ಕರ್ನಾಟಕ

karnataka

ಸಂಸದ ಜಿ.ಎಂ ಸಿದ್ದೇಶ್ವರ್​ಗೆ ಟಿಕೆಟ್ ನೀಡಬೇಡಿ: ಬಿಎಸ್​ವೈ, ವಿಜಯೇಂದ್ರಗೆ ಮನವಿ ಸಲ್ಲಿಸಿದ ದಾವಣಗೆರೆ ಬಿಜೆಪಿ ನಿಯೋಗ

By ETV Bharat Karnataka Team

Published : Jan 26, 2024, 8:14 PM IST

ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ದಾವಣಗೆರೆ ಬಿಜೆಪಿ ನಿಯೋಗ ಪ್ರತ್ಯೇಕವಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದೆ.

ದಾವಣಗೆರೆ ಬಿಜೆಪಿ ನಿಯೋಗ
ದಾವಣಗೆರೆ ಬಿಜೆಪಿ ನಿಯೋಗ

ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಹೇಳಿಕೆ

ಬೆಂಗಳೂರು : ದಾವಣಗೆರೆ ಲೋಕಸಭಾ ಕ್ಷೇತ್ರದ ಹಾಲಿ ಸದಸ್ಯ ಜಿ.ಎಂ ಸಿದ್ದೇಶ್ವರ್​ಗೆ ಈ ಬಾರಿ ಟಿಕೆಟ್ ನೀಡಬಾರದು ಎಂದು ಜಿಲ್ಲಾ ಮುಖಂಡರ ನಿಯೋಗ ಇಂದು ಪಕ್ಷದ ಪ್ರಮುಖರಿಗೆ ಮನವಿ ಸಲ್ಲಿಸಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಪ್ರತ್ಯೇಕವಾಗಿ ದಾವಣಗೆರೆ ಜಿಲ್ಲಾ ಮುಖಂಡರ ಬಿಜೆಪಿ ನಿಯೋಗ ಭೇಟಿ ಮಾಡಿದ್ದು, ಜಿ.ಎಂ ಸಿದ್ದೇಶ್ವರ್​ಗೆ ಟಿಕೆಟ್ ಕೊಡಬಾರದು ಎಂದು ಮನವರಿಕೆ ಮಾಡಿಕೊಟ್ಟಿದೆ. ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ಮಾಜಿ ಶಾಸಕ ಗುರುಸಿದ್ದನ ಗೌಡರ್, ಮಾಜಿ ವಿಧಾನಪರಿಷತ್ ಸದಸ್ಯ ಡಾ.ಶಿವಯೋಗಿ ಸ್ವಾಮಿ, ಮುಖಂಡರಾದ ಮಾಡಾಳು ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ್, ಅಜಯ್‍ಕುಮಾರ್ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರು ಟಿಕೆಟ್ ನೀಡದಿರಲು ಆಗ್ರಹಿಸಿದ್ದಾರೆ.

ಮೊದಲು ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲಿ ಬಿಎಸ್​ವೈ ಅವರನ್ನು ಭೇಟಿ ಮಾಡಿದ ನಿಯೋಗ, ಸಿದ್ದೇಶ್ವರ್ ಅವರಿಗೆ ಏಕೆ ಟಿಕೆಟ್ ನೀಡಬಾರದು ಎಂಬುದನ್ನು ಸವಿಸ್ತಾರವಾಗಿ ವಿವರಿಸಿ ಮನವರಿಕೆ ಮಾಡಿ ಕೊಟ್ಟಿದೆ. ಜಿಲ್ಲೆಯಲ್ಲಿ ಸಿದ್ದೇಶ್ವರ್ ಸ್ಪರ್ಧೆಗೆ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲೂ ಕಾರ್ಯಕರ್ತರ ವಿರೋಧವಿದೆ. ನಾಲ್ಕು ಬಾರಿ ಗೆದಿದ್ದರೂ ಜಿಲ್ಲೆಯನ್ನು ಅಭಿವೃದ್ಧಿಪಡಿಸಿಲ್ಲ ಎಂಬ ಆರೋಪವಿದೆ. ಕಾರ್ಯಕರ್ತರನ್ನು ವಿಶ್ವಾಸಕ್ಕೂ ತೆಗೆದುಕೊಂಡಿಲ್ಲ. ಹೀಗಾಗಿ ಈ ಬಾರಿ ಅವರಿಗೆ ಟಿಕೆಟ್ ನೀಡಬಾರದು. ಒಂದು ವೇಳೆ ಅವರಿಗೆ ಟಿಕೆಟ್ ನೀಡಿದರೆ ಸೋಲುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದೇಶ್ವರ್ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡದೇ ಕೆಲವು ಕಡೆ ಪಕ್ಷದ ಅಧಿಕೃತ ಅಭ್ಯರ್ಥಿಗಳ ಸೋಲಿಗೂ ಕಾರಣ ಕರ್ತರಾಗಿದ್ದಾರೆ. ಅವರ ಸ್ಪರ್ಧೆಗೆ ಎಲ್ಲೆಡೆ ವಿರೋಧ ಇರುವುದರಿಂದ ಯಾವುದೇ ಕಾರಣಕ್ಕೂ ಟಿಕೆಟ್ ಕೊಡಬಾರದು ಎಂದು ಹಕ್ಕೋತ್ತಾಯ ಮಂಡಿಸಲಾಗಿದೆ.

