ಕರ್ನಾಟಕ

karnataka

ಪ್ರತಿಧ್ವನಿಸಿದ ಪಾಕ್ ಜಿಂದಾಬಾದ್ ಘೋಷಣೆ ಆರೋಪ ಪ್ರಕರಣ: ಪರಿಷತ್​ನಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಜಟಾಪಟಿ

By ETV Bharat Karnataka Team

Published : Feb 28, 2024, 12:46 PM IST

Updated : Feb 28, 2024, 1:48 PM IST

ಇಂದಿನ ವಿಧಾನ ಪರಿಷತ್ ಕಲಾಪದಲ್ಲಿ ಪಾಕ್ ಜಿಂದಾಬಾದ್ ಘೋಷಣೆ ವಿಷಯ ಪ್ರತಿಧ್ವನಿಸಿದೆ. ಸದನದಲ್ಲಿ ಕೋಲಾಹಲ ಸೃಷ್ಟಿಯಾಗಿದ್ದು, ಬಿಜೆಪಿ- ಕಾಂಗ್ರೆಸ್ ನಡುವೆ ತೀವ್ರ ಜಟಾಪಟಿ ನಡೆದಿದೆ.

Clash between BJP and Congress  ಸದನದಲ್ಲಿ ಕೋಲಾಹಲ  ವಿಧಾನ ಪರಿಷತ್  ಬಿಜೆಪಿ ಕಾಂಗ್ರೆಸ್ ನಡುವೆ ಜಟಾಪಟಿ  ಕಾಂಗ್ರೆಸ್ Vs ಬಿಜೆಪಿ
ಪ್ರತಿಧ್ವನಿಸಿದ ಪಾಕ್ ಜಿಂದಾಬಾದ್ ಘೋಷಣೆ ವಿಷಯ: ಸದನದಲ್ಲಿ ಕೋಲಾಹಲ, ಬಿಜೆಪಿ- ಕಾಂಗ್ರೆಸ್ ನಡುವೆ ಜಟಾಪಟಿ

ಬೆಂಗಳೂರು:ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ- ಕಾಂಗ್ರೆಸ್ ಸದಸ್ಯರು ಏಕವಚನದಲ್ಲಿ ಬೈದಾಡಿಕೊಂಡು ಕೈಕೈ ಮಿಲಾಯಿಸುವ ಸನ್ನಿವೇಶ ಸೃಷ್ಟಿಯಾದ ಘಟನೆ ನಡೆಯಿತು. ಸದನದಲ್ಲಿ ಕೋಲಾಹಲ ಸೃಷ್ಟಿಯಾಗುತ್ತಿದ್ದಂತೆ ಕಲಾಪವನ್ನು ಮುಂದೂಡಿಕೆ ಮಾಡಲಾಯಿತು. ಆದರೂ ಸಭಾಪತಿ ಪೀಠದ ಎದುರು ಬಿಜೆಪಿ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ವಿಧಾನ ಪರಿಷತ್ ಕಲಾಪ ಮತ್ತೆ ಆರಂಭಗೊಳ್ಳುತ್ತಿದ್ದಂತೆ ಮಾತನಾಡಿದ ಪ್ರತಿಪಕ್ಷ ಮುಖ್ಯ ಸಚೇತಕ ರವಿಕುಮಾರ್, ''ನಿನ್ನೆ ವಿಧಾನಸೌಧದಲ್ಲಿ ನಡೆದ ಘಟನೆ ರಾಜ್ಯದ ಜನ ತಲೆ ತಗ್ಗಿಸುವಂತದ್ದು. ಮನೆ ಮನೆಗಳಲ್ಲಿ ಇದು ಚರ್ಚೆಯಾಗುತ್ತಿದೆ. ಹಿಂದೆಯೂ ಅನೇಕ ಕಡೆ ಈ ರೀತಿ ಆಗಿದೆ. ಆಗ ಕ್ರಮವೂ ಆಗಿದೆ. ಆದರೆ, ವಿಧಾನಸೌಧದಲ್ಲಿ ನಿನ್ನೆ ಈ ಘಟನೆ ನಡೆದಿದೆ. ನಾಸಿರ್ ಹುಸೇನ್ ಗೆದ್ದ ತಕ್ಷಣ ಅವರ ಪರ ಘೋಷಣೆ ಕೂಗಿ ನಂತರ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಹಾಕಿದ್ದಾರೆ. ಇದರ ವಿಡಿಯೋ ಇದೆ. ಆದರೂ ಆರೋಪಿಗಳನ್ನು ಬಂಧಿಸಿಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ನಾಸಿರ್ ಹುಸೇನ್ ಗೆದ್ದ ತಕ್ಷಣ ಈ ರೀತಿ ಘೋಷಣೆ ಬರಲು ಹೇಗೆ ಸಾಧ್ಯ? ಇದು ವಿಧಾನಸೌಧದಲ್ಲಿ ನಡೆದ ಘಟನೆ. 224+75 ಶಾಸಕರು, ನೂರಾರು ಸಿಬ್ಬಂದಿ ಇರುವ ಆಡಳಿತ ಶಕ್ತಿ ಕೇಂದ್ರದಲ್ಲಿ ನಡೆದಿದೆ'' ಎಂದು ಕಿಡಿಕಾರಿದರು.

