ಬೆಂಗಳೂರು:ವಿದ್ಯಾರ್ಥಿಗಳು, ಯುವಕರ ಭವಿಷ್ಯದೊಂದಿಗೆ ಕಾಂಗ್ರೆಸ್ ಸರ್ಕಾರ ಬೇಜವಾಬ್ದಾರಿಯುತವಾಗಿ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಆರೋಪಿಸಿದ್ದಾರೆ. ಶೈಕ್ಷಣಿಕ ವ್ಯವಸ್ಥೆ ಮೇಲೆ ಕಾಂಗ್ರೆಸ್ ಸರ್ಕಾರದಿಂದ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಸಂಕಷ್ಟ ಎದುರಿಸುವಂತಾಗಿದೆ ಎಂದು 8 ನಿದರ್ಶನಗಳನ್ನು ಉಲ್ಲೇಖಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
1. ಈ ವರ್ಷ 5,8,9ನೇ ತರಗತಿಯ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಗೊಂದಲ ಸೃಷ್ಟಿಸಿ ನ್ಯಾಯಾಲಯದಲ್ಲಿ ಏನನ್ನೂ ಮಾಡದ ಅಸಹಾಯಕತೆಯ ಪ್ರದರ್ಶನ, ಕಾಂಗ್ರೆಸ್ ಬೇಜವಾಬ್ದಾರಿ ಆಡಳಿತದ ಬಹುದೊಡ್ಡ ಕಪ್ಪು ಚುಕ್ಕೆಯಾಗಿ ಉಳಿಯಿತು. ಸುಪ್ರೀಂ ಕೋರ್ಟ್ ಕೂಡ ಛೀಮಾರಿ ಹಾಕಿ ತಡೆಯಾಜ್ಞೆ ಕೊಟ್ಟಿತು. ಆಗ ಆ ಎಳೆಯ ಮಕ್ಕಳು ಅನುಭವಿಸಿದ ಅಸಹಾಯಕತೆ, ಆ ಪೋಷಕರ ಆತಂಕಕ್ಕೆ ವಿಷಾದ ವ್ಯಕ್ತಪಡಿಸುವ ಕನಿಷ್ಠ ಸೌಜನ್ಯವನ್ನು ಸಂಬಂಧಪಟ್ಟವರು ತೋರಲಿಲ್ಲ.
2. ಅತ್ಯಂತ ವೈಜ್ಞಾನಿಕವಾಗಿ ರೂಪುಗೊಂಡ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇವಲ ರಾಜಕೀಯ ಮೇಲಾಟಕ್ಕೆ ರದ್ದುಪಡಿಸಿ ರಾಜ್ಯ ನೀತಿಯನ್ನು ತರುತ್ತೇವೆಂದು ಘೋಷಿಸಿದ ಸರ್ಕಾರ, ಈ ವರೆಗೆ ಏನು ಪ್ರಗತಿಯಾಗದೇ ಮೀನಾಮೇಷ ಎಣಿಸುತ್ತಿದೆ. ಪದವಿ ತರಗತಿಗಳಲ್ಲಿ ಓದುತ್ತಿರುವ ಅಸಂಖ್ಯಾತ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಅದೇ ರೀತಿ ಪ್ರಾಥಮಿಕ, ಪ್ರೌಢ ವಿದ್ಯಾರ್ಥಿಗಳ ಭವಿಷ್ಯವನ್ನು ಮಸುಕುಮಾಡುತ್ತಿದೆ. ಕೇಂದ್ರ ಪಠ್ಯಕ್ರಮದ ಶಾಲೆಗಳು, ಸ್ವಾಯತ್ತ ವಿಶ್ವವಿದ್ಯಾಲಯಗಳಿಗೆ ಒಂದು ನೀತಿಯಾದರೆ, ನಮ್ಮ ಸರ್ಕಾರಿ ಶಾಲೆಗಳು, ಕಾಲೇಜುಗಳ ಮಕ್ಕಳ ಕುರಿತು ಇನ್ನೊಂದು ನೀತಿ. ಇವರಿಗೆ ಕಾಳಜಿ ಎಲ್ಲಿದೆ? ಇದಕ್ಕೂ ತನಗೂ ಸಂಬಂಧವೇ ಇಲ್ಲವೆಂಬಂತೆ ತನ್ನದೇ ಗತಿಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಣ ನೀತಿ ಸಮಿತಿಗಳನ್ನು ಸಮರ್ಥವಾಗಿ ಮುನ್ನಡೆಸಲು ಯೋಚಿಸದ ಸ್ಥಿತಿಯಲ್ಲಿದೆ ಸರ್ಕಾರ.
