ಕರ್ನಾಟಕ

karnataka

ನೈತಿಕ ಪೊಲೀಸ್ ಗಿರಿ ಪ್ರಕರಣಗಳಿಗೆ ಅವಕಾಶ ಕೊಡಬಾರದು: ಸಚಿವ ದಿನೇಶ್ ಗುಂಡೂರಾವ್

By ETV Bharat Karnataka Team

Published : Feb 10, 2024, 6:38 AM IST

ಕಾನೂನು ಕೈಗೆತ್ತಿಕೊಂಡರೆ ನಾವು ಸಹಿಸುವುದಿಲ್ಲ. ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಸಚಿವ ದಿನೇಶ್ ಗುಂಡೂರಾವ್
ಸಚಿವ ದಿನೇಶ್ ಗುಂಡೂರಾವ್

ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಪ್ರಕರಣಗಳಿಗೆ ಅವಕಾಶ ಕೊಡಬಾರದು. ಇದು ಜಿಲ್ಲೆಗೆ ಕಳಂಕವಾಗಿದ್ದು, ಹೊರಗಿನವರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಾರೆ. ಜಿಲ್ಲೆಯಲ್ಲಿ ಎಲ್ಲರೂ ಒಂದಾಗಿ ಬೆರೆತು, ಸುರಕ್ಷತೆಯ ವಾತಾವರಣ ಸೃಷ್ಟಿಯಾಗಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್, ಬಜರಂಗದಳದಂತಹ ಸಂಘಟನೆಗಳ ಪ್ರಚೋದನೆಯಿಂದ ಮತೀಯ ಗೂಂಡಾಗಿರಿ ಪ್ರಕರಣಗಳು ನಡೆಯುತ್ತಿವೆ. ಬಿಜೆಪಿಯ ಕೆಲ ನಾಯಕರಿಗೆ ಇದೇ ಬಂಡವಾಳವಾಗಿದೆ ಎಂದು ಆರೋಪಿಸಿದರು. ಜಿಲ್ಲೆಯಲ್ಲಿ ಸ್ಥಾಪಿಸಿರುವ ಆ್ಯಂಟಿ ಕಮ್ಯುನಲ್ ವಿಂಗ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗಷ್ಟೇ ನೈತಿಕ ಪೊಲೀಸ್ ಗಿರಿ ನಡೆಸಿದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಉಡುಪಿಯಲ್ಲಿ ನಕ್ಸಲ್ ಚಟುವಟಿಕೆ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲೂ ನಿಗಾವಹಿಸಲಾಗಿದೆ. ಪೊಲೀಸರಿಗೆ ಈ ಎಲ್ಲ ಚಟುವಟಿಕೆಗಳನ್ನು ನಿಯಂತ್ರಿಸುವ ಶಕ್ತಿ ಇದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಳಿ ಅಂಕಕ್ಕೆ ಸಂಬಂಧಿಸಿದಂತೆ ನನಗೆ ಯಾವುದೇ ದೂರುಗಳು ಬಂದಿಲ್ಲ. ಆಟ ಮತ್ತು ಜೂಜು ಹೀಗೆ ಎರಡು ಕಾರಣಕ್ಕೆ ಕೋಳಿ ಅಂಕಗಳು ನಡೆಯುತ್ತವೆ. ಆಟವನ್ನು ನಮ್ಮ ಕಲೆ, ಸಂಪ್ರದಾಯ ಎಂದು ಒಪ್ಪಿಕೊಳ್ಳಬಹುದು. ಕಂಬಳ, ಜಲ್ಲಿಕಟ್ಟು ಇಂತಹ ಕ್ರೀಡೆಗಳು ನಡೆಯುತ್ತವೆ. ಆದರೆ, ಜೂಜು ನಡೆಸಿದಾಗ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ದಿನೇಶ್ ಗುಂಡೂರಾವ್ ಉತ್ತರಿಸಿದರು.

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ನೀಡುವ ತೆರಿಗೆ ಮತ್ತಿತರ ಮೊತ್ತಗಳು ಹೆಚ್ಚಾಗಿದ್ದರೂ, ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ಅನುದಾನ 10 ವರ್ಷಗಳಿಂದ ಅಷ್ಟೇ ಇದೆ. ಬಿಜೆಪಿ ಸಂಸದರು ಕೂಡ ಈ ಬಗ್ಗೆ ಮಾತನಾಡದಿರುವುದು ದುರ್ದೈವದ ಸಂಗತಿ ಎಂದು ದಿನೇಶ್ ಗುಂಡೂರಾವ್ ಬೇಸರ ವ್ಯಕ್ತಪಡಿಸಿದರು.

ಬಿಜೆಪಿಯವರು ವಿರೋಧ ಪಕ್ಷ ರಹಿತ ದೇಶ ಮಾಡಲು ಹೊರಟಿದ್ದಾರೆ. ಭಯಭೀತಿಯ ವಾತಾವರಣ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಹಿತವಾದ ಬೆಳವಣಿಗೆ ಅಲ್ಲ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳು ಧರ್ಮದ ಮಾತಿನ ಅಡಿ ಬಿದ್ದಿವೆ. ಪ್ರಧಾನಿ ಮೋದಿ ಕೂಡ ಕಾಂಗ್ರೆಸ್, ನೆಹರೂ ಬೈದಿದ್ದು ಬಿಟ್ಟರೆ ಬೇರೇನಾದರೂ ಮಾತನಾಡುತ್ತಾರಾ? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.

ಶೇ 40ರಷ್ಟು ಕಮಿಷನ್ ಆರೋಪ ಮಾಡಿರುವ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಅವರು ವಿಷಯ ನಿಜವೇ ಆಗಿದ್ದರೆ, ನೇರವಾಗಿ ಬಂದು ಮುಖ್ಯಮಂತ್ರಿಗಳಿಗೆ ಹೇಳಬಹುದು. ನಮ್ಮ ಸರ್ಕಾರ ಬದ್ಧತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದೆ. ನನ್ನ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ಆಗಿದ್ದರೆ, ನಾನು ತನಿಖೆ ಮಾಡಿಸುತ್ತೇನೆ. ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿದ್ದರೂ ದಾಖಲೆ ನೀಡಲಿ. ಹಿಂದಿನ ಬಿಜೆಪಿ ಸರ್ಕಾರದ ಇದ್ದಾಗ ಅವರು ಭ್ರಷ್ಟಾಚಾರದ ಬಗ್ಗೆ ಅನೇಕ ವಿಷಯಗಳನ್ನು ಪ್ರಸ್ತಾಪ ಮಾಡಿದ್ದರು. ಈ ಆರೋಪದ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಭ್ರಷ್ಟಾಚಾರವನ್ನು ಸಹಿಸಿಕೊಳ್ಳಲಾಗದು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಇದನ್ನೂ ಓದಿ :​ಈಶ್ವರಪ್ಪ ವಿರುದ್ಧ ಎಫ್ಐಆರ್​ ದಾಖಲಾಗಿದೆ, ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಾರೆ: ಸಚಿವ ಪರಮೇಶ್ವರ್​

ABOUT THE AUTHOR

...view details