ಕರ್ನಾಟಕ

karnataka

ರಸ್ತೆ ಅಭಿವೃದ್ಧಿ ಯೋಜನೆ ಅಧಿಕಾರಿಗಳ ಕರ್ತವ್ಯ, ನ್ಯಾಯಾಲಯ ಹಸ್ತಕ್ಷೇಪ ಮಾಡಲ್ಲ: ಹೈಕೋರ್ಟ್ - Karnataka High Court

By ETV Bharat Karnataka Team

Published : Apr 30, 2024, 7:51 AM IST

ಅಧಿಕಾರಿಗಳ ನಿರ್ಧಾರಗಳಲ್ಲಿ ನ್ಯಾಯಾಲಯ ಸಾಮಾನ್ಯವಾಗಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ನಿರ್ಧಾರಗಳು ಏಕಪಕ್ಷೀಯವಾಗಿ ಅಥವಾ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಮಧ್ಯಪ್ರವೇಶ ಮಾಡಲಾಗುತ್ತದೆ ಎಂದು ಹೈಕೋರ್ಟ್ ಪೀಠ ಹೇಳಿದೆ.

Etv Bharat
Etv Bharat

ಬೆಂಗಳೂರು: ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ವಿನ್ಯಾಸ ಮತ್ತು ಯೋಜನೆಗಳನ್ನು ರೂಪಿಸುವುದು ಅಧಿಕಾರಶಾಹಿಯ ಕರ್ತವ್ಯ. ಅದರ ಮಾರ್ಗ (ಅಲೈನ್​​ಮೆಂಟ್) ಹೇಗಿರಬೇಕು ಎಂಬ ಬಗ್ಗೆ ಕೋರ್ಟ್‌ಗಳು ಯಾವುದೇ ರೀತಿಯ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಕೊಪ್ಪಳದ ಯಲಬುರ್ಗಾ ತಾಲೂಕಿನ ರೈತರು ರಾಷ್ಟ್ರೀಯ ಹೆದ್ದಾರಿಯನ್ನು ತಮ್ಮ ಜಮೀನಿನಲ್ಲಿ ಹಾದು ಹೋಗುವಂತೆ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಯಲಬುರ್ಗಾದ ಈರಣ್ಣ ಮತ್ತು ಸಿದ್ದರಾಮೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯಪೀಠ ಈ ಆದೇಶ ಮಾಡಿದೆ.

ಅರ್ಜಿದಾರರ ವಾದ ಆಲಿಸಿದ ಬಳಿಕ ನ್ಯಾಯಪೀಠ, ರಸ್ತೆಗಳ ಅಭಿವೃದ್ಧಿ, ಅವುಗಳ ಆಳ, ಅಗಲ, ಉದ್ದ ಮತ್ತು ಅದರ ವಿನ್ಯಾಸ ಸೇರಿ ಮತ್ತಿತರ ಅಂಶಗಳನ್ನು ಅಧಿಕಾರಶಾಹಿ ನಿರ್ಧರಿಸಲಿದೆ. ಮೂಲತಃ ಇದು ಅವರ ಕೆಲಸ ಕಾರ್ಯಗಳು. ಆ ಕ್ಷೇತ್ರ ನ್ಯಾಯಾಂಗಕ್ಕೆ ಅನ್ಯಲೋಕ (ಏಲಿಯನ್) ಇದ್ದಂತೆ. ನ್ಯಾಯಾಲಯ ಅಂತಹ ವಿಚಾರಗಳಲ್ಲಿ ಯಾವುದೇ ನಿರ್ದೇಶನಗಳನ್ನು ನೀಡಲಾಗದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅಲ್ಲದೇ, ಈ ರೀತಿಯ ವಿಚಾರಗಳಲ್ಲಿ ನ್ಯಾಯಾಲಯಗಳು ಸಾಮಾನ್ಯವಾಗಿ ಅಧಿಕಾರಿಗಳ ನಿರ್ಧಾರಗಳಲ್ಲಿ ಹಸ್ತಕ್ಷೇಪಗಳನ್ನು ಮಾಡುವುದಿಲ್ಲ. ಆದರೆ ಆ ನಿರ್ಧಾರಗಳು ಏಕ ಪಕ್ಷೀಯವಾಗಿ ಅಥವಾ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗಿದ್ದ ಸಂದರ್ಭಗಳಲ್ಲಿ ಮಾತ್ರ ಮಧ್ಯಪ್ರವೇಶ ಮಾಡುತ್ತದೆ ಎಂದು ಪೀಠ ಹೇಳಿದೆ.

ಇದನ್ನೂ ಓದಿ:ರಸ್ತೆ ಅಪಘಾತದಿಂದ ಯುವಕನ ವೈವಾಹಿಕ ಜೀವನಕ್ಕೂ ಕುತ್ತು: 38 ಲಕ್ಷ ಪರಿಹಾರಕ್ಕೆ ಹೈಕೋರ್ಟ್ ಆದೇಶ - High Court

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್​​ಹೆಚ್​​ ಎಐ) ತಮ್ಮ ಕೃಷಿ ಭೂಮಿಯಲ್ಲಿ ಹಾದು ಹೋಗುವಂತೆ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲು ಮುಂದಾಗಿದೆ. ಅದರ ಮಾರ್ಗವನ್ನು ತಪ್ಪಾಗಿ ಯೋಜಿಸಲಾಗಿದೆ ಮತ್ತು ಯೋಜನೆ ನಿಯಮಗಳಿಗೆ ವಿರುದ್ಧವಾಗಿದೆ. ಹಾಗಾಗಿ ರಸ್ತೆ ಅಭಿವೃದ್ಧಿ ಯೋಜನೆಯ ಮಾರ್ಗ ಬದಲಿಸುವಂತೆ ನಿರ್ದೇಶನ ನೀಡಬೇಕು ಎಂದು ತಮ್ಮ ಅರ್ಜಿಯಲ್ಲಿ ಅರ್ಜಿದಾರರು ಕೋರಿದ್ದರು.

ಇದನ್ನೂ ಓದಿ:ಚಲಿಸುತ್ತಿದ್ದ ರೈಲಿನಿಂದ ಪ್ರಯಾಣಿಕರು ಬಿದ್ದು ಮೃತಪಟ್ಟಲ್ಲಿ ರೈಲ್ವೆ ಇಲಾಖೆ ಪರಿಹಾರ ನೀಡಬೇಕು: ಹೈಕೋರ್ಟ್ - Railways Compensation

ABOUT THE AUTHOR

...view details