ಕರ್ನಾಟಕ

karnataka

ಇ-ಸ್ವತ್ತು ಸಮಸ್ಯೆ: ಕಂದಾಯ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ- ಪ್ರಿಯಾಂಕ್‌ ಖರ್ಗೆ

By ETV Bharat Karnataka Team

Published : Feb 14, 2024, 4:15 PM IST

ಇ-ಸ್ವತ್ತು ಸಮಸ್ಯೆಯನ್ನು ಕಂದಾಯ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಜೊತೆಗೂಡಿ ಚರ್ಚಿಸಿ ಬಗೆಹರಿಸುವುದಾಗಿ ಪ್ರಿಯಾಂಕ್​ ಖರ್ಗೆ ಭರವಸೆ ನೀಡಿದ್ದಾರೆ.

ಇ-ಸ್ವತ್ತು
discussion on E-Swathu

ಬೆಂಗಳೂರು: ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಇ-ಸ್ವತ್ತು ಸಮಸ್ಯೆ ಇರುವುದು ಸರಕಾರದ ಗಮನಕ್ಕೆ ಬಂದಿದೆ. ಕಂದಾಯ ಇಲಾಖೆಯ ಸಚಿವರ ಜೊತೆಗೂಡಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಒಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ವಿಧಾನಸಭೆಯಲ್ಲಿ ತಿಳಿಸಿದರು.

ಇಂದು ಪ್ರಶ್ನೋತ್ತರ ಕಲಾಪದ ವೇಳೆ ಚಿಕ್ಕಮಗಳೂರು ಶಾಸಕ ತಮ್ಮಯ್ಯ ಎಚ್‌.ಡಿ. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2,543 ಪ್ರಕರಣಗಳಿವೆ. ಕ್ಷೇತ್ರದ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಗ್ರಾ.ಪಂಚಾಯತ್ ಅಧ್ಯಕ್ಷ, ಗ್ರಾಮ ಠಾಣಾ ಮತ್ತು ಆಶ್ರಯ ಯೋಜನೆ ಎಂದು ಪಹಣಿಯಲ್ಲಿ ನಮೂದಾಗಿರುವುದು, ಇಲ್ಲಿ ಸಾರ್ವಜನಿಕರು ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ ಎಂದರು.

ಪ್ರಸ್ತುತ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿನ ಕ್ರಮಬದ್ಧ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9 ಮತ್ತು 11 ಎಯನ್ನು ಪಡೆಯಲು ಆಸ್ತಿಯ ಮಾಲೀಕರು ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದಲ್ಲಿ ಪಿಡಿಒ ಅವರು ಡಿಜಿಟಲ್‌ ಸಹಿಯ ಮೂಲಕ ನಮೂನೆ-09 ಮತ್ತು 11 ಎ ವಿತರಿಸುತ್ತಾರೆ. ಕ್ರಮಬದ್ಧವಲ್ಲದ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ನಮೂನೆ 11ಬಿಯನ್ನು ಪಡೆಯಲು ಆಸ್ತಿಯ ಮಾಲೀಕರು ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದಲ್ಲಿ ಪಿಡಿಒ ಅವರು ಡಿಜಿಟಲ್‌ ಸಹಿಯ ಮೂಲಕ ನಮೂನೆ 11ಬಿ ವಿತರಿಸುತ್ತಾರೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ವಿತರಿಸುವುದಕ್ಕೆ ವಿನಾಯಿತಿ ನೀಡಿ ನಮೂನೆ 11ಬಿಯನ್ನು ಕೈಬರಹದ ಮೂಲಕ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಸುಸಜ್ಜಿತ ಕ್ರೀಡಾ ಸಿಟಿ ನಿರ್ಮಾಣ:ಯಲಹಂಕ ತಾಲೂಕು ಹೆಸರಘಟ್ಟ ಹೋಬಳಿಯ ಮಾವಳ್ಳಿಪುರ ಬಳಿ 100 ಎಕರೆ ಪ್ರದೇಶದಲ್ಲಿ ಕ್ರೀಡಾಸಿಟಿಯನ್ನು (ಸ್ಪೋರ್ಟ್ಸ್‌ ಸಿಟಿ) ನಿರ್ಮಿಸಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಬಿ.ನಾಗೇಂದ್ರ ಅವರು, ಯಲಹಂಕ ಶಾಸಕ ಎಸ್.ಆರ್‌.ವಿಶ್ವನಾಥ ಪ್ರಶ್ನೆಗೆ ಉತ್ತರಿಸಿದರು. ಮಾವಳ್ಳಿಪುರ ಬಳಿ 60 ಎಕರೆ ಜಮೀನು ನೀಡಲು ಕಂದಾಯ ಇಲಾಖೆ ಒಪ್ಪಿಕೊಂಡಿದ್ದು ಇದರ ಜೊತೆಗೆ ಇನ್ನೂ ಹೆಚ್ಚುವರಿಯಾಗಿ 40 ಎಕರೆ ಜಾಗ ನೀಡುವಂತೆ ಕೇಳಿಕೊಳ್ಳಲಾಗಿದೆ.

