ಕರ್ನಾಟಕ

karnataka

'ಧರ್ಮದ ಹೆಸರಿನಲ್ಲಿ ದೇಶ ಹಾಗೂ ಸಮಾಜವನ್ನು ಒಡೆಯುವವರು ಬಿಜೆಪಿಯವರು': ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Feb 29, 2024, 1:32 PM IST

Updated : Feb 29, 2024, 1:40 PM IST

ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ, ಕೇಂದ್ರ ಸರ್ಕಾರದ ಅನುದಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ

ಬೆಂಗಳೂರು:'ಆರ್​ಎಸ್​ಎಸ್​ನವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಗೊತ್ತಿಲ್ಲ. ಸ್ವಾತಂತ್ರ್ಯ ಹೋರಾಟ ತೀವ್ರಗೊಂಡಿದ್ದಾಗಲೂ ಸಂಘ ಪರಿವಾರದ ಹೆಡ್ಗೇವಾರ್​​​ ಆಗಲಿ, ಗೋಲ್ವಾಲ್ಕರ್​ ಆಗಲಿ ಪಾಲ್ಗೊಂಡಿಲ್ಲ. ಬಿಜೆಪಿಯಿಂದ ನಾವು ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ. ಧರ್ಮದ ಹೆಸರಿನಲ್ಲಿ ದೇಶ ಹಾಗೂ ಸಮಾಜವನ್ನು ಒಡೆಯುವವರು ಬಿಜೆಪಿಯವರು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿ ಮಾತನಾಡಿದ ಅವರು, 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಎನ್ನುವುದು ಕೇವಲ ಬಾಯಿ ಮಾತು. ಇಂಥವರು ದೇಶವನ್ನು ಆಳಲು ಲಾಯಕ್ಕೇ?. ಜನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ವಿರೋಧ ಪಕ್ಷಕ್ಕೆ ಅಧಿಕಾರ ನೀಡುತ್ತಾರೆ' ಎಂದು ಭವಿಷ್ಯ ನುಡಿದರು.‌ 'ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಕಾಂಗ್ರೆಸ್ ಪರವಾಗಿದ್ದುದ್ದನ್ನು ಮರೆ ಮಾಚಲು ವಿಧಾನ ಸಭೆಯಲ್ಲಿ ಗದ್ದಲ ಎಬ್ಬಿಸಿದ್ದಾರೆ' ಎಂದು ಕಿಡಿಕಾರಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚರ್ಚೆಯಲ್ಲಿ 30% ಕೇಂದ್ರ ಸರ್ಕಾರವನ್ನು ಹೊಗಳಿದ್ದಾರೆ. ಜೆಡಿಎಸ್​ ಕೂಡ ಪೈಪೋಟಿಗೆ ಬಿದ್ದಂತೆ ಅದನ್ನೇ ಮಾಡಿದೆ. ಜೆಡಿಎಸ್ ತಮ್ಮ ಪಕ್ಷದ ಹೆಸರಿನಲ್ಲಿರುವ "ಎಸ್" ನ್ನು ತೆಗೆದುಹಾಕುವುದು ಉತ್ತಮ. ಏಕೆಂದರೆ ಅದು ಈಗ ಜಾತ್ಯತೀತವಾಗಿ ಉಳಿದಿಲ್ಲ ಎಂದು ಕುಟುಕಿದರು.

