ಕರ್ನಾಟಕ

karnataka

ಸರ್ಕಾರಿ ಜಮೀನು ಒತ್ತುವರಿ ಮಾಡಿ ಶಾಲೆ ನಿರ್ಮಾಣ: ನೋಟಿಸ್ ಜಾರಿ ಮಾಡಿದ ಹೈಕೋರ್ಟ್ - High Court Notice

By ETV Bharat Karnataka Team

Published : Apr 4, 2024, 10:46 PM IST

ಸಾರ್ವಜನಿಕ ಉದ್ಧೇಶದ ಬಳಕೆಗೆ ಮೀಸಲಿಟ್ಟಿದ್ದ ಜಾಗವನ್ನು ಒತ್ತುವರಿ ಮಾಡಿ ಶಾಲೆ ನಿರ್ಮಾಣ ಮಾಡಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು.

Etv Bharat
Etv Bharat

ಬೆಂಗಳೂರು:ನಗರದ ಆನೇಕಲ್ ತಾಲೂಕು ತಿರುಪಾಳ್ಯ ಗ್ರಾಮದಲ್ಲಿ ಸಾರ್ವಜನಿಕ ಉದ್ದೇಶದ ಬಳಕೆಗೆ ಮೀಸಲಿಟ್ಟಿದ್ದ ಎರಡು ಎಕರೆ ಜಾಗವನ್ನು ಸೂರ್ಯೋದಯ ಎಜುಕೇಷನಲ್ ಟ್ರಸ್ಟ್ ಒತ್ತುವರಿ ಮಾಡಿ ಶಾಲೆ ನಿರ್ಮಾಣ ಮಾಡಿದೆ ಎಂಬ ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತಂತೆ ಸ್ಥಳೀಯ ಟಿ.ಎನ್.ಸಂಪಂಗಿ ರಾಮ ರೆಡ್ಡಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ಕೈಗೊಂಡಿತು.
ಅರ್ಜಿದಾರ ಪರ ವಕೀಲರ ವಾದ ಆಲಿಸಿದ ಬಳಿಕ ಪ್ರತಿವಾದಿಗಳಾದ ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಆನೇಕಲ್ ತಹಸೀಲ್ದಾರ್ ಮತ್ತು ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆ ಎನ್ನಲಾದ ತಿರುಪಾಳ್ಯ ನಿವಾಸಿ ಟಿ.ಕೃಷ್ಣ ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ತಿರುಪಾಳ್ಯ ಗ್ರಾಮದ ಸರ್ವೇ ನಂ 2/15ರಲ್ಲಿನ ಒಟ್ಟು 8 ಎಕರೆ 12 ಗುಂಟೆ ಜಮೀನನ್ನು ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ರಸ್ತೆ ಮತ್ತು ಮತ್ತು ಕೆಪಿಟಿಸಿಎಲ್‌ಗಾಗಿ ಸರ್ಕಾರ ಮೀಸಲಿಟ್ಟಿತ್ತು. ಅದರಲ್ಲಿ ಎರಡು ಎಕರೆ ಜಮೀನನ್ನು ಟಿ.ಕೃಷ್ಣ ಅವರು ಒತ್ತುವರಿ ಮಾಡಿದ್ದಾರೆ. ಸೂರ್ಯೋದಯ ಎಜುಕೇಷನ್ ಟ್ರಸ್ಟ್ ಹೆಸರಿನಡಿಯಲ್ಲಿ ಶಾಲಾ ಹಾಗೂ ದೇವಸ್ಥಾನ ಕಟ್ಟಡ ನಿರ್ಮಿಸಿ, ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಸರ್ಕಾರಿ ಜಮೀನು ಒತ್ತುವರಿ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಟಿ.ಕೃಷ್ಣ ಅವರಿಂದ ನಡೆದಿರುವ ಒತ್ತುವರಿ ತೆರವುಗೊಳಿಸಬೇಕು. ಒತ್ತುವರಿಯಾಗಿರುವ ಜಾಗದಲ್ಲಿ ಸೂರ್ಯೋದಯ ಎಜುಕೇಷನಲ್ ಟ್ರಸ್ಟ್ ವತಿಯಿಂದ ಶಾಲೆ ಮುಂದುವರಿಸದಂತೆ ಹಾಗೂ ಮುಂದಿನ ಯಾವುದೇ ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ನೀಡದಂತೆ ಸರ್ಕಾರಕ್ಕೆ ಆದೇಶಿಸಬೇಕು. ಒತ್ತುವರಿದಾರರ ವಿರುದ್ಧ ಕಾನೂನು ಕ್ರಮಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಇದನ್ನೂಓದಿ:ಪಾಲಿಕೆ ಮಾಲೀಕತ್ವದ ಕಟ್ಟಡಗಳಲ್ಲಿ ಜನಪ್ರತಿನಿಧಿಗಳ ಫೋಟೋ ಹಾಕಲು ಆಕ್ಷೇಪ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ - High Court

ABOUT THE AUTHOR

...view details