ಕರ್ನಾಟಕ

karnataka

ಕಾರು ಬಾಡಿಗೆಗೆ ಪಡೆದು ಗಿರವಿಗೆ ಇಟ್ಟ ಕಿಡಿಗೇಡಿಗಳು: ಮನನೊಂದ ಮಾಲೀಕ‌ ಆತ್ಮಹತ್ಯೆ - Suicide Case

By ETV Bharat Karnataka Team

Published : Apr 6, 2024, 10:26 AM IST

ಕಾರು ಬಾಡಿಗೆಗೆ ಪಡೆದವರಿಂದ ಮೋಸ ಆದ ಹಿನ್ನೆಲೆಯಲ್ಲಿ ಮನನೊಂದ ಮಾಲೀಕ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಮೈಸೂರಿನಲ್ಲಿ ಪ್ರಕರಣ ದಾಖಲಾಗಿದೆ.

car-owner-suicide
ಕಾರು ಮಾಲೀಕ‌ ಆತ್ಮಹತ್ಯೆ

ಮೈಸೂರು:ಕಾರು ಬಾಡಿಗೆಗೆ ಪಡೆದ ಕೆಲವರು ಬಳಿಕ ಗಿರವಿ ಇಟ್ಟ ಹಿನ್ನೆಲೆಯಲ್ಲಿ ಮನನೊಂದ ವಾಹನದ ಮಾಲೀಕ ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ರಾಜೀವ್ ನಗರದಲ್ಲಿ ನಡೆದಿದೆ. ಮುಜಾಹಿದ್ ಪಾಷಾ ಆತ್ಮಹತ್ಯೆ ಮಾಡಿಕೊಂಡವರು.

ಕಾರು ಬಾಡಿಗೆ ಕೊಡುವ ವೃತ್ತಿ ಮಾಡುತ್ತಿದ್ದ ಮುಜಾಹಿದ್​ ಪಾಷಾ ತಮ್ಮ ಇನ್ನೋವಾ ಕಾರನ್ನು ಅಸ್ಗರ್ ಪಾಷಾ ಹಾಗೂ ಸಲ್ಲು ಎಂಬುವರಿಗೆ ಬಾಡಿಗೆಗೆ ಕೊಟ್ಟಿದ್ದರು. ಅಲ್ಲದೇ, ಸ್ವಲ್ಪ ಸಾಲದ ಹಣವನ್ನೂ ಸಹ ನೀಡಿದ್ದರು. ಆದರೆ, ಬಾಡಿಗೆಗೆ ಪಡೆದ ಕಾರನ್ನು ಅಸ್ಗರ್ ಪಾಷಾ ಹಾಗೂ ಸಲ್ಲು ಅವರು ಗಿರವಿ ಇಟ್ಟಿದ್ದಾರೆ. ಜೊತೆಗೆ ಸಾಲದ ಹಣವನ್ನೂ ಸಹ ಹಿಂದಿರುಗಿಸದೇ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದರಿಂದ ತೀವ್ರ ಮನನೊಂದ ಮುಜಾಹಿದ್ ಪಾಷಾ ಪತ್ನಿಯೊಂದಿಗೆ ತಮಗಾದ ಮೋಸದ ಬಗ್ಗೆ ಹೇಳಿಕೊಂಡಿದ್ದಾರೆ. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಮಕ್ಕಳಿಗೆ ಬಟ್ಟೆ ತರುವಂತೆ ಪತ್ನಿಗೆ ಹಣ ಕೊಟ್ಟು ಕಳುಹಿಸಿದ ಮುಜಾಹಿದ್ ಪಾಷಾ, ತಮ್ಮ ಮನೆಯಲ್ಲಿಯೇ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಸಾವಿಗೆ ಅಸ್ಗರ್ ಪಾಷಾ ಹಾಗೂ ಸಲ್ಲು ಅವರೇ ಕಾರಣ ಎಂದು ಆರೋಪಿಸಿ ಪತ್ನಿ ಆಸ್ಮಾ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರತ್ಯೇಕ ಘಟನೆ - ಆಕಸ್ಮಿಕ ಬೆಂಕಿ ಅವಘಡ:ಮೈಸೂರಿನ ಹಾರ್ಡಿಂಗ್ ವೃತ್ತದ ಬಳಿ ಅರಮನೆ ಗೋಡೆಗೆ ಹೊಂದಿಕೊಂಡಂತಿರುವ ಖಾಲಿ ಮೈದಾನದಲ್ಲಿ ಶುಕ್ರವಾರ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿ ಬೆಂಕಿ ನಂದಿಸಿದ್ದಾರೆ. ಅರಮನೆ ಗೋಡೆಗೆ ಹೊಂದಿಕೊಂಡಂತೆ ಇರುವ ನರ್ಸರಿ ಆವರಣದಲ್ಲಿ ಬೆಳೆದಿರುವ ಒಣ ಹುಲ್ಲಿಗೆ ಬೆಂಕಿ ಹೊತ್ತಿ‌ಕೊಂಡು ಉರಿದಿದೆ. ಮಾಹಿತಿ ಅರಿತ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಿಯಂತ್ರಿಸಿದ್ದಾರೆ. ಸುಮಾರು 10ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಚಾರಿಟಬಲ್ ಟ್ರಸ್ಟ್​ಗಳಿಗೆ ಸಿಎಸ್ಆರ್ ದೇಣಿಗೆ ಕೊಡಿಸುವ ನೆಪದಲ್ಲಿ ವಂಚಿಸುತ್ತಿದ್ದ ನಾಲ್ವರ ಬಂಧನ

ABOUT THE AUTHOR

...view details