ಕರ್ನಾಟಕ

karnataka

ಬೆಂಗಳೂರಿನ ಜನತೆಗೆ ನೀರು ಪೂರೈಸುವುದು ಸರ್ಕಾರದ ಕರ್ತವ್ಯ, ಯಾರೂ ಗಾಬರಿಯಾಗಬೇಡಿ: ಡಿಸಿಎಂ

By ETV Bharat Karnataka Team

Published : Mar 4, 2024, 10:16 PM IST

ಕುಡಿವ ನೀರನ್ನು ಪೂರೈಕೆ ಮಾಡುವುದು ಸರ್ಕಾರದ ಜವಾಬ್ದಾರಿ. ಬೆಂಗಳೂರಿನ ಜನತೆ ಗಾಬರಿಯಾಗುವುದು ಬೇಡ. ಪ್ರತಿಯೊಬ್ಬರಿಗೂ ನೀರು ನೀಡುವುದು ನಮ್ಮ ಕರ್ತವ್ಯ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

Etv Bharat
Etv Bharat

ಬೆಂಗಳೂರು:ನಗರದ ಎಲ್ಲ ನೀರಿನ ಟ್ಯಾಂಕರ್ ಮಾಲೀಕರು ಮಾ.7ರ ವೇಳೆಗೆ ನೋಂದಣಿ ಮಾಡಿಸದಿದ್ದರೆ ಸೀಜ್ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು. ಕುಡಿಯುವ ನೀರಿನ ಸಮಸ್ಯೆ ವಿಚಾರವಾಗಿ ಬಿಬಿಎಂಪಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಲ್ಲಿ 3,500 ಟ್ಯಾಂಕರ್‌ಗಳು ಇದ್ದು, ಕೇವಲ 219 ಟ್ಯಾಂಕರ್‌ಗಳು ಮಾತ್ರ ನೋಂದಣಿ ಮಾಡಿಸಿಕೊಂಡಿವೆ. ಬಿಡಬ್ಲ್ಯೂಎಸ್​​ಎಸ್​​ಬಿ ಸಂಸ್ಥೆ 210 ಟ್ಯಾಂಕರ್‌ಗಳನ್ನು ಈಗಾಗಲೇ ನೀರಿನ ಪೂರೈಕೆಗೆ ಬಳಸುತ್ತಿದೆ ಎಂದು ಹೇಳಿದರು.

ನೀರು ಸರ್ಕಾರಕ್ಕೆ ಸೇರಿದ್ದು, ಯಾವುದೇ ವ್ಯಕ್ತಿಗೆ ಸೇರಿದ್ದಲ್ಲ. ಯಾವ ನೀರನ್ನು ಬೇಕಾದರೂ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಹಕ್ಕು ಸರ್ಕಾರಕ್ಕೆ ಇದೆ. ಬೆಂಗಳೂರು ಹೊರವಲಯದಲ್ಲಿ ಅಂತರ್ಜಲ ನೀರಿನ ಮಟ್ಟ ಹೆಚ್ಚಿರುವ ಕಡೆಯಿಂದಲೂ ನೀರಿನ ಪೂರೈಕೆ ಮಾಡಲು ಸಿದ್ಧರಾಗಿ ಇರಬೇಕು. ನೀರಿನ ಸಮಸ್ಯೆ ಬಗೆಹರಿಸಲು ಚುನಾವಣಾ ನೀತಿ ಸಂಹಿತೆ ಅಡ್ಡ ಬರುವುದಿಲ್ಲ ಎಂದು ಡಿಸಿಎಂ ಸ್ಪಷ್ಟಪಡಿಸಿದರು.

ಸಮಸ್ಯೆ ಬಗೆಹರಿಸಲು 556 ರೂಪಾಯಿ ಕೋಟಿ ಮೀಸಲು:ಬೆಂಗಳೂರು ನಗರದ ಎಲ್ಲ ಶಾಸಕರಿಗೆ ನೀರಿನ ಸಮಸ್ಯೆ ಬಗೆಹರಿಸಲು 10 ಕೋಟಿ ಅನುದಾನ ನೀಡಲಾಗಿದೆ. ಬಿಬಿಎಂಪಿಗೆ 148 ಕೋಟಿ, ಬಿಡಬ್ಲ್ಯೂಎಸ್‌ಎಸ್‌ಬಿಯಿಂದ 128 ಕೋಟಿ ಸೇರಿದಂತೆ ಒಟ್ಟು 556 ಕೋಟಿ ಹಣವನ್ನು ಕುಡಿಯುವ ನೀರಿನ ಪೂರೈಕೆಗೆ ಮೀಸಲಿಡಲಾಗಿದೆ ಎಂದು ಹೇಳಿದರು.