ಅದನ್ನು ಪಡೆದುಕೊಂಡು ಸಂಪುಟ ಸಭೆ ಒಪ್ಪಿಗೆ ಪಡೆದುಕೊಂಡು ಸರಕಾರದಿಂದ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಯಾವುದಾದರೂ ಸರಿ, ಪ್ರದೇಶದಲ್ಲಿ ಸುಸಜ್ಜಿತವಾದ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಹಾಗೂ ಎಲ್ಲ ಕ್ರೀಡೆಗಳು ಒಂದೇ ವೇದಿಕೆಯಡಿ ಬರುವಂತಹ ಕ್ರೀಡಾ ಸಿಟಿ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು. ಕ್ರೀಡಾ ಸಿಟಿ ನಿರ್ಮಿಸಿದರೆ ನಿಮ್ಮನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಿಸುವುದಾಗಿ ಶಾಸಕ ವಿಶ್ವನಾಥ ಅವರು ಸಚಿವ ನಾಗೇಂದ್ರ ಅವರಿಗೆ ಹೇಳಿದರು. ಇದಕ್ಕೆ ಪ್ರತಿಯಾಗಿ ಸಚಿವ ನಾಗೇಂದ್ರ ಅವರು ಉದ್ಘಾಟನೆ ದಿನದಂದು ನಾವು ಕಬ್ಬಡ್ಡಿ ಆಡೋಣ ಎಂದರು. ಸದನ ನಗೆಗಡಲಲ್ಲಿ ತೇಲಿತು.

ಜಿಲ್ಲಾ, ತಾಲೂಕು ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಆದ್ಯತೆ: ಇಲಾಖೆಯ ವತಿಯಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸಲು ಆದ್ಯತೆ ನೀಡಲಾಗುವುದು ಎಂದು ಸಚಿವ ಬಿ.ನಾಗೇಂದ್ರ, ಆನೇಕಲ್‌ ಶಾಸಕ ಬಿ.ಶಿವಣ್ಣ ಅವರ ಪ್ರಶ್ನೆಗೆ ಉತ್ತರಿಸಿದರು.

ಸವಳು-ಜವಳು ಭೂಮಿ ಉಪಚರಿಸಲು ₹13 ಕೋಟಿ: ರಾಜ್ಯದಲ್ಲಿ ಸವಳು-ಜವಳು ಜಮೀನು 41816 ಹೆಕ್ಟೇರ್‌ ಇದ್ದು, ಈ ಭೂಮಿಯನ್ನು ಉಪಚರಿಸಲು ಮತ್ತು ಸುಧಾರಣಾ ಕ್ರಮಗಳಿಗಾಗಿ 13 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ ಎಂದು ಕೃಷಿ ಸಚಿವ ಎನ್‌.ಚೆಲುವರಾಯಸ್ವಾಮಿ ಅವರು, ಕಾಗವಾಡ ಕ್ಷೇತ್ರದ ಶಾಸಕ ಭರಮಗೌಡ ಆಲಗೌಡ ಕಾಗೆ ಅವರ ಪ್ರಶ್ನೆಗೆ ಉತ್ತರಿಸಿದರು. ಬೆಳಗಾವಿ ಜಿಲ್ಲೆಯಲ್ಲಿ ಅತಿಹೆಚ್ಚು ಸವಳು-ಜವಳು ಭೂಮಿ ಇದೆ. ಅದರಲ್ಲೂ ವಿಶೇಷವಾಗಿ ಕಾಗವಾಡ ಕ್ಷೇತ್ರವೊಂದರಲ್ಲಿಯೇ 1150 ಹೆಕ್ಟೇರ್‌ ಇದೆ. ಕಾಗವಾಡದಲ್ಲಿ ಸವಳು-ಜವಳು ಭೂಮಿ ಉಪಚರಿಸಲು 58ಲಕ್ಷ ರೂ. ಒದಗಿಸಲಾಗಿದ್ದು, ಕಾಗವಾಡಕ್ಕೆ ವಿಶೇಷ ಆದ್ಯತೆ ಮೇರೆಗೆ ಈಗ ನೀಡಿರುವ ಅನುದಾನದ ಒದಗಿಸುವ ಜೊತೆಗೆ ಹೆಚ್ಚುವರಿ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ:ವಿಶ್ವಕರ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ ಬೇಡಿಕೆ: ಒಂದು ವಾರ ಕಾಲಾವಕಾಶ ಪಡೆದ ಸಚಿವ ರಾಮಲಿಂಗಾರೆಡ್ಡಿ

ABOUT THE AUTHOR

...view details