ಘೋಷಣೆ ಕೂಗಿದವರನ್ನು ಯಾಕೆ ಇನ್ನೂ ಬಂಧಿಸಿಲ್ಲ- ರವಿಕುಮಾರ್ ಗರಂ:''ಸಂವಿಧಾನಕ್ಕೆ ಮಾಡಿದ ಅಪಮಾನ. ನಮ್ಮದು ಸಾರ್ವಭೌಮತ್ವ ರಾಷ್ಟ್ರ, ಒಕ್ಕೂಟ ವ್ಯವಸ್ಥೆಯಲ್ಲಿ, ಪ್ರಜಾಪ್ರಭುತ್ವದಲ್ಲಿ ನಾವಿದ್ದೇವೆ. ಅಂತಹ ಸ್ಥಳದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಲಾಗಿದೆ. ಈಗಾಗಲೇ ದೇಶ ವಿಭಜನೆ ಆಗಿದೆ. ಶತ್ರು ರಾಷ್ಟ್ರದ ಪರ ಜಯಕಾರ ಕೂಗಿರುವುದು ನಾಚಿಕೆಗೇಡಿನ ಕೆಲಸ, ದೇಶದ ಜನತೆ ತಲೆ ತಗ್ಗಿಸುವ ಕೆಲಸ ಆಗಿದೆ. ಘೋಷಣೆ ಕೂಗಿದವರು ಯಾವ ಸಂವಿಧಾನ ಓದಿದ್ದಾರೆ. ಭಾರತ ಸಂವಿಧಾನವೋ ಪಾಕಿಸ್ತಾನ ಸಂವಿಧಾನವೋ? ಅವರನ್ನು ಯಾಕೆ ಬಂಧಿಸಿಲ್ಲ. ಅವರು ಪಾಕ್ ಏಜೆಂಟರಾ? ಕೆಜಿ ಹಳ್ಳಿ, ಡಿಜೆ ಹಳ್ಳಿ ಪೊಲೀಸ್ ಠಾಣೆ ಸುಟ್ಟುಹಾಕಿದವರ ಕೇಸ್ ವಾಪಸ್ ಪಡೆಯಲಾಗಿದೆ. ಪಿಎಫ್ಐ ಮೇಲಿನ ಕೇಸ್ ವಾಪಸ್ ಪಡೆದಿದ್ದಾರೆ. ಹಾಗಾಗಿ ಧೈರ್ಯದಿಂದ ಇವರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸದಸ್ಯರಿಂದ ಆಕ್ಷೇಪ:ಕೆಜಿಹಳ್ಳಿ ಡಿಜೆ ಹಳ್ಳಿ ಕೇಸ್ ವಾಪಸ್ ಹೇಳಿಕೆ ವೇಳೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ವಿಷಯಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಸರ್ಕಾರದ ಪರ ವಕಾಲತ್ತು ವಹಿಸಿಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಂತರ ಸಭಾಪತಿ ಇವತ್ತಿನ ವಿಷಯಕ್ಕೆ ಸೀಮಿತವಾಗಿ ಮಾತನಾಡುವಂತೆ ಸೂಚಿಸಿದರು. ರಾಜಕೀಯ ಮಾತನಾಡಬೇಡಿ ಎಂದು ತಿಳಿಸಿದರು.

