ಕರ್ನಾಟಕ

karnataka

ಜೆಡಿಎಸ್ ಪಕ್ಷ ಇದ್ದರೂ ಗೌಡರ ಅಳಿಯನನ್ನು ದಳದಿಂದ ಯಾಕೆ ನಿಲ್ಲಿಸಲಿಲ್ಲ, ಆ ಪಕ್ಷಕ್ಕೆ ಶಕ್ತಿ ಇಲ್ಲವೇ?: ಡಿ.ಕೆ. ಶಿವಕುಮಾರ್ - D K Shivakumar

By ETV Bharat Karnataka Team

Published : Apr 21, 2024, 11:05 PM IST

ಸುರೇಶ್ ಪಂಚಾಯಿತಿ ಸದಸ್ಯನಂತೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ಆದರೆ ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ರಾಮನಗರ, ಮಾಗಡಿ ಭಾಗದ ಬಡವರಿಗಾಗಿ ಏನಾದರೂ ಮಾಡಿದ್ದಾರಾ? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಪ್ರಶ್ನಿಸಿದ್ದಾರೆ.

ಜೆಡಿಎಸ್ ಪಕ್ಷ ಇದ್ದರೂ ಗೌಡರ ಅಳಿಯನನ್ನು ದಳದಿಂದ ಯಾಕೆ ನಿಲ್ಲಿಸಲಿಲ್ಲ, ಆ ಪಕ್ಷಕ್ಕೆ ಶಕ್ತಿ ಇಲ್ಲವೇ?: ಡಿ.ಕೆ. ಶಿವಕುಮಾರ್
ಜೆಡಿಎಸ್ ಪಕ್ಷ ಇದ್ದರೂ ಗೌಡರ ಅಳಿಯನನ್ನು ದಳದಿಂದ ಯಾಕೆ ನಿಲ್ಲಿಸಲಿಲ್ಲ, ಆ ಪಕ್ಷಕ್ಕೆ ಶಕ್ತಿ ಇಲ್ಲವೇ?: ಡಿ.ಕೆ. ಶಿವಕುಮಾರ್

ಡಿ.ಕೆ. ಶಿವಕುಮಾರ್

ರಾಮನಗರ: ಈ ಕ್ಷೇತ್ರದಲ್ಲಿ ಕುಮಾರಸ್ವಾಮಿ, ದೇವೇಗೌಡರು ಸಂಸದರಾಗಿದ್ದರು. ಸುರೇಶ್ ಪ್ರತಿ ಪಂಚಾಯಿತಿಗೆ ಭೇಟಿ ನೀಡಿ ಪಂಚಾಯಿತಿ ಸದಸ್ಯನಂತೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ಆದರೆ ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ರಾಮನಗರ, ಮಾಗಡಿ ಭಾಗದ ಬಡವರಿಗಾಗಿ ಏನಾದರೂ ಮಾಡಿದ್ದಾರಾ?. ಬಡವರಿಗೆ ನಿವೇಶನ ಹಂಚಿದ್ದಾರಾ?. ಕುಡಿಯುವ ನೀರನ್ನು ಕೊಟ್ಟಿದ್ದಾರಾ? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ಮಾಗಡಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಸಂಸದರಾಗಿದ್ದಾರೆ, 2 ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅವರ ತಂದೆ ಒಮ್ಮೆ ಮುಖ್ಯಮಂತ್ರಿ, ಒಮ್ಮೆ ಪ್ರಧಾನಿಯಾಗಿದ್ದಾರೆ. ಈ ಭಾಗದ ಜನ ದೇವೇಗೌಡರು, ಅವರ ಮಗ ಹಾಗೂ ಸೊಸೆಗೆ ಅಧಿಕಾರ ಕೊಟ್ಟಿದ್ದಾರೆ. ಈಗ ಅಳಿಯನನ್ನು ಕರೆದುಕೊಂಡು ಬಂದಿದ್ದಾರೆ. ಜೆಡಿಎಸ್ ಪಕ್ಷ ಇದ್ದರೂ ಗೌಡರ ಅಳಿಯನನ್ನು ದಳದಿಂದ ಯಾಕೆ ನಿಲ್ಲಿಸಲಿಲ್ಲ. ಅವರ ಪಕ್ಷ ಹಾಗೂ ಚಿಹ್ನೆಗೆ ಶಕ್ತಿ ಇಲ್ಲವೇ?. ಇನ್ನು ಕುಮಾರಸ್ವಾಮಿ ಇಲ್ಲಿನ ಜನರನ್ನು ಬಿಟ್ಟು ಮಂಡ್ಯದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ‌ ಎಂದು ಹೇಳಿದರು.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜಾತ್ಯತೀತ ತತ್ವದ ಮೇಲೆ ನಾವು ಜೆಡಿಎಸ್ ಪಕ್ಷಕ್ಕೆ ಬೇಷರತ್ ಬೆಂಬಲ ನೀಡಿ ಎಲ್ಲರ ವಿರೋಧದ ನಡುವೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಆದರೆ ಅದನ್ನು ಉಳಿಸಿಕೊಳ್ಳಲು ಕುಮಾರಸ್ವಾಮಿ ಅವರಿಂದ ಸಾಧ್ಯವಾಗಲಿಲ್ಲ. ಕುಮಾರಸ್ವಾಮಿ ಅವರು ತಮ್ಮ ಬೆನ್ನಿಗೆ ಚೂರಿ ಹಾಕಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಿಜೆಪಿ ನಾಯಕರನ್ನು ಕರೆದುಕೊಂಡು ನಮ್ಮ ಆದಿ ಚುಂಚನಗಿರಿ ಮಠಕ್ಕೆ ಕರೆದುಕೊಂಡು ಹೋಗಿದ್ದಾರೆ. ನಾನು ವಿಷ ಹಾಕಿದೆ ಎಂದು ಹೇಳುತ್ತಿದ್ದಾರೆ. ನಾನು ಯಾವ ರೀತಿ ವಿಷ ಹಾಕಿದೆ ಎಂದು ಅವರು ಹೇಳಬೇಕಲ್ಲವೇ? ಎಂದು ಪ್ರಶ್ನಿಸಿದರು.