ನಮ್ಮ ಗ್ಯಾರಂಟಿ ಕದ್ದಿದ್ದಾರೆ : ಸಾಮಾಜಿಕ ಭದ್ರತಾ ಯೋಜನೆಯಡಿ ಕೇಂದ್ರ ಸರ್ಕಾರ 525 ಕೋಟಿ ರೂ. ನೀಡಿದರೆ, ರಾಜ್ಯ ಸರ್ಕಾರ 350 ಕೋಟಿ ನೀಡಿದೆ ಅದರ ಜೊತೆಗೆ 8,569 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಕೊಟ್ಟಿದೆ. ಒಟ್ಟಾರೆಯಾಗಿ 13,005 ಕೋಟಿ ರೂ.ಗಳು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬರುತ್ತದೆ ಅಷ್ಟೇ ಎಂದು ಮುಖ್ಯಮಂತ್ರಿಗಳು ವಿವರಿಸಿದರು. ಪಿಎಂ ಕೃಷಿ ಸಿಂಚಯಿ ಯೋಜನೆಯಡಿ 57% ಕೇಂದ್ರ ಸರ್ಕಾರ ಹಾಗೂ 33% ರಾಜ್ಯ ಸರ್ಕಾರ ನೀಡುತ್ತದೆ ಅದರ ಜೊತೆ ಶೇ 35 ರಷ್ಟು ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರ ನೀಡುತ್ತದೆ . ಪಿ ಎಂ ಆವಾಸ್ ಯೋಜನೆಯಡಿ 5-6 ಲಕ್ಷ ರೂ ರಾಜ್ಯ ಸರ್ಕಾರ ನೀಡಿದರೆ, ಕೇಂದ್ರ 1.50.ಲಕ್ಷ ರೂ. ನೀಡುತ್ತದೆ. ಅದರ ಜೊತೆಗೆ 1.38 ಲಕ್ಷ ಜಿಎಸ್ ಟಿ ಸೇರಿ ಒಂದು ಮನೆಗೆ ಕೇಂದ್ರ ಸರ್ಕಾರ ನೀಡುವುದು ಕೇವಲ 12 ಸಾವಿರ ರೂ ಮಾತ್ರ ಎಂದರು. ಇದರಲ್ಲಿ ನಮ್ಮ ಹೆಸರಿಲ್ಲ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಸಿಎಂ ಮೋದಿ ಗ್ಯಾರಂಟಿ ಎಂದು ನಮ್ಮ ಗ್ಯಾರಂಟಿ ಕದ್ದಿದ್ದಾರೆ ಎಂದು ಆರೋಪಿಸಿದರು.

ನಾಡಿನ ಜನರಿಗೆ ಮಾಡಿರುವ ಅನ್ಯಾಯವನ್ನು ಸಮರ್ಥನೆ ಮಾಡುವ ಬಿಜೆಪಿ ನಾಯಕರಿಗೆ ಮೋದಿ ಮುಂದೆ ನಾಡಿನ ಹಕ್ಕನ್ನು, ನಾಡಿನ ಜನರ ಪಾಲನ್ನು ಕೇಳುವ ತಾಕತ್ತಿಲ್ಲ. ರಾಜ್ಯದ ಸ್ವಂತ ತೆರಿಗೆ ಶೇ 78% ಇದ್ದರೆ 22% ಕೇಂದ್ರ ಸರ್ಕಾರದಿಂದ ಬರುತ್ತದೆ. ಅದೇ ಗುಜರಾತಿಗೆ 75% ಸ್ವಂತ ತೆರಿಗೆಯಿಂದ ಬಂದರೆ 17% ಕೇಂದ್ರದಿಂದ ಹಾಗೂ ಸಹಾಯಧನ ಸೇರಿ 25% ಕೇಂದ್ರದಿಂದ ಹೋಗುತ್ತಿದೆ. ಉತ್ತರ ಪ್ರದೇಶಕ್ಕೆ 48% ಸ್ವಂತ ತೆರಿಗೆ ಇದ್ದರೆ 32% ಹಾಗೂ 20% ಸೇರಿ ಒಟ್ಟು 52% ಕೇಂದ್ರದಿಂದ ಹೋಗುತ್ತಿದೆ. ಆದರೆ ನಮಗೆ ಮಾತ್ರ ಕೇವಲ ಕೇವಲ ಕೇವಲ ಶೇ22% ಕೊಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದಲ್ಲಿ ಸ್ವಂತ ತೆರಿಗೆ ಹೆಚ್ಚಿರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಶಿಕ್ಷಣ, ಆರೋಗ್ಯ, ಸೇತುವೆ, ಸಾಮಾಜಿಕ ಭದ್ರತೆ, ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಕೇಂದ್ರದಿಂದ ಪಾಲು ಬರುತ್ತದೆ. ರೈಲ್ವೇಗೆ ಜಮೀನು ಕೊಟ್ಟು ಯೋಜನಾ ವೆಚ್ಚದಲ್ಲಿ ಶೇ 50 ರಷ್ಟು ರಾಜ್ಯ ಸರ್ಕಾರ ಭರಿಸುತ್ತದೆ. ರೈಲ್ವೆ ಇಂದ ಬಂದ ಆದಾಯವನ್ನು ಅವರೇ ಇಟ್ಟುಕೊಳ್ಳುತ್ತಾರೆ. ಟೋಲ್ ಸಂಗ್ರಹದಿಂದ ಬರುವ ಆದಾಯವನ್ನೂ ನಮ್ಮ ನಾಡಿನಜನರಿಗೆ ವಾಪಾಸ್ ಕೊಡುವುದಿಲ್ಲ ಎಂದು ರಾಜ್ಯಗಳಿಗೆ ತೆರಿಗೆಯಲ್ಲಿ ಆಗುತ್ತಿರುವ ಪಟ್ಟಿಯನ್ನೇ ನೀಡಿದರು.