ಬಳಿಕ ಮಾತು ಮುಂದುವರೆಸಿದ ರವಿಕುಮಾರ್ ಅವರು, ''ಪಾಕ್ ಜಿಂದಾಬಾದ್ ಎನ್ನುವ ಘೋಷಣೆ ಕೂಗುವ ಧೈರ್ಯ ಇವರಿಗೆ ಹೇಗೆ ಬಂತು? ಹಿಂದೆ ಘೋಷಣೆ ಕೂಗಿದಾಗಲೇ ಹಿಡಿದು ಜೈಲಿಗೆ ಹಾಕಿದ್ದರೆ, ಕ್ರಮ ಕೈಗೊಂಡಿದ್ದರೆ ಇಂದು ಹೀಗಾಗುತ್ತಿರಲಿಲ್ಲ. ಇಂದು ಒಂದು ತೀರ್ಮಾನ ಆಗಬೇಕು. ಈ ರೀತಿ ಘೋಷಣೆ ಮಾಡಿದ ಯಾರೇ ಇರಲಿ ಅವರನ್ನು ಹಿಡಿದು ನೇಣಿಗೇರಿಸಬೇಕು. ಆದರೆ, ಸಚಿವ ಪ್ರಿಯಾಂಕ್ ಖರ್ಗೆ ಈ ರೀತಿ ಘೋಷಣೆ ಕೂಗಿದ ಘಟನೆ ನಡೆದಿಲ್ಲ ಎನ್ನುತ್ತಾರೆ. ವಿಧಾನಸೌಧ ಠಾಣೆ ಪೊಲೀಸರು ಸೊಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಆದರೆ, ಸರ್ಕಾರ ಕ್ರಮ ಕೈಗೊಂಡಿಲ್ಲ. ಈ ಸರ್ಕಾರ ವಜಾಗೊಳಿಸಬೇಕು. ಅವರಿಗೆ ಪಾಸ್ ಕೊಟ್ಟವರು ಯಾರು? ಅವರು ಹೇಗೆ ಒಳಗೆ ಬಂದರು? ಈ ಸರ್ಕಾರ ಮುಂದುವರೆಯಲು ಬಿಡಬಾರದು. ಈ ಸರ್ಕಾರ ವಜಾಗೊಳಿಸಬೇಕು. ಸಂವಿಧಾನ ವಿರೋಧಿ ಸರ್ಕಾರ. ಇವರಿಂದ ಆಡಳಿತ ನಡೆಸಲು ಸಾಧ್ಯವಿಲ್ಲ. ಹಾಗಾಗಿ ರಾಜ್ಯಪಾಲರು ಈ ಸರ್ಕಾರವನ್ನು ವಜಾಗೊಳಿಸಬೇಕು'' ಎಂದು ಆಗ್ರಹಿಸಿದರು.

