಅವರಿಗೆ ಟಿಕೆಟ್​ ನೀಡಿದೆ.

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ.ಸಿ ಎನ್ ಮಂಜುನಾಥ್​ ಇತ್ತೀಚೆಗಷ್ಟೇ ಸೇವೆಯಿಂದ ನಿವೃತ್ತರಾಗಿದ್ದು, ರಾಜಕೀಯ ಕ್ಷೇತ್ರ ಪ್ರವೇಶದ ಅಪೇಕ್ಷೆ ವ್ಯಕ್ತಪಡಿಸಿದ್ದರು. ಜೆಡಿಎಸ್​ ವರಿಷ್ಠ ಹೆಚ್‌. ಡಿ. ದೇವೇಗೌಡರ ಅಳಿಯರಾಗಿರುವ ಮಂಜುನಾಥ್​ರನ್ನು ಸಂಪರ್ಕಿಸಿದ ಬಿಜೆಪಿ ನಾಯಕರು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಆಗುವಂತೆ ಮಾತುಕತೆ ನಡೆಸಿದರು. ಅವರು ಸಮ್ಮತಿ ನೀಡುತ್ತಿದ್ದಂತೆ ಹೈಕಮಾಂಡ್​ ನಾಯಕರ ಸಂಪರ್ಕ ಮಾಡಿ ಮೊದಲ ಪಟ್ಟಿಯಲ್ಲೇ ಅವರ ಹೆಸರು ಪ್ರಕಟಗೊಳ್ಳುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.

ಬಿಜೆಪಿ ಸೇರಲು ಒಪ್ಪಿಗೆ ನೀಡಿ, ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಆಗಲು ಸಮ್ಮತಿಸಿದ್ದರೂ ಡಾ. ಮಂಜುನಾಥ್​ ಇನ್ನೂ ಬಿಜೆಪಿ ಸೇರಿಲ್ಲ. ಹಾಗೆ ನೋಡಿದರೆ ಬಿಜೆಪಿಯ ವ್ಯಕ್ತಿಯೇ ಅಲ್ಲದವರಿಗೆ ಬಿಜೆಪಿ ಟಿಕೆಟ್ ನೀಡಿದೆ ಎನ್ನಬಹುದು. ಪಕ್ಷ ಸೇರ್ಪಡೆ ಕುರಿತು ಯಡಿಯೂರಪ್ಪ ಜೊತೆ ಚರ್ಚಿಸಿರುವ ಮಂಜುನಾಥ್​ ಶುಕ್ರವಾರ ಬಿಜೆಪಿ ಸೇರುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ನಿನ್ನೆ ಟಿಕೆಟ್ ಸಿಕ್ಕರೂ ಇನ್ನೆರಡು ದಿನದ ನಂತರ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷ ಸೇರಲಿದ್ದಾರೆ.

ಈ ಕುರಿತು ಸ್ವತಃ ಡಾ. ಸಿ ಎನ್ ಮಂಜುನಾಥ್ ಮಾತನಾಡಿದ್ದು, ನಾನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡುತ್ತಿದ್ದೇನೆ. ಆದರೆ ಇನ್ನೂ ಬಿಜೆಪಿ ಸೇರಿಲ್ಲ, ಇನ್ನೆರಡು ದಿನದಲ್ಲಿ ಪಕ್ಷ ಸೇರ್ಪಡೆ ಆಗಲಿದ್ದೇನೆ. ಅಧಿಕೃತವಾಗಿ ಬಿಜೆಪಿ ಸೇರದಿದ್ದರೂ ಬಿಜೆಪಿಯ ಜೊತೆಯಲ್ಲಿಯೇ ಇದ್ದೇನೆ ಎಂದಿದ್ಧಾರೆ.

ಪಕ್ಷದ ಹಿರಿಯ ನಾಯಕ ಯಡಿಯೂರಪ್ಪ ಕೂಡ ಮಂಜುನಾಥ್​ ಪಕ್ಷ ಸೇರ್ಪಡೆ ಕುರಿತು ಮಾಹಿತಿ ನೀಡಿದ್ದು, ಎರಡು ದಿನದಲ್ಲಿ ಡಾ. ಮಂಜುನಾಥ ಬಿಜೆಪಿ ಸೇರಲಿದ್ದಾರೆ. ಅವರು ಬಿಜೆಪಿಗೆ ಬರುತ್ತಿರುವುದರಿಂದ ಪಕ್ಷಕ್ಕೆ ಶಕ್ತಿ ಬರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷ ನಾಯಕ ಆರ್. ಅಶೋಕ್ ಕೂಡ ಮಂಜುನಾಥ್ ಬಿಜೆಪಿ ಸೇರ್ಪಡೆ ಕುರಿತು ಮಾತುಕತೆ ಆಗಿದೆ. ಅವರು ನಮ್ಮ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಲಿದ್ದಾರೆ. ಆದರೆ ಅವರ ಪಕ್ಷ ಸೇರ್ಪಡೆ ದಿನಾಂಕದ ಕುರಿತು ಪಕ್ಷದ ಕಚೇರಿಯಿಂದ ಮಾಹಿತಿ ಬರಲಿದೆ ಎಂದಿದ್ದಾರೆ.

ಒಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಮೊದಲು ಟಿಕೆಟ್ ಪಡೆದು ನಂತರ ಪಕ್ಷ ಸೇರುತ್ತಿದ್ದಾರೆ.

ಇದನ್ನೂ ಓದಿ:ಎಲ್ಲ ರೀತಿಯಲ್ಲೂ ಚುನಾವಣೆ ಎದುರಿಸಲು ಮಾನಸಿಕವಾಗಿ ಸಿದ್ದ: ಡಾ ಮಂಜುನಾಥ್

Last Updated : Mar 14, 2024, 2:21 PM IST

ABOUT THE AUTHOR

...view details