ಚಾಮರಾಜನಗರ:ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಲೋಕಸಭಾ ಚುನಾವಣೆ-2024ರ ಮರು ಮತದಾನ ಇಂದು ನಡೆದಿದ್ದು 71 ಮಂದಿ ಮಾತ್ರ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.
ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಮತಗಟ್ಟೆ 146 ರಲ್ಲಿ 528 ಮತದಾರರಿದ್ದು, ಮೆಂದಾರೆ ಗ್ರಾಮದ ಒಟ್ಟು 58 ಮಂದಿ ಹಾಗೂ ಇಂಡಿಗನತ್ತ ಗ್ರಾಮದ 13 ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಇದರಲ್ಲಿ ಪುರುಷರು 32 ಮಂದಿ, ಮಹಿಳೆಯರು 39 ಮಂದಿ ಮತದಾನ ಮಾಡಿದ್ದಾರೆ.
ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು ಎಎಸ್ಪಿ ಉದೇಶ್, ಸಹಾಯಕ ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ಅವರು ಮೊಕ್ಕಾಂ ಹೂಡಿದ್ದರು. ಗ್ರಾಮದಲ್ಲಿ ಟಾಂಟಾಂ ಮಾಡಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ಮತದಾನ ಮಾಡಲು ಜನರಿಗೆ ಧೈರ್ಯ ತುಂಬಲಾಗಿತ್ತು.
ಊರೇ ಖಾಲಿ: ಏ.26 ರಂದು ಮತದಾನ ಬಹಿಷ್ಕಾರ ಮಾಡಿದ ಬಳಿಕ ಗುಂಪು ಘರ್ಷಣೆ ನಡೆದು ಮತಗಟ್ಟೆಯನ್ನೇ ಧ್ವಂಸ ಮಾಡಿದ್ದರು. ಮತಗಟ್ಟೆ ಅಧಿಕಾರಿ ಹಾಗೂ ಹನೂರು ತಹಶಿಲ್ದಾರ್ ದೂರು ನೀಡಿದ ಮೇರೆಗೆ ಇಂಡಿಗನತ್ತ ಗ್ರಾಮದ 250 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈಗಾಗಲೇ 36 ಮಂದಿಯನ್ನು ಬಂಧಿಸಲಾಗಿದೆ.
ಇಂಡಿಗನತ್ತ ಗ್ರಾಮದಲ್ಲಿ ವೃದ್ಧರು ಹಾಗೂ ಬೆರಳಣಿಕೆ ಮಹಿಳೆಯರನ್ನು ಬಿಟ್ಟರೇ ಬಹುತೇಕ ಎಲ್ಲರೂ ಗ್ರಾಮ ತೊರೆದು ತಲೆ ಮರೆಸಿಕೊಂಡಿರುವುದರಿಂದ 528 ಮತದಾರರಲ್ಲಿ 71 ಮಂದಿ ಮಾತ್ರ ಮತದಾನ ಮಾಡಿದ್ದಾರೆ. ಗ್ರಾಮದ ಹಿರಿಯ ಪುಟ್ಟತಂಬಡಿ ಎಂಬವರು ಮಾತನಾಡಿ, ಗಲಾಟೆ ಹೇಗೆ ಆಯಿತೆಂದು ಗೊತ್ತಿಲ್ಲ, ಕೆಲ ಹುಡುಗರಿಂದ ಈ ಘರ್ಷಣೆ ಆಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ನಿಮ್ಮ ವೋಟು ಬೊಮ್ಮಾಯಿಯವರನ್ನು ಕೇಂದ್ರದಲ್ಲಿ ಮಂತ್ರಿ ಮಾಡುತ್ತೆ: ಸಂಸದ ಪ್ರತಾಪ್ ಸಿಂಹ - pratap simha