ಕರ್ನಾಟಕ

karnataka

ಜೈಲಲಿದ್ದು ಬಂದರೂ ಬದಲಾಗದ ವ್ಯಕ್ತಿ: ಎರಡನೇ ಬಾರಿ ಗಾಂಜಾ ಮಾರಾಟ ಸಾಬೀತಾಗಿ 6 ವರ್ಷ ಕಠಿಣ ಶಿಕ್ಷೆ

By ETV Bharat Karnataka Team

Published : Mar 3, 2024, 8:06 PM IST

ಎರಡನೇ ಬಾರಿ ಗಾಂಜಾ ಮಾರಾಟ ಸಾಬೀತಾಗಿದ್ದರಿಂದ ಆರೋಪಿಗೆ ಉತ್ತರಕನ್ನಡ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ 6 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ

ಕಾರವಾರ (ಉತ್ತರ ಕನ್ನಡ) : ಗಾಂಜಾ ಮಾರಾಟ ಸಂಬಂಧ ಒಮ್ಮೆ ಜೈಲು ಶಿಕ್ಷೆ ಅನುಭವಿಸಿದ ಬಳಿಕವೂ ಮತ್ತೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೋರ್ವನ ಕೃತ್ಯ ಸಾಬೀತಾದ ಹಿನ್ನೆಲೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ 6 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.

ದಾಂಡೇಲಿ ಮೂಲದ ಮುಕ್ತುಮಸಾಬ್ ರುಸ್ತುಮಸಾಬ್ ಗಡದ ಶಿಕ್ಷೆಗೊಳಗಾದ ಅಪರಾಧಿ. ಈತ 2018ರಲ್ಲಿ ತನ್ನ ರಿಕ್ಷಾ ಮೂಲಕ 11 ಕೆಜಿ ಗಾಂಜಾವನ್ನು ಶಿರಸಿಗೆ ಕೊಂಡೊಯ್ಯೊತ್ತಿದ್ದಾಗ ವಶಕ್ಕೆ ಪಡೆಯಲಾಗಿತ್ತು. ಅಲ್ಲದೆ ಮೊಬೈಲ್ ಹಾಗೂ 35,830 ರೂ. ಹಣ ಕೂಡ ವಶಕ್ಕೆ ಪಡೆದ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಳಿಕ ವಿಚಾರಣೆ ನಡೆಸಿ, ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಈ ಕುರಿತು ಸುದೀರ್ಘ ವಿಚಾರಣೆ ಬಳಿಕ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಆರೋಪಿತನು ಈ ಹಿಂದೆ ಸಹ ಇದೇ ಅಪರಾಧಕ್ಕೆ ಸಜೆ ಅನುಭವಿಸಿದ್ದರೂ ಸಹ ಪುನಃ ಈ ಅಪರಾಧ ಎಸಗಿದ್ದಾನೆ. ಹಾಗಾಗಿ ಈತ ರೂಢಿಗತ ಅಪರಾಧಿ ಎನ್ನುವುದು ಕಂಡು ಬರುತ್ತದೆ ಎಂದು ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಆರೋಪಿತನಿಗೆ 06 ವರ್ಷಗಳ ಕಠಿಣ ಸಜೆ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

ದಂಡ ಪಾವತಿ ಮಾಡಲು ತಪ್ಪಿದಲ್ಲಿ ಆ ಬಗ್ಗೆ ಆರೋಪಿಯು ಹೆಚ್ಚುವರಿಯಾಗಿ ಒಂದು ವರ್ಷ ಕಠಿಣ ಸಜೆ ಅನುಭವಿಸುವಂತೆ ಆದೇಶ ಮಾಡಿದ್ದಾರೆ. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕಿ ತನುಜಾ ಬಿ. ಹೊಸಪಟ್ಟಣ ವಾದ ಮಂಡಿಸಿದ್ದರು.

ಇದನ್ನೂ ಓದಿ :ಮಂಗಳೂರು: 120 ಕೆ.ಜಿ ಗಾಂಜಾ ಸಾಗಾಟ; ಇಬ್ಬರು ಆರೋಪಿಗಳು ಸೆರೆ

ABOUT THE AUTHOR

...view details