3. ಸಿಇಟಿ ಪರೀಕ್ಷೆ ನಿರ್ವಹಣೆ ಇನ್ನೊಂದು ವ್ಯಥೆ. ವಿವಿಧ ವಿಷಯಗಳ 240 ಪ್ರಶ್ನೆಗಳಲ್ಲಿ 57 ಪ್ರಶ್ನೆಗಳು ಪಠ್ಯಕ್ರಮಕ್ಕೆ ಸೇರದವು. ವಿದ್ಯಾರ್ಥಿಗಳ ಆತಂಕದ ತೀವ್ರತೆಯನ್ನು ಇದರಲ್ಲಿಯೇ ಊಹಿಸಬಹುದು. ಪರೀಕ್ಷೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವಿಕೆ ಮುನ್ನ, ಪ್ರಕ್ರಿಯೆ ಹೇಗೆ ಇದೆ ಎನ್ನುವ ಪರಾಮರ್ಶೆ ಮಾಡದೇ ಸುಮ್ಮನೇ ಕೂತಲ್ಲಿ ಇಂತಹ ಫಲಿತಾಂಶಗಳು ಬಿಟ್ಟರೆ ಬೇರೇನು ಬರಲು ಸಾಧ್ಯ? ಒಂದು ಕಾಲದಲ್ಲಿ ರಾಷ್ಟ್ರಕ್ಕೆ ಮಾದರಿಯಾಗಿತ್ತು ಸಿಇಟಿ. 1998 ರಿಂದಲೂ ಈ ಸಿಇಟಿ ಪರೀಕ್ಷೆಗಳನ್ನು, ಅದರ ನಿರ್ವಹಣೆಯನ್ನು ನಾನು ಗಮನಿಸುತ್ತಲೇ ಇದ್ದೇನೆ. ಈ ಬಾರಿ ಇಷ್ಟು ಬೇಜವಾಬ್ದಾರಿ ನಿರ್ವಹಣೆ ಹಿಂದೆಂದೂ ಆಗಿರಲಿಲ್ಲ.
4. ಇದಕ್ಕೂ ಮುನ್ನ ಸಿಇಟಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳನ್ನು ದೂರ ದೂರದ ಪರೀಕ್ಷಾ ಕೇಂದ್ರಗಳಿಗೆ ಹೋಗುವ ಹಾಗೆ ಮಾಡಿ ಅವರಲ್ಲಿ ಆತಂಕ ಸೃಷ್ಟಿಸಿದ್ದು ಇದೇ ಕಾಂಗ್ರೆಸ್ ಸರ್ಕಾರದ್ದೇ ಆಗಿದೆ. ಈ ಮೂಲಕ ಪರೀಕ್ಷೆ ಅಕ್ರಮ ತಡೆಯುತ್ತೇವೆ ಎನ್ನುವ ನೆಪ ನೀಡಿದ್ದು ಅಧಿಕಾರಿಗಳು. ಮಕ್ಕಳ ಹಿತ ಕಾಯಬೇಕು, ನೀವು ಹಗಲು ರಾತ್ರಿ ಕೆಲಸ ನಿರ್ವಹಿಸಿ,ಮಕ್ಕಳಿಗೆ ತೊಂದರೆ ನೀಡಬೇಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡುವ ಸಚಿವರಿಲ್ಲದೇ ವಿದ್ಯಾರ್ಥಿಗಳು ಕಂಗಾಲು. ಪರೀಕ್ಷೆ ಅಕ್ರಮ ವಿದ್ಯಾರ್ಥಿಗಳದ್ದಲ್ಲ. ಅಕ್ರಮ ಎಸಗಿರುವುದು ಕೆಇಎ. ಇದಕ್ಕೆ ಸಂಬಂಧಪಟ್ಟ ಸಚಿವರು ಹೊಣೆ ಹೊರಬೇಕು.