ಬಿಬಿಎಂಪಿ ಸಹಾಯವಾಣಿ:ನೀರಿನ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಸಹಾಯವಾಣಿ ಮತ್ತು ವಾರ್ಡ್ ವಾರು ದೂರು ಕೇಂದ್ರಗಳನ್ನು ತೆರೆಯಲಾಗುವುದು. ಸಮಸ್ಯೆ ಆಲಿಸಲು ವಾರ್ ರೂಂಗಳು ಕೆಲಸ ನಿರ್ವಹಿಸಲಿವೆ. ಹಿರಿಯ ಅಧಿಕಾರಿಗಳು ಸೇರಿದಂತೆ ನಾನು ಸಹ ಪದೇ ಪದೆ ಪರಿಶೀಲನೆ ನಡೆಸಲಿದ್ದೇನೆ. ಕುಡಿವ ನೀರನ್ನು ಪೂರೈಕೆ ಮಾಡುವುದು ಸರ್ಕಾರದ ಜವಾಬ್ದಾರಿ. ಬೆಂಗಳೂರಿನ ಜನತೆ ಗಾಬರಿಯಾಗುವುದು ಬೇಡ. ಪ್ರತಿಯೊಬ್ಬರಿಗೂ ನೀರು ನೀಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

ನಗರದಲ್ಲಿವೆ 15 ಸಾವಿರ ಕೊಳವೆ ಬಾವಿಗಳು:ಪ್ರಸ್ತುತ ನಗರದಲ್ಲಿ 15 ಸಾವಿರ ಕೊಳವೆ ಬಾವಿಗಳಿವೆ. ದಾಖಲೆಗಳ ಪ್ರಕಾರ 16,781 ಕೊಳವೆ ಬಾವಿಗಳಿವೆ. ಇದರಲ್ಲಿ 6,997 ಕೊಳವೆ ಬಾವಿಗಳು ಬತ್ತಿ ಹೋಗಿದ್ದು, 7,784 ಕೊಳವೆ ಬಾವಿಗಳು ಚಾಲ್ತಿಯಲ್ಲಿವೆ. ಹೊಸ ಕೊಳವೆ ಬಾವಿ ಕೊರೆಸಲು ಸ್ಥಳೀಯ ಗುತ್ತಿಗೆದಾರರು ಮತ್ತು ತಮಿಳುನಾಡಿನ ಕೊಳವೆಬಾವಿ ಕೊರೆಯುವವರ ನಡುವೆ ದರದ ವಿಚಾರವಾಗಿ ಒಂದಷ್ಟು ಗೊಂದಲಗಳಿದ್ದು, ಇದನ್ನು ಶೀಘ್ರ ಬಗೆಹರಿಸಲಾಗುವುದು ಎಂದರು.

