ಕರ್ನಾಟಕ

karnataka

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತ ರುದ್ರಯ್ಯ ಬಿಜೆಪಿ ಸೇರ್ಪಡೆ

By ETV Bharat Karnataka Team

Published : Jan 25, 2024, 8:57 AM IST

ಮಲ್ಲಿಕಾರ್ಜುನ ಖರ್ಗೆ ಆಪ್ತ ಹಾಗೂ ನಿವೃತ್ತ ಕೆಎಎಸ್ ಅಧಿಕಾರಿ ಆರ್ ರುದ್ರಯ್ಯ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Etv Bharatcongress-leader-mallikarjun-kharges-close-associate-rudraiah-joined-bjp
Etv Bharatಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತ ರುದ್ರಯ್ಯ ಬಿಜೆಪಿ ಸೇರ್ಪಡೆ

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತ , ನಿವೃತ್ತ ಕೆಎಎಸ್ ಅಧಿಕಾರಿ ಆರ್ ರುದ್ರಯ್ಯ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಆರ್ ಅಶೋಕ್ ಸಮ್ಮುಖದಲ್ಲಿ ರುದ್ರಯ್ಯ ಬಿಜೆಪಿ ಸೇರ್ಪಡೆಯಾದರು.

ಪಕ್ಷ ಸೇರ್ಪಡೆ ಮಾಡಿಕೊಂಡ ನಂತರ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಇಡೀ ದೇಶ ಇವತ್ತು ಅತ್ಯಂತ ಭರವಸೆಯಿಂದ ನರೇಂದ್ರ ಮೋದಿಜೀ ಅವರ ನಾಯಕತ್ವದ ಬಿಜೆಪಿ ಕಡೆ ನೋಡುತ್ತಿದೆ. ಈ ಬಾರಿ ದಕ್ಷಿಣ ಭಾರತದಲ್ಲಿ ಆಶ್ಚರ್ಯಕರ ಫಲಿತಾಂಶ ಬರಲಿದೆ. ಕರ್ನಾಟಕದಲ್ಲಿ 25 ಲೋಕಸಭಾ ಸೀಟು ಬಂದಿತ್ತು. ಅದನ್ನು ಮೀರಿ ಅದಕ್ಕಿಂತ ಹೆಚ್ಚು ಸೀಟುಗಳನ್ನು ಪಕ್ಷ ಗೆಲ್ಲಲಿದೆ. ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡಿನಲ್ಲೂ ಅತಿ ಹೆಚ್ಚು ಸೀಟು ಸಿಗಲಿದ್ದು, ಅಚ್ಚರಿಯ ಫಲಿತಾಂಶ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದರ ಪ್ರಭಾವ ಕರ್ನಾಟಕದಲ್ಲೂ ಆಗಿದೆ. ಎಸ್‍ಸಿ, ಎಸ್‍ಟಿ ಸೇರಿದಂತೆ ಕಾಂಗ್ರೆಸ್ ಮತ ಬ್ಯಾಂಕಿನಂತಿದ್ದ ಎಲ್ಲ ಸಮುದಾಯಗಳು ಭ್ರಮ ನಿರಸನಗೊಂಡಿವೆ. ದಲಿತರ ಅಭಿವೃದ್ಧಿಗಾಗಿ ಕೊಟ್ಟಿದ್ದ ಸುಮಾರು 11,300 ಕೋಟಿ ಹಣವನ್ನು ಗ್ಯಾರಂಟಿ ಸ್ಕೀಮಿಗೆ ಕೊಟ್ಟರಲ್ಲವೇ? ಆ ಮೂಲಕ ದಲಿತರನ್ನು ವಂಚಿತರನ್ನಾಗಿ ಮಾಡಿದ್ದೀರಲ್ಲವೇ ಎಂದು ಕೇಳಿದರು. ರುದ್ರಯ್ಯ ದಕ್ಷ ಅಧಿಕಾರಿಯಾಗಿ ಸೇವೆ ಮಾಡಿದವರು. ಜನಪ್ರೀತಿ ಪಡೆದವರು ಎಂದು ತಿಳಿಸಿದರು.

ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಬಿಜೆಪಿ ಮಾಡಿದ ಸಾಧನೆ, ಅಭಿವೃದ್ಧಿ ಕಾರ್ಯವನ್ನು ಜನರಿಗೆ ತಿಳಿಸಬೇಕು. ಆಗ ಮಾತ್ರ ನಾವು ಗೆಲ್ಲಲು ಸಾಧ್ಯ. ಡಾ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿದ್ದು, ಅವರ ಪಾರ್ಥಿವ ಶರೀರಕ್ಕೆ ದೆಹಲಿಯಲ್ಲಿ ಜಾಗ ಕೊಡದ ಕುರಿತು ಜನರಿಗೆ ತಿಳಿಸಬೇಕು. ಅಂಬೇಡ್ಕರರನ್ನು ಅವಮಾನ ಮಾಡಿದವರಿಗೆ ಗೌರವ ಕೊಟ್ಟದ್ದನ್ನು ತಿಳಿಸಬೇಕು. ಪಂಚಕ್ಷೇತ್ರ ಅಭಿವೃದ್ಧಿ, ಭಾರತರತ್ನ ನೀಡಿದ್ದನ್ನು ನೆನಪಿಸಬೇಕು. ಕಾಂಗ್ರೆಸ್ ಕುಟುಂಬವನ್ನೇ ನೆಚ್ಚಿಕೊಂಡ ಪಕ್ಷ. ಬಿಜೆಪಿ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡುವ ಪಕ್ಷ. ಕಾಂಗ್ರೆಸ್ಸಿಗೆ ಧಿಕ್ಕಾರ ಹಾಕಿದರೆ, ಆ ಪಕ್ಷದವರಿಗೆ ಪ್ರಶ್ನೆಗಳನ್ನು ಕೇಳಿದರೆ ಮಾತ್ರ ನಮ್ಮ ಬೆಳವಣಿಗೆ ಆಗುತ್ತದೆ ಎಂದು ಹೇಳಿದರು. ಈ ವೇಳೆ ಸಂಸದ ಎಸ್ ಮುನಿಸ್ವಾಮಿ, ರಾಯಚೂರು ಜಿಲ್ಲಾ ಅಧ್ಯಕ್ಷ ಸುರೇಶ್ ಪಾಟೀಲ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ವಿಧಾನಸಭೆ ಚುನಾವಣೆವರೆಗೂ ಕಾಂಗ್ರೆಸ್ ನಲ್ಲಿದ್ದ ರುದ್ರಯ್ಯ ಲಿಂಗಸುಗೂರು ಕ್ಷೇತ್ರದ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ತೊರೆದು ಕೆಆರ್‌ಪಿಪಿ ಪಕ್ಷ ಸೇರಿದ್ದರು. ಲಿಂಗಸುಗೂರು ಕ್ಷೇತ್ರದಿಂದ ಕೆಆರ್‌ಪಿಪಿಯಿಂದ ಸ್ಪರ್ಧಿಸಿ ಸೋತಿದ್ದ ರುದ್ರಯ್ಯ ಇದೀಗ ಬಿಜೆಪಿ ಸೇರಿದ್ದಾರೆ.

ಇದನ್ನೂ ಓದಿ:ಅಸ್ಸೋಂನಲ್ಲಿ ರಾಹುಲ್ ಗಾಂಧಿ ನ್ಯಾಯ ಯಾತ್ರೆಗೆ ಉದ್ದೇಶಪೂರ್ವಕ ತೊಂದರೆ ಕೊಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details