ರವಿಕುಮಾರ್ ಬಳಸಿದ ಪದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತು. ಸರ್ಕಾರಕ್ಕೆ ಬಳಸಿದ ಪದವನ್ನು ಕಡತದಿಂದ ತೆಗೆಯಲು ಆಗ್ರಹಿಸಿದರು. ಸಭಾಪತಿ ಬಸವರಾಜ ಹೊರಟ್ಟಿ ರವಿಕುಮಾರ್ ಬಳಸಿದ ಒಂದು ಪದ ಕಡತದಿಂದ ತೆಗೆದುಹಾಕಿ ರೂಲಿಂಗ್ ನೀಡಿದರು. ಈ ವೇಳೆ ಪಾಯಿಂಟ್ ಆಫ್ ಆರ್ಡರ್ ಎತ್ತಿದ ಕಾಂಗ್ರೆಸ್ ಸದಸ್ಯ ಬಿಕೆ ಹರಿಪ್ರಸಾದ್ ಅವರು, ನಮ್ಮ ಸರ್ಕಾರವನ್ನು ದೇಶದ್ರೋಹಿ ಸರ್ಕಾರ ಎಂದಿದ್ದಾರೆ. ಕೇಂದ್ರದಲ್ಲಿ ಮೋದಿ ಇದ್ದಾರೆ. ಇವರಿಗೆ ತಾಕತ್ತಿದ್ದರೆ ರಾಜ್ಯ ಸರ್ಕಾರದ ಮೇಲೆ ದೇಶದ್ರೋಹಿ ಸರ್ಕಾರ ಎಂದು ಕೇಸ್ ಬುಕ್ ಮಾಡಿಸಲಿ'' ಸವಾಲು ಹಾಕಿದರು.

ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ:ಈ ವೇಳೆ ರವಿಕುಮಾರ್​ಗೆ ಬಗ್ಗೆ ಕಾಂಗ್ರೆಸ್​ ಸದಸ್ಯ ಅಬ್ದುಲ್​ ಜಬ್ಬಾರ್ ಏಕವಚನದ ಪದ ಪ್ರಯೋಗಿಸಿದರು. ಅಬ್ದುಲ್ ಜಬ್ಬಾರ್ ಮಾತಿಗೆ ರೊಚ್ಚಿಗೆದ್ದ ಬಿಜೆಪಿ ಸದಸ್ಯರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಕೈ ಕೈ ಮಿಲಾಯಿಸುವ ಹಂತಕ್ಕೆ ಘಟನೆ ಹೋಯಿತು. ಏಕವಚನ ಮಾತಾಡಿದರೆ ಸರಿ ಇರಲ್ಲ ಎಂದು ಎದ್ದು ಸದನದ ಬಾವಿಯತ್ತ ಹೋದ ರವಿಕುಮಾರ್​ಗೆ ತುಳಸಿ ಮುನಿರಾಜು ಗೌಡ ಸಾಥ್​ ನೀಡಿದರು.

ಇಬ್ಬರೂ ಮುನ್ನುಗ್ಗಿ ಹೋಗಿ ವಾರ್ನಿಂಗ್ ನೀಡಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರೂ ಬಾವಿಯತ್ತ ಬಂದರು. ಸಭಾಪತಿ ಪೀಠದ ಎದುರು ಕೈಕೈ ಮಿಲಾಯಿಸುವ ಹಂತಕ್ಕೆ ಘಟನೆ ಹೋಯಿತು. ಗದ್ದಲ ಹೆಚ್ಚಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಮತ್ತೆ 10 ನಿಮಿಷ ಮುಂದೂಡಿಕೆ ಮಾಡಿದರು. ಕಲಾಪ ಮುಂದೂಡಿಕೆ ನಂತರವೂ ಗದ್ದಲ ಮುಂದುವರಿಯಿತು. ಮಾರ್ಷಲ್​ಗಳು ಮಧ್ಯಪ್ರವೇಶಿಸಿ ಸದಸ್ಯರನ್ನು ನಿಯಂತ್ರಿಸಿದರು. ಈ ವೇಳೆ ಬಿಜೆಪಿ ಸದಸ್ಯರು ಜೈಶ್ರೀರಾಮ್ ಎಂದು ಘೋಷಣೆ ಕೂಗಿದರು.

ಇದನ್ನೂ ಓದಿ:ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ಪಾಕಿಸ್ತಾನದ ಪರ ಘೋಷಣೆ ಆರೋಪ ಪ್ರಕರಣ: 10 ನಿಮಿಷ ಸದನ ಮುಂದೂಡಿಕೆ

Last Updated : Feb 28, 2024, 1:48 PM IST

ABOUT THE AUTHOR

...view details