ಕರ್ನಾಟಕ

karnataka

ಶಿವಮೊಗ್ಗ: ಮತದಾರರ ನಡುವೆ ಯುಗಾದಿ ಆಚರಿಸಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ, ಶಿವರಾಜ್​​ಕುಮಾರ್ - Geetha Shivarajkumar Ugadi

By ETV Bharat Karnataka Team

Published : Apr 9, 2024, 6:54 PM IST

Updated : Apr 9, 2024, 7:00 PM IST

'ನವ ಸಂವತ್ಸರದ ಸಂಭ್ರಮದಲ್ಲಿ ಗೀತಕ್ಕ ಶಿವಣ್ಣ ನಮ್ಮೊಂದಿಗೆ' ಎಂಬ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್ ಹಾಗೂ ಪತಿ, ನಟ ಶಿವರಾಜ್​ಕುಮಾರ್ ಭಾಗಿಯಾಗಿದ್ದರು.

Ugadi in Shivamogga
ಗೀತಾ, ಶಿವರಾಜ್​​ಕುಮಾರ್ ಯುಗಾದಿ ಆಚರಣೆ

ಗೀತಾ, ಶಿವರಾಜ್​​ಕುಮಾರ್ ಯುಗಾದಿ ಆಚರಣೆ

ಶಿವಮೊಗ್ಗ: ಈ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್ ಹಾಗೂ ಪತಿ, ನಟ ಶಿವರಾಜ್​ಕುಮಾರ್ ಮತದಾರರ ನಡುವೆ ಯುಗಾದಿ ಹಬ್ಬವನ್ನು ಆಚರಿಸಿ, ಮತಯಾಚನೆ ಮಾಡಿದರು. ಶಿವಮೊಗ್ಗ ವಿನೋಬನಗರದ ಶ್ರೀರಾಮ ನಗರ (ಬೆಂಕಿನಗರ) ನಿವಾಸಿಗಳಿಂದ ಆಯೋಜನೆಗೊಂಡಿದ್ದ 'ನವ ಸಂವತ್ಸರದ ಸಂಭ್ರಮದಲ್ಲಿ ಗೀತಕ್ಕ ಶಿವಣ್ಣ ನಮ್ಮೊಂದಿಗೆ' ಎಂಬ ಕಾರ್ಯಕ್ರಮದಲ್ಲಿ ದಂಪತಿ ಭಾಗಿಯಾದರು‌.

ಗೀತಾ, ಶಿವರಾಜ್​​ಕುಮಾರ್ ಯುಗಾದಿ ಆಚರಣೆ

ನಟ ಶಿವರಾಜ್​ಕುಮಾರ್ ದೀಪ ಬೆಳಗುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.‌ ಈ ವೇಳೆ, ಕಲಾವತಿ ಎಂಬುವವರು ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರ ಕೈಗೆ ಬೆಳ್ಳಿ ಖಡ್ಗ ಹಾಕುವ ಮೂಲಕ ಚುನಾವಣೆಯಲ್ಲಿ ಜಯಶಾಲಿಯಾಗಬೇಕು ಎಂದು ಹಾರೈಸಿದರು. ಕಲಾವತಿ, ಬಂಗಾರಪ್ಪನವರ ಅಭಿಮಾನಿ. ಬಂಗಾರಪ್ಪನವರ ಆಶ್ರಯ ಮನೆಯ ಫಲಾನುಭವಿಯೂ ಹೌದು. ನಂತರ ಬೆಂಕಿ ನಗರದ ಸುಮಾ ಹಾಗೂ ಅವರ ಮಗಳು, ಗೀತಾ ಶಿವರಾಜ್​ಕುಮಾರ್ ಅವರಿಗೆ ಠೇವಣಿ ಹಣ ನೀಡಿದರು. ನಂತರ ಮಹಿಳೆಯರು ಬೇವು - ಬೆಲ್ಲ ನೀಡಿ ಉಡಿ ತುಂಬಿದರು.

ಗೀತಾ, ಶಿವರಾಜ್​​ಕುಮಾರ್ ಯುಗಾದಿ ಆಚರಣೆ

ಕಾರ್ಯಕ್ರಮದಲ್ಲಿ ಮಾತನಾಡಿದ ಗೀತಾ ಶಿವರಾಜ್​ಕುಮಾರ್, ನಾನು ಶಿವಮೊಗ್ಗದಲ್ಲಿಯೇ ಹುಟ್ಟಿ ಬೆಳೆದಿದ್ದು. ನಮ್ಮ ತಂದೆ ಬಂಗಾರಪ್ಪ ಅವರ ಅಭಿಮಾನಿಗಳು ಇಲ್ಲಿ ಬಹಳ ಜನ ಇದ್ದೀರಿ. ತಂದೆ ಜಾರಿಗೆ ತಂದ ಯೋಜನೆಯಾದ ಆಶ್ರಯ ಮನೆ ಪಡೆದ ಕಲಾವತಿ ಅವರು ನಮಗೆ ಬೆಳ್ಳಿ ಖಡ್ಗ ಹಾಕಿದ್ದು ನನಗೆ ಬಹಳ ಸಂತೋಷವಾಗಿದೆ. ನನಗೆ ಚುನಾವಣಾ ಠೇವಣಿ ಇಡಲು ಹಣ ನೀಡಿದ ತಾಯಿ ಮತ್ತು ಮಗಳಿಗೆ ತುಂಬು ಹೃದಯದ ಧನ್ಯವಾದಗಳು. ನನಗೆ ಉಡಿ ತುಂಬುವ ಮೂಲಕ ನಿಮ್ಮ ಮನೆ ಮಗಳು ಎಂಬುದನ್ನು ನೀವೆಲ್ಲ ತೋರಿಸಿದ್ದೀರಿ. ನಾನು ಹೇಗೆ ಕೆಲಸ ಮಾಡುತ್ತೇನೆ ಎಂಬುದನ್ನು ನೋಡುವುದಕ್ಕಾದರೂ ನನ್ನನ್ನು ಒಮ್ಮೆ ಗೆಲ್ಲಿಸಿ. ನಾನು ನಿಮ್ಮ ಮನೆ ಮಗಳಾಗಿರುತ್ತೇನೆ ಎಂದು ಭರವಸೆ ನೀಡಿದರು.