ನೀರು ಪೂರೈಕೆಗೆ ಹಾಲಿನ ಟ್ಯಾಂಕರ್‌‌:ನಿರುಪಯುಕ್ತ ಹಾಲಿನ ಟ್ಯಾಂಕರ್​​ಗಳನ್ನು ನೀರು ಸರಬರಾಜಿಗೆ ಬಳಕೆ ಮಾಡಲು ಹೇಳಲಾಗಿದೆ. ಕೆಎಂಎಫ್ ವ್ಯಾಪ್ತಿಯ ಎಲ್ಲ ಘಟಕಗಳಿಂದ ಟ್ಯಾಂಕರ್‌ಗಳನ್ನು ತರಿಸಿ ಸ್ವಚ್ಛಗೊಳಿಸಿ ಬಳಸಬೇಕು. ಈ ಟ್ಯಾಂಕರ್​​ಗಳನ್ನು ನೀರಿನ ಸಮಸ್ಯೆ ಬಗೆಹರಿಯುವ ತನಕ ಬಳಸಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ಟ್ಯಾಂಕರ್ ದರ ನಿಗದಿ:ಈಗ ಟ್ಯಾಂಕರ್ ನೀರು ಪೂರೈಕೆಗೆ 500 ರಿಂದ 2 ಸಾವಿರದ ವರೆಗೂ ವಸೂಲಿ ಮಾಡುತ್ತಿದ್ದಾರೆ. ಈ ಗೊಂದಲವನ್ನು ಅಸೋಸಿಯೇಷನ್ ಬಳಿ ಮಾತನಾಡಿ ನೀರಿನ ದರವನ್ನು ಕಿಮೀಗೆ ಇಂತಿಷ್ಟು ಎಂದು ನಿಗದಿ ಮಾಡಲಾಗುವುದು. ಟ್ಯಾಂಕರ್ ನೀರು ಪೂರೈಕೆ ಮಾಲೀಕರ ಸಭೆಯನ್ನು ಮಾ.7 ರಂದು ನಿಗದಿ ಮಾಡಿದ್ದು, ಅಂದು ದರ ನಿಗದಿ ಮಾಡಲಾಗುವುದು ಎಂದು ಹೇಳಿದರು.

110 ಹಳ್ಳಿಗಳಿಗೆ ಮೇ ಅಂತ್ಯದ ವೇಳೆಗೆ ಕಾವೇರಿ ನೀರು:110 ಹಳ್ಳಿಗಳಿಗೆ ಮೇ ಅಂತ್ಯದ ವೇಳೆಗೆ ಕಾವೇರಿ ನೀರು ಪೂರೈಕೆ ಮಾಡಲಾಗುವುದು. ನಿಷ್ಕ್ರೀಯವಾಗಿರುವ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳು ಚಾಲನೆಯಾಗಬೇಕು. ಈ ಸಮಸ್ಯೆ ನಿವಾರಣೆಗೆ ಜವಾಬ್ದಾರಿಯುತ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ನೋಡಲ್ ಅಧಿಕಾರಿಗಳ ನಿಯೋಜನೆ:ಪಾಲಿಕೆಯ ಹೊರ ವಲಯ ವ್ಯಾಪ್ತಿಯ 35 ವಾರ್ಡ್​​ಗಳಲ್ಲಿ ಬರುವ 110 ಹಳ್ಳಿಗಳಲ್ಲಿನ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ ಪಾಲಿಕೆ ಕೇಂದ್ರ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಆಲಿಸುವ ಸಲುವಾಗಿ ಪ್ರತ್ಯೇಕವಾಗಿ ದಾಸರಹಳ್ಳಿಯ ಕಾರ್ಯಪಾಲಕ ಅಭಿಯಂತರರಾದ ಧರಣೇಂದ್ರ ಕುಮಾರ್ ಅವರನ್ನು ಮೇಲುಸ್ತುವಾರಿಯಾಗಿ ನೇಮಕ ಮಾಡಿ, ವಾರ್ಡ್​​ಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಬಿಬಿಎಂಪಿ ಆದೇಶಿಸಿದೆ. ಜೊತೆಗೆ ಈ ವಾರ್ಡ್​ಗಳಲ್ಲಿ ನೀರಿನ ಸಮಸ್ಯೆ ಕಂಡು ಬಂದರೆ ಸಹಾಯವಾಣಿ ಸಂಖ್ಯೆ 1533ಕ್ಕೆ ಕರೆ ಮಾಡುವಂತೆ ತಿಳಿಸಿದೆ. ಇನ್ನು ಬಿಬಿಎಂಪಿ ವ್ಯಾಪ್ತಿಯ ಇನ್ನುಳಿದ ವಾರ್ಡ್​ ಜನರು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯವಾಣಿ ಸಂಖ್ಯೆ 1916 ಗೆ ಕರೆ ಮಾಡುವಂತೆ ಕೋರಿದೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ತೀವ್ರ ಜಲಕ್ಷಾಮ : ಶುದ್ಧ ನೀರಿನ ಘಟಕಗಳಲ್ಲೂ ಸಾಲು ಸಾಲು ಜನರು

ABOUT THE AUTHOR

...view details