ನಂತರ ಮಧ್ಯಾಹ್ನ ಬಿ.ವೈ ವಿಜಯೇಂದ್ರ ಅವರನ್ನು ಭೇಟಿ ಮಾಡಿದ ನಿಯೋಗವು, ಸಿದ್ದೇಶ್ವರ್​ಗೆ ಟಿಕೆಟ್ ನೀಡಲು ತೀವ್ರ ವಿರೋಧ ವ್ಯಕ್ತಪಡಿಸಿತು. ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮುಂಬರುವ ಚುನಾವಣೆಯಲ್ಲಿ ಸಮೀಕ್ಷೆ ನಡೆಸಿ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕು ಎಂದು ನಿಯೋಗ ಮನವಿ ಮಾಡಿಕೊಂಡಿದೆ. ಮನವಿ ಪತ್ರ ಸ್ವೀಕರಿಸಿದ ವಿಜಯೇಂದ್ರ, ಕಾರ್ಯಕರ್ತರು ಮತ್ತು ಮುಖಂಡರ ಒತ್ತಾಸೆಯಂತೆ ಪಕ್ಷದ ವತಿಯಿಂದ ಸಮೀಕ್ಷೆ ನಡೆಸುತ್ತೇವೆ. ಆ ಸಮೀಕ್ಷೆಯಲ್ಲಿ ಯಾರ ಪರವಾಗಿ ಹೆಚ್ಚಿನ ಒಲವು ತೋರುತ್ತಾರೋ ಅವರಿಗೆ ಟಿಕೆಟ್ ನೀಡುವಂತೆ ಪಕ್ಷದ ಚುನಾವಣಾ ಸಮಿತಿಗೆ ರಾಜ್ಯ ಘಟಕ ಶಿಫಾರಸು ಮಾಡಲಿದೆ. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಬೇಕು. ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲೂ ಸಮೀಕ್ಷೆ ಆಧಾರದ ಮೇಲೆಯೇ ಟಿಕೆಟ್ ನೀಡಲಾಗುತ್ತದೆ. ಕಾರ್ಯಕರ್ತರು ಯಾರಿಗೆ ಹೆಚ್ಚಿನ ಒಲವು ತೋರುತ್ತಾರೆಯೇ ಅವರ ಆಶಯದಂತೆ ಪಕ್ಷ ನಡೆದುಕೊಳ್ಳಲಿದೆ ಎಂದು ಭರವಸೆ ನೀಡಿದರು.

ಎಂ.ಪಿ ರೇಣುಕಾಚಾರ್ಯ ಹೇಳಿದ್ದೇನು? :ನಿಯೋಗದೊಂದಿಗೆ ಆಗಮಿಸಿದ್ದ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಮಾತನಾಡಿ, ದಾವಣಗೆರೆಯಲ್ಲಿ ಈ ಬಾರಿ ಸಮೀಕ್ಷೆ ನಡೆಸಿ ಟಿಕೆಟ್ ನೀಡಬೇಕು ಎಂಬುದು ಇಡೀ ಜಿಲ್ಲೆಯ ಕಾರ್ಯಕರ್ತರ ಒತ್ತಾಸೆಯಾಗಿದೆ. ನಾವು ಯಾರ ಪರವಾಗಿಯೂ ಆಗಲಿ, ಇಲ್ಲವೇ ವಿರೋಧವಾಗಿಯೂ ಇಲ್ಲ. ಕಾರ್ಯಕರ್ತರ ಅಭಿಪ್ರಾಯದಂತೆ ನಡೆದುಕೊಳ್ಳಬೇಕು. ಜಿಲ್ಲೆಯ ವಾಸ್ತವ ಸ್ಥಿತಿ ಏನಿದೆಯೋ ಅದನ್ನು ನಮ್ಮ ನಾಯಕರಿಗೆ ಮನವರಿಕೆ ಮಾಡಿದ್ದೇವೆ. ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.

ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕು ಎಂಬುದು ಕಾರ್ಯಕರ್ತರ ಒತ್ತಾಸೆ. ಅದರಲ್ಲೂ ಬಿ.ವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ಎಲ್ಲೆಡೆ ಕಾರ್ಯಕರ್ತರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ದಾವಣಗೆರೆಯಲ್ಲಿ ಆರು ಬಾರಿ ಬಿಜೆಪಿ ಗೆದ್ದಿದೆ. ಈ ಬಾರಿಯೂ ನಮ್ಮ ಪಕ್ಷ ಗೆಲ್ಲಬೇಕು. ಪ್ರಧಾನಿ ನರೇಂದ್ರ ಮೋದಿ ಅವರು 3ನೇ ಬಾರಿಗೆ ಅಧಿಕಾರಕ್ಕೆ ಬರಬೇಕು ಎಂದರೆ ಜಿಲ್ಲೆಯಲ್ಲಿ ಬಿಜೆಪಿ ಬಾವುಟ ಹಾರಲೇಬೇಕು. ಕಾರ್ಯಕರ್ತರು ಒಗ್ಗೂಡಿ ಗೆಲುವಿಗೆ ಶ್ರಮಿಸಬೇಕು ಎಂದು ರೇಣುಕಾಚಾರ್ಯ ಕರೆ ಕೊಟ್ಟರು.

ಕಳೆದ ವಿಧಾನಸಭೆ ಚುನಾವಣೆ ವೇಳೆ ಬೇರೇ ಬೇರೆ ಕಾರಣಗಳಿಂದ ಪಕ್ಷಕ್ಕೆ ಹಿನ್ನಡೆಯಾಗಿರಬಹುದು. ಕಾರ್ಯಕರ್ತರು, ಯುವ ಮತದಾರರು ಸೇರಿದಂತೆ ಮತ್ತಿತರರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಹೀಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸುವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು. ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದರು.

ಇದನ್ನೂ ಓದಿ :'ನನ್ನ ಸ್ನೇಹ ಬಳಗದಲ್ಲೇ ನನಗೆ ಲೋಕಸಭೆ ಟಿಕೆಟ್​ ತಪ್ಪಿಸಲು ಹೊಂಚು'

ABOUT THE AUTHOR

...view details