ಕೇಂದ್ರ ಸರ್ಕಾರದ ಬಜೆಟ್​ ಗಾತ್ರ 45 ಲಕ್ಷ ಕೋಟಿ ರೂ.ಗಳಿದ್ದರೂ ನಮಗೆ 50,257 ಕೋಟಿ ರೂ.ಗಳನ್ನು ಮಾತ್ರ ಕೊಟ್ಟಿದ್ದಾರೆ. ಅದರಲ್ಲಿ 13 ಸಾವಿರ ಕೋಟಿ ಕೇಂದ್ರ ಪುರಸ್ಕೃತ ಯೋಜನೆಗಳೂ ಸೇರಿವೆ. ಅದರಲ್ಲಿಯೂ ಕೇಂದ್ರದ ಪಾಲು ಕಡಿಮೆ ಇದ್ದು, ನಮ್ಮ ಪಾಲು ಹೆಚ್ಚಿದೆ. 2013 ಮಾರ್ಚ್​​ವರೆಗೆ 2,067 ಕಿಮೀ ರಸ್ತೆಗಳಾಗಿವೆ. ಬೇರೆ ರಾಜ್ಯಗಳಲ್ಲಿ ಇದಕ್ಕಿಂತ ಹೆಚ್ಚಾಗಿದ್ದು, ಇಲ್ಲಿಯೂ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಹೇಳಿದರು.

ಸರ್ವಶಿಕ್ಷಣ ಅಭಿಯಾನದಡಿ 702 ಕೋಟಿ ರೂ. ಕೇಂದ್ರ ಸರ್ಕಾರ ಕೊಟ್ಟರೆ ನಮ್ಮ ಪಾಲು 472 ಕೋಟಿ ರೂ. ,ಕರ್ನಾಟಕ ಸರ್ಕಾರ ಹೆಚ್ಚುವರಿಯಾಗಿ 1,528 ಕೋಟಿ ರೂ.ಗಳನ್ನು ನೀಡಿದೆ. ಮಧ್ಯಾಹ್ನದ ಬಿಸಿಯೂಟದಡಿ 594 ಕೋಟಿ ಕೇಂದ್ರ ಕೊಟ್ಟರೆ ರಾಜ್ಯ ಸರ್ಕಾರ 346 ಕೋಟಿ ರೂ. ನೀಡಿ ಹೆಚ್ಚುವರಿಯಾಗಿ 967 ಕೋಟಿ ರೂ.ಗಳನ್ನು ನೀಡಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 187 ಕೋಟಿ ರೂ.ಗಳನ್ನು ಕೇಂದ್ರ ನೀಡಿದ್ದರೆ 124 ಕೋಟಿ ರೂ ಜೊತೆಗೆ 624 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ನೀಡಿದೆ ಎಂದರು.

ಮುಂದುವರೆದು, 'ಏಳು ಕೋಟಿ ಕನ್ನಡಿಗರಿಗೆ ಆಗಿರುವ ಅನ್ಯಾಯವನ್ನು ಸಮರ್ಥಿಸಿಕೊಳ್ಳಲು ನಾಚಿಕೆಯಾಗುವುದಿಲ್ಲವೇ'. '1.40 ಸಾವಿರ ಕೋಟಿ ನಮ್ಮಿಂದ ಕೇಂದ್ರ ಸರ್ಕಾರಕ್ಕೆ ತೆರಿಗೆ ಹೋಗುತ್ತದೆ. 100 ರೂ.ತೆರಿಗೆ ಕೊಟ್ಟರೆ ನಮಗೆ 12 ರೂ.ಗಳು ಮಾತ್ರ ಕೇಂದ್ರದಿಂದ ತೆರಿಗೆ ಬರುತ್ತಿದೆ. ಇದನ್ನು ಸಮರ್ಥಿಸಿಕೊಳ್ಳಲು ಬಿಜೆಪಿಗೆ ನಾಚಿಕೆಯಾಗಬೇಕು' ಎಂದರು.