ಗೀತಾ, ಶಿವರಾಜ್​​ಕುಮಾರ್ ಯುಗಾದಿ ಆಚರಣೆ

ನಂತರ ಮಾತನಾಡಿದ ನಟ ಶಿವರಾಜ್​ಕುಮಾರ್, ಯುಗಾದಿ ಎಂದರೆ ಹೊಸ ವರ್ಷ. ಹೊಸ ವರ್ಷ ಎಂದರೆ ಹೊಸತನ, ಹೊಸ ಅಲೆ. ಹೊಸ ವರ್ಷದಲ್ಲಿ ಹೊಸತನವನ್ನು ತರುವತ್ತ ಎಲ್ಲರೂ ಪ್ರಯತ್ನಿಸಬೇಕು. ಹಬ್ಬಗಳನ್ನು ನಾವು ಮನೆಯಲ್ಲಿಯೇ ಮಾಡುತ್ತೇವೆ. ಈಗ ನಿಮ್ಮ ಜೊತೆ ಆಚರಿಸುತ್ತಿರುವುದು ನಿಜಕ್ಕೂ ಸಂತೋಷವಾಗುತ್ತಿದೆ. ನಮ್ಮ ಮನೆಯಲ್ಲಿ ಮಕ್ಕಳು, ಸ್ನೇಹಿತರು ಬಂದು ಹಬ್ಬ ಆಚರಿಸುತ್ತಿದ್ದರು. ಇಲ್ಲೂ ಸಹ ನಮ್ಮ ಕುಟುಂಬದ ಸದಸ್ಯರ ಜೊತೆ ಹಬ್ಬ ಆಚರಿಸುತ್ತಿದ್ದೇನೆ‌.

ಇದನ್ನೂ ಓದಿ:'ಕರಾವಳಿ'ಯಲ್ಲಿ ಯಕ್ಷಗಾನ ಕಲಾವಿದನಾದ ಪ್ರಜ್ವಲ್ ದೇವರಾಜ್ - Prajwal Devaraj Karavali Poster

ಗೀತಾ ಅವರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ನೀವೆಲ್ಲ ಉಡಿ ತುಂಬಿದ್ದೀರಿ. ಇದೇ ರೀತಿ ಮೇ 7ರ ತನಕ ನಿಮ್ಮ ಆಶೀವಾದ ಗೀತಾ ಅವರ ಮೇಲಿರಲಿ. ನೀವೆಲ್ಲ ಮತ ಹಾಕಿ ಗೆಲ್ಲಿಸಿ. ಗೀತಾ ನಿಮ್ಮ ಧ್ವನಿಯಾಗಿರುತ್ತಾರೆ. ನಂತರ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಮತ್ತು ಜೋಗಿ ಚಿತ್ರದ ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು ಹಾಡನ್ನು ಹಾಡಿದರು. ಗೊಂಬೆ ಹೇಳುತೈತೆ ಹಾಡನ್ನೂ ಹಾಡಿದರು. ಶಿವಣ್ಣ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದಿದ್ದರು. ಕಾರ್ಯಕ್ರಮದ ನಂತರ ದಂಪತಿ ಬೆಂಕಿ ನಗರದ ನಿವಾಸಿಯಾದ ಗಿರೀಶ್ ಅವರ ಮನೆಯಲ್ಲಿ ಯುಗಾದಿಯ ಹಬ್ಬದೂಟವನ್ನು ಸವಿದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಯುಗಾದಿ ಸಂಭ್ರಮ: ಅದ್ದೂರಿಯಾಗಿ ಹಬ್ಬವನ್ನ ಸ್ವಾಗತಿಸಿದ ಸಿಲಿಕಾನ್ ಸಿಟಿ ಜನತೆ - Ugadi celebrations

ಈ ವೇಳೆ ಸೂಡ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ವಿಧಾನ ಪರಿಷತ್ ಮಾಜಿ ಅಧ್ಯಕ್ಷ ಆಯನೂರು ಮಂಜುನಾಥ, ಎಂ. ಶ್ರೀಕಾಂತ್, ಜಿ.ಡಿ. ಮಂಜುನಾಥ, ಪಾಲಾಕ್ಷಪ್ಪ, ಎಸ್.ಕೆ. ಮರಿಯಪ್ಪ, ವಿಶ್ವನಾಥ ಕಾಶಿ, ಕೆ. ರಂಗನಾಥ, ಗಿರೀಶ್ ಇದ್ದರು. ಇದೇ ವೇಳೆ ಗೀತಾ ಶಿವರಾಜ್​ಕುಮಾರ್ ಬಸವಕೇಂದ್ರಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ದರ್ಶನ ಪಡೆದುಕೊಂಡರು.

Last Updated : Apr 9, 2024, 7:00 PM IST

ABOUT THE AUTHOR

...view details