ಸುರೇಶ್ ಅವರು ಸಂಸದರಾಗಿದ್ದಾಗ, ನಾನು ಇಂಧನ ಸಚಿವರಾಗಿದ್ದಾಗ ಇಲ್ಲಿ ಶಾಸಕರಿಲ್ಲದಿದ್ದರೂ ಪ್ರತಿ ಇಬ್ಬರು ರೈತರನ್ನು ಸೇರಿಸಿ ಒಂದೊಂದು ಟ್ರಾನ್ಸ್ ಫಾರ್ಮರ್​ ಅನ್ನು ಉಚಿತವಾಗಿ ಹಾಕಿಸಬೇಕು ಎಂದು ಕೇಳಿದರು. ನಾನು ಇಲ್ಲಿನ ರೈತರಿಗೆ ಈ ಸೌಲಭ್ಯ ಕಲ್ಪಿಸಿದ್ದೇವೆ. ಅದರಿಂದ ನಿಮಗೆ ಪ್ರಯೋಜನ ಆಗಿದೆಯಲ್ಲವೇ?. ನೀವು ನಮಗೆ ಅಧಿಕಾರ ನೀಡುವುದೇ ನಿಮಗೆ ಅನುಕೂಲವಾಗಲಿ, ಒಳ್ಳೆಯದಾಗಲಿ ಎಂದು. ಇಲ್ಲಿ ಹಾಲು ಉತ್ಪಾದಕರಿದ್ದೀರಿ. ನಮ್ಮ ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಹೆಚ್ಚಳ ಮಾಡಲಿಲ್ಲವೇ ಎಂದು ಕೇಳಿದರು.

ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು. ನಿಮ್ಮಲ್ಲಿ ಯಾರಿಗಾದರೂ ಆ ಹಣ ಬಂತೇ? ವರ್ಷಕ್ಕೆ 22 ಕೋಟಿ ಉದ್ಯೋಗ ನೀಡುತ್ತೇವೆ ಎಂದರು. ನಿಮಗೆ ಉದ್ಯೋಗ ಕೊಟ್ಟರಾ?. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು. ನಿಮ್ಮ ಆದಾಯ ಡಬಲ್ ಆಯಿತಾ?. ನಮ್ಮ ಪಕ್ಷ ಕಳೆದ ಚುನಾವಣೆಗೂ ಮುನ್ನ ಐದು ಗ್ಯಾರಂಟಿ ಯೋಜನೆ ಪ್ರಕಟಿಸಿತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ಕೊಟ್ಟ ಮಾತಿನಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಅನುಮೋದನೆ ಕೊಟ್ಟೆವು. ಆ ಮೂಲಕ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ ಸೇವೆ ನೀಡಿದ್ದೇವೆ ಎಂದರು.

ಕೋವಿಡ್ ಸಂದರ್ಭದಲ್ಲಿ ಸುರೇಶ್ ಅವರು ಮನೆ ಮನೆಗೆ ಫುಡ್ ಕಿಟ್, ಔಷಧಿ, ತರಕಾರಿ ಹಂಚಿದರು. ಕೊನೆಗೆ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡಿದರು. ಕುಮಾರಸ್ವಾಮಿ ಎಂದಾದರೂ ಮನೆಯಿಂದ ಆಚೆ ಬಂದಿದ್ದಾರಾ?. ಮತ್ತೆ ಯಾವ ಕಾರಣಕ್ಕೆ ಅವರು ಬಂದು ಮತ ಕೇಳುತ್ತಿದ್ದಾರೆ?. ಜನಪ್ರತಿನಿಧಿಯಾದವರು ಜನರ ಕಷ್ಟಕ್ಕೆ ಆಗದಿದ್ದರೆ, ಆತ ಮತ್ತೆ ಯಾವ ಕಾರಣಕ್ಕೆ ಜನಪ್ರತಿನಿಧಿಯಾಗಬೇಕು? ಎಂದು ಪ್ರಶ್ನಿಸಿದ ಅವರು, ಈ ಭಾಗದ ಜನರು 3 ಲಕ್ಷ ಮತಗಳ ಅಂತರದಲ್ಲಿ ಡಿ.ಕೆ. ಸುರೇಶ್ ಅವರನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಒಂದು ದೇಶ, ಒಂದು ಚುನಾವಣೆ ಮೂಲಕ ಬಿಜೆಪಿ "ನೋ ಚುನಾವಣೆ" ಮಾಡಲು ಹೊರಟಿದೆ: ವೀರಪ್ಪ ಮೊಯ್ಲಿ - Veerappa Moily

ABOUT THE AUTHOR

...view details