'14ನೇ ಹಣಕಾಸು ಆಯೋಗದಲ್ಲಿ 4.7 % ಹಾಗೂ 15ನೇ ಹಣಕಾಸು ಆಯೋಗದಲ್ಲಿ 3.64 % ರಾಜ್ಯಕ್ಕೆ ನಿಗದಿಯಾಗಿ ಶೇ 1.07% ರಷ್ಟು ಕಡಿಮೆಯಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ 2ನೇ ರಾಜ್ಯವಾಗಿರುವ ಕರ್ನಾಟಕಕ್ಕೆ ಅತಿ ಹೆಚ್ಚು ಅನ್ಯಾಯವಾಗಿದೆ. ಕೇಂದ್ರದ ಅನ್ಯಾಯವನ್ನು ಬೆಂಬಲಿಸುವ ಬಿಜೆಪಿಗೆ ಕನ್ನಡಿಗರ ಬಗ್ಗೆ ಕಾಳಜಿ ಇದೆಯೇ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಬಿಜೆಪಿಯವರದು ಸುಳ್ಳೇ ಅವರ ಮನೆದೇವರು. ಪ್ರಧಾನಿ ನರೇಂದ್ರ ಮೋದಿ ಹಾದಿಯಾಗಿ ಎಲ್ಲರೂ ಸುಳ್ಳಿನ ಕಾರ್ಖಾನೆ ಸೃಷ್ಟಿಸಿದ್ದಾರೆ' ಎಂದು ಟೀಕಿಸಿದರು. 'ನರೇಂದ್ರ ಮೋದಿಯವರು ಗುಜರಾತ್ ಮುಖ್ಯ ಮಂತ್ರಿಯಾಗಿದ್ದಾಗ ಗುಜರಾತಿನಿಂದ ತೆರಿಗೆ ಸಂಗ್ರಹಿಸಿಸಬೇಡಿ ಎಂದಿದ್ದರು. ನಾವು ಆ ಮಾತು ಹೇಳಿಲ್ಲ' ಎಂದರು.

ನಿಮ್ಮದು ನಿಶಕ್ತಿ-ಸಿಎಂ: ಮೋದಿ ಮೋದಿ, ಜೈ ಶ್ರೀ ರಾಮ್ ಎಂದು ಕೂಗು ಹಾಕುತ್ತಿದ್ದ ಪ್ರತಿಪಕ್ಷದವರನ್ನು ಉದ್ದೇಶಿಸಿ 'ನಿಮ್ಮದು ಕೇವಲ ನಿಶಕ್ತಿ. ಮೋದಿ ಹೆಸರಿನ ಮೇಲೆ ನಡೆಸುತ್ತಿದ್ದೀರಿ. ಸಮಾಜ ಒಡೆಯುವ ಕೆಲಸ ನಿಮ್ಮದು. ನಾವು "ಜೈ ಸೀತಾ ರಾಮ್" ಎನ್ನುತ್ತೇವೆ' ಎಂದು ಮುಖ್ಯ ಮಂತ್ರಿಗಳು ಘೋಷಣೆ ಕೂಗಿದರು.

'ಬಿಜೆಪಿಗೆ ತಲೆ ಖಾಲಿ, ಮೆದುಳು ಇಲ್ಲ. ರಾಮಾಯಾಣ ಮಹಾಭಾರತ ಓದಿಕೊಂಡೇ ಇಲ್ಲ ಎಂದು ತಿವಿದರು. ನಾನು ರಾಮನ ಭಕ್ತ. ನನ್ನ ಹೆಸರಿನಲ್ಲಿ ರಾಮ ಇದ್ದಾನೆ. ಮಹಾತ್ಮ ಗಾಂಧೀಜಿ ಅವರು ಹೇಳಿದ ಸೀತಾರಾಮ್ ಎಂದು ನಾವು ಹೇಳುತ್ತೇವೆ. ಆದರೆ ಘೋಡ್ಸೆ ಹೇಳಿದ ಶ್ರೀರಾಮ್ ಎಂದು ಬಿಜೆಪಿಯವರು ಹೇಳುತ್ತಾರೆ. ಅವರಿಗೆ ರಾಷ್ಟ್ರ ಭಕ್ತಿ ಇಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಜೊತೆ ಇದ್ದವರು ಬಿಜೆಪಿಯವರು. ದೇಶ ವಿಭಜನೆ ಮಾಡಿ ಮಾಡಬೇಕೆಂದು ಸಾವರ್ಕರ್ ಹೇಳಿದ್ದರು' ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಜಾತಿಗಣತಿ ವರದಿ ಸಲ್ಲಿಕೆಗೆ ಕ್ಷಣಗಣನೆ; ಇಂದೇ ಸಿಎಂ ಸಿದ್ದರಾಮಯ್ಯ ಕೈಸೇರಲಿದೆ ರಿಪೋರ್ಟ್​

Last Updated : Feb 29, 2024, 1:40 PM IST

ABOUT THE AUTHOR

...view details